ನಿಮ್ಮ ಕರ್ಮಕಾಂಡಗಳನ್ನೂ ಹೊರಗೆಳೆಯುತ್ತೇವೆ- ಪಕ್ಷ ಹೇಗೆ ನಾಶ ಮಾಡುತ್ತಾರೆ ನಾವೂ ನೋಡುತ್ತೇವೆ- ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ನಿಮ್ಮ ಕರ್ಮಕಾಂಡಗಳನ್ನೂ ಹೊರಗೆ ತೆಗೆಯುತ್ತೇವೆ. ನೀವು ಸಚಿವರಾದಾಗ ಏನು ಮಾಡಿದ್ದೀರಿ? ನೆನಪು ಮಾಡಿಕೊಳ್ಳಬೇಕು. ಕೇಂದ್ರದಲ್ಲಿ ನಿಮ್ಮ ವರ್ತನೆ ಏನಿತ್ತು? ಕೇಂದ್ರದಲ್ಲಿ ನೀವು ಸಚಿವರಾಗಿದ್ದಾಗ ನಿಮ್ಮ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರೆ ರಾಜ್ಯದ ಗತಿ ಏನಾಗುತ್ತಿತ್ತು? ಗೊತ್ತಿಲ್ಲ. ಪುಣ್ಯಕ್ಕೆ ಮಾಡಿಲ್ಲ. ಬೊಮ್ಮಾಯಿ ಅವರಿಗೆ ಸಿಎಂ ಸ್ಥಾನ ನೀಡಿರುವುದು ಬಹಳ ಸಂತಸ ತಂದಿದೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ನಿನ್ನೆ ನೂತನ ಸಿಎಂ, ಸಚಿವ ಸಂಪುಟ ವಿಸ್ತರಣೆ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಮತ್ತು ಸ್ವಾಮೀಜಿಗಳ ಕುರಿತು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಯತ್ನಾಳ ಹೆಸರು ಹೇಳದೆ ವಾಗ್ದಾಳಿ ನಡೆಸಿದ ಅಪ್ಪು ಪಟ್ಟಣಶೆಟ್ಟಿ, ಸಚಿವ ಸಂಪುಟದಲ್ಲಿ ವಿಜಯಪುರಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬುದು ಕಾರ್ಯಕರ್ತರ ಒಲವೂ ಆಗಿದೆ. ಆದರೆ, ಬ್ಲ್ಯಾಕಮೇಲ್ ಮಾಡುವವರಿಗೆ ಸಚಿವ ಸ್ಥಾನ ನೀಡಬಾರದು. ಇಂಥವರಿಗೆ ಪಕ್ಷ ಸಚಿವ ಸ್ಥಾನ ನೀಡುವುದಿಲ್ಲ ಎಂಬ ವಿಶ್ವಾಸವಿದೆ. ಇವರಿಗೆ ಸಚಿವ ಸ್ಥಾನ ನೀಡುವುದರಲ್ಲಿಯೂ ಅರ್ಥವಿಲ್ಲ ಎಂದು ಹೇಳಿದರು.

ತಮ್ಮದೇ ಹವಾ ತಾವೇ ಸೃಷ್ಠಿ ಮಾಡಿಕೊಳ್ಳುವುದು ಹಳೆಯ ಪ್ರವೃತ್ತಿ

ತಮಗೆ ಸಚಿವ ಸ್ಥಾನ ನೀಡದಿದ್ದರೆ ನಾಶ ಮಾಡುವುದಾಗಿ ಹೇಳುತ್ತಾರೆ. ಹೆದರಿಸುವವರಿಗೆ ಸಚಿವ ಸ್ಥಾನ ಬೇಡ. ಬಿಜೆಪಿ ನಾಯಕರು ಬಹಳಷ್ಟು ಜಾಣರಿದ್ದಾರೆ. ಇವರು ಏನು ನಾಶ ಮಾಡುತ್ತಾರೆ ಎಂಬುದನ್ನು ನಾವೆಲ್ಲ ಕಾರ್ಯಕರ್ತರು ನೋಡುತ್ತೇವೆ ಎಂದು ಸವಾಲು ಹಾಕಿದ ಅಪ್ಪು ಪಟ್ಟಣಶೆಟ್ಟಿ, ತಮ್ಮಿಂದಲೇ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿದಿದ್ದಾರೆ ಎಂದು ಹೇಳುವುದು ಅವರ ಭ್ರಮೆ. ಎರಡು ವರ್ಷಗಳಿಂದ ಇದನ್ನೇ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ತಮ್ಮದೇ ಹವಾ ತಾವೇ ಸೃಷ್ಠಿಸುವುದು ಬಹಳಷ್ಟು ಹಳೆಯ ಪ್ರವೃತ್ತಿ. ಮುಖ್ಯಮಂತ್ರಿಯಾಗುವವರ ಪಟ್ಟಿಯಲ್ಲಿ ತಮ್ಮ ಹೆಸರು ಮಾತ್ರ ಇತ್ತು. ನಿರಾಣಿ ಮತ್ತು ಬೆಲ್ಲದ ಹೆಸರಿರಲಿಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಆ ಪಟ್ಟಿಯಲ್ಲಿ ತಮ್ಮ ಹೆಸರು ಮಾತ್ರ ಇತ್ತು ಎಂಬುದಕ್ಕೆ ಯತ್ನಾಳ ಸಾಕ್ಷಿ ನೀಡಿದರೆ ನಾನು ನಾಳೆಯೇ ರಾಜಕೀಯ ನಿವೃತ್ತಿಯಾಗುತ್ತೇನೆ. ಇದು ನನ್ನ ಚಾಲೆಂಜ್ ಎಂದು ಅವರು ಸವಾಲು ಹಾಕಿದದರು.

