ವಿಜಯಪುರ: ಪ್ರಾಣ ಹೋದರೂ ಪರವಾಗಿಲ್ಲ. ಯತ್ನಾಲನನ್ನು ಸಿಎಂ ಮಾಡಬಾರದು ಎಂದು ಮಾಜಿ ಸಿಎೞ ಬಿ. ಎಸ್. ಯಡಿಯೂರಪ್ಪ ಕಂಡಿಶನ್ ಹಾಕಿದ್ದರು. ಹೀಗಾಗಿ ನಾನು ಸಿಎಂ ಆಗುವುದನ್ನು ತಡೆಯಲು ಅನನುಭವಿಗಳಿಗೆ ಸಿಎಂ ಮಾಡಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗಡೌ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಾಣ ಹೋದರೂ ಪರವಾಗಿಲ್ಲ, ಯತ್ನಾಳನನ್ನು ಸಿಎಂ ಮಾಡಬಾರದು ಎಂದು ಬಿ. ಎಸ್. ಯಡಿಯೂರಪ್ಪ ಕಂಡಿಶನ್ ಹಾಕಿದ್ದರು. ಹೀಗಾಗಿ ತಾವು ಸಿಎಂ ಆಗಲಿಲ್ಲ ಎಂದು ಹೇಳಿದರು.
ಯತ್ನಾಳನನ್ನು ಮುಗಿಸಬೇಕು ಎಂದು ಯಾವನೋ ಅನನುಭವಿಯನ್ನು ತಂದ್ರೆ ಆಗುತ್ತಾ? ಎಂದು ಪ್ರಶ್ನಿಸಿದ ಅವರು, ಯತ್ನಾಳಗೆ ಇರುವಂತಹ ಸಿನಿಯಾರಿಟಿ ಬಿಜೆಪಿಯಲ್ಲಿ ಯಾರಿಗಾದರೂ ಇದೆಯಾ? ಅನಂತಕುಮಾರ, ಯಡಿಯೂರಪ್ಪ, ಈಶ್ವರಪ್ಪ ಬಿಟ್ಟರೆ ಬೇರೆ ಯಾರು ಹಿರಿಯರಿದ್ದಾರೆ? ನಾವು ವಾಜಪೇಯಿ ಸರಕಾರರದಲ್ಲಿ ಮಂತ್ರಿಯಾದವರು, ಐದು ಬಾರಿ ಆರಿಸಿ ಬಂದವರು ಎಂದು ಸ್ಪಷ್ಟಪಡಿಸಿದರು.
ಸಟಿವ ಸಂಪುಟ ವಿಸ್ತರಣೆಯಲ್ಲಿ ಪ್ರಾಮಾಣಿಕರನ್ನು, ಹಿಂದುತ್ವ ಉಳ್ಳವರನ್ನು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಶಕ್ತಿ ಇದ್ದವರನ್ನು ಸಚಿವರನ್ನಾಗಿ ಮಾಡಬೇಕು. ಮಂತ್ರಿಗಿರಿಗಾಗಿ ದೆಹಲಿಗೆ ಹೋಗಿ ಲಾಬಿ ಮಾಡುವ ಅವಶ್ಯಕತೆ ನನಗಿಲ್ಲ. ನನಗೆ ಹೈಕಮಾಂಡ್ ಮೇಲೆ ವಿಶ್ವಾಸವಿದೆ. ಯಡಿಯೂರಪ್ಪನವರು ಹೇಳಿದ್ದೇ ಎಲ್ಲವೂ ಆಗುವುದಿಲ್ಲ. ಅವರು ಹೇಳಿದ್ದೇ ಆಗುವುದಿದ್ದರೆ ಅವರನ್ನು ತೆಗೆಯುವ ಅವಶ್ಯಕತೆಯೂ ಇರಲಿಲ್ಲ. ಬಿ. ಎಸ್. ಯಡಿಯೂರಪ್ಪ ಅವರು ಹೇಳಿದವರನ್ನೇ ಮುಖ್ಯಮಂತ್ರಿ ಮಾಡಿದ್ದಾರೆ. ಸಚಿವ ಸಂಪುಟದಲ್ಲಿ ನಿಷ್ಠಾವಂತರು, ಪಕ್ಷದ ಕಾರ್ಯಕರ್ತರು, ಬಿಜೆಪಿ ಕಟ್ಟಿ ಬೆಳೆಸಿದವರು, ಹಿಂದುತ್ವ ಉಳ್ಳವರಿಗೆ ಅವಕಾಶ ನೀಡಬೇಕು ಎಂದು ತಾವು ಆಗ್ರಹಿಸುವುದಾಗಿ ಯತ್ನಾಳ ತಿಳಿಸಿದರು.
