ವಿಜಯಪುರ: ಖ್ಯಾತ ಭಾಷಾ ತಜ್ಞ ಎ. ಕೆ. ರಾಮಾನುಜನ್ ಅವರ ಬಳಿಕ ಶರಣರೊಬ್ಬರ ವಚನಗಳನ್ನು ಇಂಗ್ಲೀಷ್‍ಗೆ ಭಾಷಾಂತರಿಸಿದ ಕೀರ್ತಿ ಡಾ. ಅರುಣ ಇನಾಮದಾರ ಅವರಿಗೆ ಸಲ್ಲುತ್ತದೆ ಎಂದು ಹಿರಿಯ ಪತ್ರಕರ್ತರಾದ ರಾಜುಅ ವಿಜಾಪುರ ಹೇಳಿದರು.
ವಿಜಯಪುರದ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ನಡೆದ ಡಾ. ಎಂ. ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ ಸಂಪುಟಗಳನ್ನು, ಬಿ. ಎಂ. ಪಾಟೀಲ್ ಅವರ ಚೇತನಕ್ಕೆ ಸಮರ್ಪಣೆ, ರೇಡಿಯನ್ಸ್ ಆಫ್ ವಚನ(ವಚನ ಪ್ರಭೆ) ಪುಸ್ತಕ ಬಿಡುಗಡೆ ಹಾಗೂ ಸೋಬಗಿನ ಸಂಕ್ರಾಂತಿ ಛಾಯಾಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಹುಭಾಷಾ ತಜ್ಞ ಎ. ಕೆ. ರಾಮಾನುಜನ್ ಷಿಕ್ಯಾಗೋ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮಾಡುವಾಗ ಬಸವಣ್ಣನವರ ವಚನಗಳನ್ನು ಇಂಗ್ಲೀಷಗೆ ಭಾಷಾಂತರ ಮಾಡಿದ್ದರು. ಅವರು ಇಂಗ್ಲೀಷ್ ಗೆ ಭಾಷಾಂತರಿಸಿದ ವಚನಗಳನ್ನು ಅಲ್ಲಿನ ಸ್ಥಳೀಯ ಸರಕಾರ ಬಸ್‍ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರ ಮಾಡುವ ಮೂಲಕ ವಚನಗಳ ಮಹತ್ವವನ್ನು ಸಾರಿತ್ತು. ಈಗ ಅಲ್ಲಮಪ್ರಭುಗಳ ವಚನಗಳನ್ನು ಡಾ. ಅರುಣ ಇನಾಮದಾರ ಇಂಗ್ಲಿಂಷ್ ಭಾಷೆಗೆ ಅನುವಾದ ಮಾಡಿದ್ದಾರೆ. ಅಲ್ಲಮಪ್ರಭುಗಳ ವಚನಗಳು ಓದಿದರೆ ಒಂದು ಅರ್ಥ ನೀಡುತ್ತವೆ. ಆದರೆ ಅವುಗಳ ಹಿಂದೆ ಕಾಣದೇ ಇರುವ ಅರ್ಥಗಳು ನೂರಾರು. ಇಂಥ ಕಠಿಣ ವಚನಗಳನ್ನು ಅನ್ಯಭಾಷಿಕರಿಗೆ ಸರಳವಾಗಿ ತಿಳಿಯುವಂತೆ ಭಾಷಾಂತರ ಮಾಡುವ ಮೂಲಕ ಇನಾಮದಾರ ಅವರು ಅಲ್ಲಮಪ್ರಭುಗಳ ವಚನಗಳ ಸಾರವನ್ನು ಜಗತ್ತಿಗೆ ಪಸರಿಸಲು ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಚನ ಪ್ರಭೆ ಪುಸ್ತಕದ ಭಾಷಾಂತರಕಾರ ಡಾ. ಅರುಣ ಇನಾಮದಾರ ಮಾತನಾಡಿ ಚಿಕ್ಕಂದಿನಿಂದ ತಮ್ಮ ತಾಯಿ-ತಂದೆ, ಬಂಧು-ಬಳಗದವರು ನೀಡಿದ ಸಂಸ್ಕಾರ ತಾವು ವಚನಗಳ ಕಡೆಗೆ ಆಕರ್ಷಿತರಾಗಲು ಕಾರಣವಾಗಿದೆ. ಅಲ್ಲಮಪ್ರಭುಗಳ ವಚನಗಳನ್ನು ಭಾಷಾಂತರಕ್ಕೆ ಕೈಗೆತ್ತಿಕೊಂಡಾಗ ಅವುಗಳ ಮೂಲ ಅರ್ಥವನ್ನು ಭಾಷಾಂತರಿಸುವ ಆತಂಕವಿತ್ತು. ಆಗ ಅನುವಾದಿತ ವಚನಗಳನ್ನು ಸ್ನೇಹಿತರಿಗೆ ಕಳುಹಿಸುತ್ತಿದ್ದೆ. ದಿ. ಡಾ. ಎಂ. ಎಸ್. ಬಿರಾದಾರ, ಡಾ. ಅರವಿಂದ ಪಾಟೀಲ, ಡಾ. ಆರ್. ಎಸ್. ಮುಧೋಳ ಮತ್ತು ಡಾ. ಮಹಾಂತೇಶ ಬಿರಾದಾರ ಅವರಿಗೆ ಕಳುಹಿಸಿದೆ. ಅವರಿಂದ ಸಿಕ್ಕ ಪ್ರೋತ್ಸಾಹ ಮತ್ತು ಸಹಕಾರದಿಂದ ಇಂದು ಈ ಪುಸ್ತಕ ಬಿಡುಗಡೆಯಾಗಿದೆ. ನನ್ನ ಈ ಕಾರ್ಯದ ಬಗ್ಗೆ ಡಾ. ಎಸ್. ಎಂ. ಜಾಮದಾರ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು ಹಾಗೂ ನನ್ನ ಧರ್ಮಪತ್ನಿ ಡಾ. ಶೈಲಜಾ ಇನಾಮದಾರ ಹಾಗೂ ಈ ಪುಸ್ತಕ ಪ್ರಕಟಣೆಗೆ ಕಾರಣರಾದ ಬಿ. ಎಲ್. ಡಿ. ಇ. ಸಂಸ್ಥೆಯ ಅಧ್ಯಕ್ಷ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ, ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಕೃಷ್ಣ ಕೋಲ್ಹಾರ ಕುಲಕರ್ಣಿ, ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ, ಸಂಯೋಜಕ ಡಾ. ವಿ. ಡಿ. ಐಹೊಳ್ಳಿ, ಎ. ಬಿ. ಬೂದಿಹಾಳ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಕೃಷ್ಣ ಕೋಲ್ಹಾರ ಕುಲಕರ್ಣಿ ಮಾತನಾಡಿ, ಅನ್ಯಭಾಷಗಳಲ್ಲಿರುವ ವಚನ ಸಾಹಿತ್ಯಗಳ ಸಮಗ್ರ ಸಂಪುಟ ಹೊರತರುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ. ಎಲ್. ಡಿ. ಇ ಅಧ್ಯಕ್ಷ ಮತ್ತು ಶಾಸಕ ಎಂ. ಬಿ. ಪಾಟೀಲ ಅವರು ಡಾ. ಎಂ. ಎಂ. ಕಲಬುರಗಿ ಸಮಗ್ರ ಸಾಹಿತ್ಯ ಸಂಪುಟಗಳನ್ನು ದಿ. ಬಿ. ಎಂ. ಪಾಟೀಲ ಅವರ ಚೇತನಕ್ಕೆ ಸಮರ್ಪಣೆ, ಮಾಡಿದರು. ಅಲ್ಲದೇ, ರೇಡಿಯನ್ಸ್ ಆಫ್ ವಚನ(ವಚನ ಪ್ರಭೆ) ಪುಸ್ತಕ ಬಿಡುಗಡೆ ಮಾಡಿದರು. ಅಲದೇ ಡಾ. ಅರುಣ ಇನಾಮದಾರ ಅವರನ್ನು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಸೋಬಗಿನ ಸಂಕ್ರಾಂತಿ ಛಾಯಾಚಿತ್ರ ಸ್ಪರ್ಧೆ ವಿಜೇತರಿಗೆ ಬಿ. ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ ಬಹುಮಾನ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಬಿ. ಎಲ್. ಡಿ. ಇ. ನಿರ್ದೇಶಕ ಮತ್ತು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ, ನಿರ್ದೇಶಕ ಸಂಗು ಸಜ್ಜನ, ಆಡಳಿತಾಧಿಕಾರಿ ಡಾ. ರಾಘವೇಂದ್ರ ಕುಲಕರ್ಣಿ, ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಆಸ್ಪತ್ರೆ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಗಳಾದ ಕೆ. ಜಿ. ಪೂಜಾರಿ, ಐ. ಎಸ್. ಕಾಳಪ್ಪನವರ, ಲೋಕಾಯುಕ್ತ ಡಿವೈಎಸ್ಪಿ ಬಸವರಾಜ ಎಲಿಗಾರ, ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ, ಡಾ.ಶೈಲಜಾ ಇನಾಮದಾರ ಉಪಸ್ಥಿತರಿದ್ದರು. ಡಾ. ಮಹಾಂತೇಶ ಬಿರಾದಾರ ಸ್ವಾಗತಿಸಿದರು. ಎ. ಬಿ. ಬೂದಿಹಾಳ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ಗೆಜ್ಜಿ ವಚನ ಗಾಯನ ನಡೆಸಿಕೊಟ್ಟರು, ಡಾ. ವಿ. ಡಿ. ಐಹೊಳ್ಳಿ ವಂದಿಸಿದರು.