ಸ್ಪರ್ಧಾಕಾಂಕ್ಷಿಗಳಲ್ಲಿ ಇವರ ಹೆಸರೇ ಇರಲಿಲ್ಲ. ನಾಲ್ಕು ಬಾರಿ ಶಾಸಕ, ಸಚಿವರಾಗಿರುವ ಬೊಮ್ಮಾಯಿ ಹೆಸರು ಮಾತ್ರ ಇತ್ತು. ಈ ವಿಚಾರದಲ್ಲಿ ಬಿಜೆಪಿ ವರಿಷ್ಛರು ಯಡಿಯೂರಪ್ಪ ಸಲಹೆ ಪಡೆದಿರುವುದು ತಪ್ಪಾ? ಮೋದಿ ಮತ್ತು ಅಮಿತ ಶಾ ಕೂಡ ಹಲವರ ಸಲಹೆ ಪಡೆದಿರುತ್ತಾರೆ. ಯಡಿಯೂರಪ್ಪ ಖುಷಿಯಿಂದ ರಾಜೀನಾಮೆ ನೀಡಿದ್ದಾರೆ. ಭಾವನೆಗಳನ್ನು ವ್ಯಕ್ತಪಡಿಸುವಾಗ ಕಣ್ಣೀರು ಹಾಕಿದ್ದಾರೆ ಎಂದು ಹೇಳಿದ ಅಪ್ಪು ಪಟ್ಟಣಶೆಟ್ಟಿ ಅವರು, ಯತ್ನಾಳ ಕಳೆದ ಬಾರಿ ಲಾಕಡೌನ್ ನಲ್ಲಿಯೂ ಗಡ್ಡ ಬಿಟ್ಟಿದ್ದರು. ಈ ಬಾರಿಯೂ ಗಡ್ಡ ಬಿಟ್ಟಿದ್ದರು. ಈ ರೀತಿ ಹೇಳುವುದು ಅವರಿಗೆ ಚಟವಾಗಿ ಬಿಟ್ಟಿದೆ. ನಾನೂ ಕೂಡ ಗಡ್ಡ ಬಿಟ್ಟಿದ್ದೇನೆ. ಯಾರನ್ನೂ ನೋಡಿ ಬಿಟ್ಟಿಲ್ಲ. ನನಗೆ ಬಿಡಬೇಕು ಎನಿಸಿದೆ ಬಿಟ್ಟಿದ್ದೇನೆ. ಮೋದಿಯವರು ಏಕೆ ಗಡ್ಡ ಬಿಟ್ಟಿದ್ದಾರೆ ಎಂದು ಪ್ರಶ್ನೆ ಮಾಡಬಹುದಾ ಎಂದು ಪ್ರಶ್ನಿಸಿದರು.

ದೆಹಲಿಗೆ ಹೋದವರು ಲಪಂಗರು ಎಂದು ಇವರು ಹೇಳಿದ್ದಾರೆ. ಇವರು ಟಿಕೆಟ್ ಗಾಗಿ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಬಳಿ ಎಷ್ಟು ಬಾರಿ ಹೋಗಿದ್ದಾರೆ ಎಂಬುದು ಗೊತ್ತು ಎಂದು ಅವರು ತಿಳಿಸಿದರು.

