ಹುಬ್ಬಳ್ಳಿ-ಧಾರವಾಡ ನಗರಗಳ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡುವೆ- ನೂತನ ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ರಾಜ್ಯದ ಎರಡನೇ ಅತಿದೊಡ್ಡ ನಗರವಾಗಿವೆ. ಈ ಅವಳಿ ನಗರಗಳ ಸಮಸ್ಯೆಗಳನ್ನು ಬಗೆಹರಿಸಿ, ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಾಗಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿರುವ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ತೆರಳುವ ಮುನ್ನ ವಿಮಾನ ನಿಲ್ದಾಣದ‌ ಬಳಿ ಮಾತನಾಡಿದರು.

ಹುಬ್ಬಳ್ಳಿ ನನಗೆ ಅತ್ಯಂತ ಪ್ರೀತಿಯ ಊರು. ನನ್ನ ಶೈಕ್ಷಣಿಕ ಜೀವನದ ಅಪಾರ ಪ್ರಮಾಣದ ಸ್ನೇಹಿತರ ಬಳಗ ಇಲ್ಲಿದೆ. ಮುಖ್ಯಮಂತ್ರಿಯಾಗಿ ಹುಬ್ಬಳ್ಳಿಗೆ ಆಗಮಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಪಕ್ಷ ಮತ್ತು ಕೇಂದ್ರದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಆರ್ಶೀವಾದದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದೇನೆ. ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಹಿರಿಯ ನಾಯಕರಾದ ಜಗದೀಶ ಶೆಟ್ಟರ್ ಹಾಗೂ ಅನೇಕ ಶಾಸಕ ಮಿತ್ರರು ಇಲ್ಲಿರುವುದರಿಂದ ಪಕ್ಷ ಇಲ್ಲಿ ಬಲಿಷ್ಠವಾಗಿದೆ. ಪಕ್ಷ ಹಾಗೂ ಪರಿವಾರದ ಹಿರಿಯರೊಂದಿಗೆ ಚರ್ಚೆ ಮಾಡಿ ಅವರ ಸಲಹೆ ಸೂಚನೆಗಳನ್ನು ಅನುಷ್ಠಾನ ಮಾಡಲು ಎಲ್ಲ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ತಿಳಿಸಿದರು.

ನಾಳೆ ಬೆಳಗ್ಗೆ ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್ ನಾಯಕರು, ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡುತ್ತೇನೆ. ಮುಂದಿನ ಎರಡು ಮೂರು ದಿನಗಳಲ್ಲಿ ಮತ್ತೆ ದೆಹಲಿಗೆ ತೆರಳಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸುತ್ತೇನೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಸಚಿವ ಸಂಪುಟ ಸೇರದಿರುವ ಕುರಿತು ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ಹೇಳಿದ್ದಾರೆ. ಆದರೂ, ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಈ ಕುರಿತು ಮಾತನಾಡುತ್ತೇನೆ. ರಾಜಕೀಯಕ್ಕೆ ಬರುವ ಮೊದಲಿನಿಂದಲೇ ನಾವಿಬ್ಬರೂ ಸ್ನೇಹಿತರು. ಅವರ ಬಗ್ಗೆ ಅಪಾರವಾದ ಅಭಿಮಾನ, ಪ್ರೀತಿ, ವಿಶ್ವಾಸ ಇದೆ. ಅವರೊಂದಿಗೆ ಮಾತನಾಡಿ ಅವರ ಬಯಕೆಯನ್ನು ತಿಳಿದುಕೊಂಡು ಪಕ್ಷದೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಅಮೃತ ದೇಸಾಯಿ, ಅರಬೈಲು ಶಿವರಾಮ ಹೆಬ್ಬಾರ, ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೋಲಿಸ್ ಆಯುಕ್ತ ಲಾಭುರಾಮ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ ಸೇರಿದಂತೆ ನಾನಾ ಮುಖಂಡರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