ವಿಜಯಪುರ: ನೆರೆಯ ಮಹಾರಾಷ್ಟ್ರ ಮತ್ತು ಬೆಳಗಾವಿಯಲ್ಲಿ ಸುರಿದ ಧಾರಾಕಾರ ಮಲೆಯಿಂದಾಗಿ ಬಸವ ನಾಡು ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಷಯಕ್ಕೆ ನೀರಿನ ಒಳ ಮತ್ತು ಹೊರ ಹರಿವು ಮತ್ತಷ್ಟು ಹೆಚ್ಚಾಗಿದೆ.
ಕೃಷ್ಣಾ ನದಿಯಲ್ಲಿ ಭಾರಿ ಪ್ರಮಾಮದಲ್ಲಿ ನೀರು ಹರಿದು ಬರುತ್ತಿರುವುದರಿಂದ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಷಯದಿಂದ ಹೊರ ಹರಿವಿನ ಪ್ರಮಾಣವನ್ನು 4.20 ಲಕ್ಷ ಕ್ಯೂಸೆಕ್ ಗೆ ಹೆಚ್ಚಿಸಲಾಗಿದೆ. ಇದರಿಂದಾಗಿ ಅಚ್ಚುಕಟ್ಟು ಪ್ರದೇಶದ ಹತ್ತಾರು ಗ್ರಾಮಗಳ ಕೃಷಿ ಭೂಮಿ ಜಲಾವೃತವಾಗಿದೆ.
ಜಲಾಷಯಕ್ಕೆ ಈಗಲೂ 4.20 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಒಳಹರಿವಿನಷ್ಟೇ ಅಂದರೆ 4.20 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಜಲಾಷಯದಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿರುವುದರಿಂದ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ವಿಜಯಪುರ ಜಿಲ್ಲೆಯ ನಿಡಗುಂದಿ ಮತ್ತು ಮುದ್ದೇಬಿಹಾಳ ತಾಲೂಕುಗಳ ನದಿ ತೀರದ ನಾನಾ ಗ್ರಾಮಗಳ ಅಪಾರ ಬೆಲೆ ನೀರು ಪಾಲಾಗಿದೆ. ಈ ನೀರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಸವ ಸಾಗರಕ್ಕೆ ಹರಿದು ಹೋಗುತ್ತಿದ್ದು, ಈ ಬಸವ ಸಾಗರ ಜಲಾಷಯದ ಹಿನ್ನೀರಿನಿಂದಾಗಿ ನಿಡಗುಂದಿ ತಾಲೂಕಿನ ಅರಳದಿನ್ನಿ, ಮುದ್ದೇಬಿಹಾಳ ತಾಲೂಕಿನ ಕಮ್ಮಲದಿನ್ನಿ, ಕುಂಚಗನೂರು, ಗಂಗೂರು, ಜೇವೂರು, ತಂಗಡಗಿ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಪ್ರತಿಕ್ಷಣವೂ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಅಲ್ಲದೇ, ಈಗಾಗಲೇ ಮುಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆ ಜಲಾವೃತವಾಗಿದ್ದು, ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂಥ ಪರಿಸ್ಥಿತಿ ಎದುರಾಗಿದೆ.
ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರದ ಇಂದಿನ ನೀರಿನ ಮಟ್ಟ
ಗರಿಷ್ಠ ಎತ್ತರ- 519.60 ಮೀ.
ಸಧ್ಯದ ನೀರಿನ ಮಟ್ಟ- 517.19 ಮೀ,
ಜಲಾಷಯದಲ್ಲಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ- 123.084 ಟಿಎಂಸಿ
ಈಗಿನ ನೀರಿನ ಸಂಗ್ರಹ- 86.845 ಟಿಎಂಸಿ
ಜಲಾಷಯದಲ್ಲಿ ಸಂಗ್ರಹವಾಗಿರುವ ಶೇ. ನೀರು- ಶೇ. 70.56 ರಷ್ಟು ಭರ್ತಿ
ಒಳ ಹರಿವಿನ ಪ್ರಮಾಣ- 4.20 ಲಕ್ಷ ಕ್ಯೂಸೆಕ್
ಹೊರ ಹರಿವು- 4.20 ಲಕ್ಷ ಕ್ಯೂಸೆಕ್.