ಮಠಾಧೀಶ ವಿರುದ್ಧ ಹೇಳಿಕೆಗೆ ಆಕ್ರೋಶ

ಇದೇ ವೇಳೆ, ಯತ್ನಾಳ ಮಠಾಧೀಶರ ಬಗ್ಗೆ ಆಡಿರುವ ಮಾತುಗಳಿಂದ ನಮಗೂ ನೋವಾಗಿದೆ. ಆ ಮಾತುಗಳನ್ನು ಹಿಂಪಡೆಯಬೇಕು. ತಮಗೆ ಸಚಿವ ಸ್ಥಾನ ನೀಡಿದ್ದರೆ ನಾಶ ಮಾಡುವುದಾಗಿ ಹೇಳಿದ್ದಾರೆ. ಇವರು ಎಷ್ಟು ಪಾವರಫುಲ್ ಇದ್ದಾರೆ ಎಂಬುದನ್ನು ನಾವೂ ನೋಡುತ್ತೇವೆ. ಇವರನ್ನು ವಾಜಪೇಯಿ ಕೈ ಹಿಡಿದು ಮಂತ್ರಿ ಮಾಡಿಲ್ಲ. ಇವರನ್ನು ಅನಂತಕುಮಾರ ಸಚಿವರನ್ನಾಗಿ ಮಾಡಿದ್ದರು. ಉತ್ತರ ಕರ್ನಾಟಕದಲ್ಲಿ ಯುವಕರು ಬೆಳೆಯಲಿ ಎಂದು ಯತ್ನಾಳ ಅವರಿಗೆ ಸಚಿವ ಸ್ಥಾನ ನೀಡಿದ್ದಾಗಿ ಈ ಹಿಂದೆ ದಿ. ಅನಂತಕುಮಾರ ನನ್ನ ಬಳಿ ಹೇಳಿದ್ದಾರೆ ಎಂದು ಅಪ್ಪು ಪಟ್ಟಣಶೆಟ್ಟಿ ತಿಳಿಸಿದರು.

ಸ್ವಾಮೀಜಿಗಳಿಗೆ ಮತ್ತು ಮಠಾಧೀಶರಿಗೆ ಮಾತನಾಡಿರುವುದು ತಪ್ಪು. ಮಠಗಳು ಎಲ್ಲರ ಭಾವನೆಗಳ ಕೇಂದ್ರಗಳು. ಮಠಾಧೀಶರು ಹಣ ಪಡೆದಿದ್ದಾರೆ ಎಂದು ಆರೋಪಿಸುವುದನ್ನು ನೋಡಿದರೆ ಇವರಿಗೆ ತಲೆ ಸರಿಇಲ್ಲ ಎನಿಸುತ್ತದೆ. ಹೆಸರಾಂತ ಮಠಾಧೀಶರ ಹೆಸರನ್ನು ಪ್ರಸ್ತಾಪಿಸಿ ಅವರ ಹೆಸರಿಗೆ ಕಳಂಕ ತರುವುದು ಸರಿಯಲ್ಲ. ಸ್ವಾಮೀಜಿಗಳು ಯಡಿಯೂರಪ್ಪ ಪರ ಇದ್ದಾರೆ ಎಂದು ಅವರ ವಿರುದ್ಧ ಆರೋಪ ಮಾಡುವುದು ತಪ್ಪು. ಬಸವರಾಜ ಬೊಮ್ಮಾಯಿ ಸಿಎಂ ಆಗಿರುವುದು ಸಂತೋಷದ ಸಂಗತಿ. ಯಡಿಯೂರಪ್ಪ ಕ್ರೀಯಾಶೀಲ ಸಿಎಂ ಆಗಿದ್ದರು. ಸಚಿವ ಸಂಪುಟ ವಿಸ್ತರಣೆ ಇಲ್ಲದಿದ್ದರೂ ಯಡಿಯೂರಪ್ಪ ಪ್ರವಾಹ ಸಂದರ್ಭದಲ್ಲಿ ಏಕಾಂಗಿಯಾಗಿ ಕೆಲಸ ಮಾಡಿದ್ದಾರೆ ಎಂದು ಅಪ್ಪು ಪಟ್ಟಣಶೆಟ್ಟಿ ತಿಳಿಸಿದರು.

ಹಿಂದೂ ಪ್ರತಿಪಾದಕ ಎಂದುಕೊಂಡು ಸ್ವಾಮೀಜಿಗಳಿಗೆ ಅವಮಾನ ಸರಿಯಲ್ಲ

ತಾವು ಹಿಂದೂ ಪ್ರತಿಪಾದಕ ಎಂದು ಹೇಳಿಕೊಳ್ಳುವ ಇವರು ಮಠಮಾನ್ಯಗಳಿಗೆ ಅವಮಾನ ಮಾಡುತ್ತಿರುವುದು ಭಕ್ತರಿಗೆ ನೋವು ತಂದಿದೆ. ಮಠಾಧೀಶರನ್ನು ಅಪಮಾನ ಮಾಡಿದ್ದು ಸರಿಯಲ್ಲ. ತಮ್ಮ ಮಾತನ್ನು ಹಿಂದಕ್ಕೆ ಪಡೆಯಬೇಕು. ಇವರು ನಾಯಕರಾಗಲು ಮತ್ತು ಮಂತ್ರಿಯಾಗಲು ಅನಫಿಟ್ ಆಗಿದ್ದಾರೆ ಎಂದು ಮಾಜಿ ಸಚಿವರೂ ಆಗಿರುವ ಅಪ್ಪು ಪಟ್ಟಣಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

2 Responses

  1. ನಾವು ಮತ್ತು ನಮ್ಮ ಗೆಳೆಯರ ಸಂಘ ನಿಮ್ಮ ಜೊತೆ ಇರುತ್ತವೆ. 100%

Leave a Reply

ಹೊಸ ಪೋಸ್ಟ್‌