ಸಚಿವ ಸಂಪುಟದಲ್ಲಿ ವಿಜಯಪುರ ಜಿಲ್ಲೆಯನ್ನು ಕಡೆಗಣಿಸಿದ್ರೆ ಮುಂದಿನ ದಿನಗಳಲ್ಲಿ ಅದರ ಗಂಭೀರ ಪರಿಣಾಮ ಎದುರಾಗಲಿದೆ ಎಂದು ತಿಳಿಸಿದ ಅವರು, ಪಂಚಮಸಾಲಿ ಹೋರಾಟದಲ್ಲಿ ಯಡಿಯೂರಪ್ಪ ಮತ್ತು ನಿರಾಣಿಗೆ ಹಿನ್ನೆಡೆ ಆಯ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ಜಾತಿಗೂ ಇದಕ್ಕೂ ಸಂಭಂದವಿಲ್ಲ, ಅವರವರ ಜನಪ್ರಿಯತೆ, ಅನುಭವದ ಮೇಲೆ ಅಳೆಯಬೇಕು. ಅನುಭವ ಇಲ್ಲದವರನ್ನು ತಂದು ಏನೋ ಮಾಡಿದರೆ ಪಕ್ಷ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಯತ್ನಾಳ ಬಿಜೆಪಿ ಬಿಟ್ಟು ಹೋಗಿದ್ದರು ಎಂಬ ವಿಚಾರವನ್ನು ಕೆಲವರು ಪ್ರಸ್ತಾಪಿಸುತ್ತಾರೆ. ಯಡಿಯೂರಪ್ಪ ಬಿಜೆಪಿ ಬಿಟ್ಟು ಹೋಗಿರಲಿಲ್ಲವಾ? ಬೊಮ್ಮಾಯಿ ಮೂಲ ಬಿಜೆಪಿಗರಾ ಅಥವಾ ಆರ್ ಎಸ್ ಎಸ್ ನಲ್ಲಿ ಧ್ವಜ ಹಿಡಿದು ಪ್ರಣಾಮ ಮಾಡಿದ್ದಾರಾ? ಅದೆಲ್ಲಾ ನೆಪಮಾತ್ರ, ನೆಪದಿಂದ ಏನೂ ಅಗೋದಿಲ್ಲ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.
ಸ್ವಾಮೀಜಿಗಳ ವಿರುದ್ಧ ಹರಿಹಾಯ್ದ ಯತ್ನಾಳ
ಇದೇ ವೇಳೆ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಪರ ನಿಂತ ಮಠಾಧೀಶರ ವಿರುದ್ಧವೂ ವಾಗ್ದಾಳಿ ನಡೆಸಿದ ಯತ್ನಾಳ, ಮಠಾಧೀಶರನ್ನ ಹಿಡಿದು ಮಂತ್ರಿಯಾಗುವ ಪರಿಸ್ಥಿತಿ ಬಿಜೆಪಿಯ ಹಿರಿಯ ನಾಯಕರಿಗೆ ಬಂತಾ? ಬಿಜೆಪಿಯಲ್ಲಿ ಹೈಕಮಾಂಡ್ ಇಲ್ವಾ।? ಹಾಗಿದ್ದರೆ ದಿಲ್ಲಿಯ ಹೈಕಮಾಂಡ್ ಬಳಿ ಯಾಕೆ ಹೋಗ್ಬೇಕು? ಇಲ್ಲೆ ಚಿತ್ರದುರ್ಗ ಮಠ, ದಿಂಗಾಲೇಶ್ವರ ಮಠಕ್ಕೆ ಹೋಗಿ. ಮಠದಲ್ಲಿ ಕುಳಿತು ಸ್ವಾಮೀಜಿಗಳು ಬಿಜೆಪಿ ನಾಶವಾಗುತ್ತೆ ಅಂತಾರೇ. ಸ್ವಾಮೀಜಿಗಳು ಮಠದಲ್ಲಿ ಕುಳಿತು ಧರ್ಮ ಭೋದನೆ ಮಾಡಬೇಕು. ಲವ್ ಜಿಹಾದ್, ಗೋ ಹತ್ಯೆ ಬಗ್ಗೆ ಹೋರಾಟ ಮಾಡಬೇಕು. ಎರಡು ಮಕ್ಕಳಿದ್ದವರಿಗಷ್ಟೇ ಸಬ್ಸಿಡಿ ನೀಡಿ ಎಂದು ಆಗ್ರಹಿಸಿ ಹಾಗೂ ಮತಾಂತರದ ವಿರುದ್ಧ ಸ್ವಾಮೀಜಿಗಳು ಹೋರಾಟ ಮಾಡಲಿ ಎಂದು ಅವರು ಆಗ್ರಹಿಸಿದರು.
ಯಡಿಯೂರಪ್ಪ ಮನೆಯಲ್ಲಿ ಸ್ವಾಮೀಜಿಗಳು ಹಣದ ಹಂಚಿಕೆಯಲ್ಲೂ ಕಟ್ ಮಾಡಿ ತಿಂದಿದ್ದಾರೆ. ಒಬ್ಬ ಸ್ವಾಮೀಜಿ ಹಣ ಪಡೆದು ಅದರಲ್ಲಿ ಹಣ ಕಟ್ ಮಾಡಿಕೊಂಡು ತಿಂದಿದ್ದಾರೆ. ಈ ಹಿಂದೆ ವಿಜಯೇಂದ್ರಗೆ ರಾತ್ರಿ ವ್ಯವಸ್ಥೆ ಮಾಡುವವರಿಗೆ ನಿಗಮ ಮಂಡಳಿ ನೀಡಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ತಾಂಬೂಲ ಕೊಟ್ಟು ಕಾಂಗ್ರೆಸ್ ನವರನ್ನು ಕರೆದು ತಂದು ಸಿಎಂ ಆಗಿ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗುತ್ತೆ ಎಂದು ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.