ಕೊಲ್ಹಾರ ನೀರು ಸರಬರಾಜು ಇನಟೇಕವೆಲ್ ಗೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಭೇಟಿ, ಸಮಗ್ರವಾಗಿ ಪರಿಶೀಲನೆ

ವಿಜಯಪುರ: ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೋಲ್ಹಾರ ಪಟ್ಟಣದ ಬಳಿಯ ಕೃಷ್ಣಾ ನದಿಯ ಹತ್ತಿರ ಇರುವ ಇನಟೆಕವೆಲ್ ಸ್ಥಳವನ್ನು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ವೀಕ್ಷಿಸಿ ಪರಿಶೀಲನೆ ನಡೆಸಿರು.

ಈ ಸಂದರ್ಭದಲ್ಲಿ ಜಲಮಂಡಳಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಸ್. ಎಸ್. ಪಟ್ಟಣಶೆಟ್ಟಿ ನದಿ ಪಾತ್ರ ಮತ್ತು ಕುಡಿಯುವ ನೀರಿಗಾಗಿ ನಿರ್ಮಾಣ ಮಾಡಿರುವ ಇನ್‌ಟೇಕ್, ಜಾಕ್‌ವೆಲ್ ನಿಂದ ಇನ್‌ಟೆಕ್‌ವೆಲ್ ವರೆಗೆ ಅಳವಡಿಸಿರುವ ಕೊಳವೆ ಮಾರ್ಗ ಮತ್ತು ಇನ್‌ಟೇಕ್ ಹತ್ತಿರ ಕೆ ಬಿ ಜೆ ಎನ್ ಎಲ್ ಇಲಾಖೆಯಿಂದ ನಿರ್ಮಾಣ ಮಾಡುತ್ತಿರುವ ಬ್ಯಾರೇಜ್ ಕುರಿತು ಮಾಹಿತಿ ನೀಡಿದರು.

ಬಳಿಕ ಜಾಕವೆಲ್ ನಲ್ಲಿ ಅಳವಡಿಸಿರುವ ಡಿ ಡಬ್ಲೂ ವಿ ಟಿ ಪಂಪುಗಳನ್ನು ಪರಿಶೀಲಿಸಿ ಸದರಿ ಪಂಪುಗಳಿಂದ ನೀರು ಶುದ್ಧೀಕರಣ ಘಟಕಕ್ಕೆ ಪ್ರತಿದಿನ 70 ಎಂ ಎಲ್ ಡಿ ನೀರನ್ನು ನದಿಯಿಂದ ಪಂಪ್ ಮಾಡಲಾಗುತ್ತಿದೆ. ಮೂರು ಪಂಪುಗಳಲ್ಲಿ ಎರಡು ಪಂಪುಗಳು ಚಾಲನೆಯಲ್ಲಿವೆ. ಒಂದು ಪಂಪನ್ನು ಮೀಸಲಾಗಿ ಇಡಲಾಗಿದೆ. ಜಾಕವೆಲ್ ನಿಂದ ನೀರು ಶುದ್ಧೀಕರಣ ಘಟಕದವರೆಗೆ 965 ಮಿ. ಮೀ. ವ್ಯಾಸದ ಎಂ. ಎಸ್. ಕೊಳವೆ ಮಾರ್ಗ ಅಳವಡಿಸಲಾಗಿದೆ ಎಂದು ಎಸ್. ಎಸ್. ಪಟ್ಟಣಶೆಟ್ಟಿ ಮಾಹಿತಿ ನೀಡಿದರು.

ಇದೇ ವೇಳೆ ಜಿಲ್ಲಾಧಿಕಾರಿಗಳು ಸ್ವಚ್ ಗೇರ್ ರೂಂನ್ನು ಪರಿಶೀಲಿಸಿ ಪ್ರತಿದಿನ 38 ಎಮ್. ಎಲ್. ಡಿ ಪ್ರಮಾಣದಲ್ಲಿ ನೀರು ಶುದ್ದೀಕರಿಸುವ ಫಿಲ್ಟರಬೆಡ್‌ ಗೆ ಪರಿಶೀಲನೆಗೆ ವೀಕ್ಷಿಸಿದರು. ಶುದ್ದೀಕರಿಸುವ ಫಿಲ್ಟರಬೆಡ್‌ ಹತ್ತಿರ ಇರುವ ಏರಿಯೇಟರ್, ಫ್ಲಾಷ್ ಮಿಕ್ಷರ್, ಕ್ಲಾರಿಫ್ಲಾಕುಲೇಟರ್ ಪರಿಶೀಲಿಸಿದ ಅವರು, ಕಚ್ಚಾ ನೀರನ್ನು ಶುದ್ದೀಕರಿಸಲು ಉಪಯೋಗಿಸುವ ಪಿ. ಎಸ್. ಸಿ ಪೌಡರ್‌ ಬಗ್ಗೆ ಮಾಹಿತಿ ಪಡೆದರು. ಕ್ಲಾರಿ ಫ್ಲಾಕುಲೇಟರ್‌ನಲ್ಲಿ ನೀರು ಶುದ್ದೀಕರಣವಾಗುವ ರೀತಿಯನ್ನು ಪರಿಶೀಲಿಸಿ ಮಾಹಿತಿ ಪಡೆದ ನಂತರ ಕ್ಲಾರಿ ಫ್ಲಾಕುಲೇಟರ್ ಬ್ರಿಡ್ಜ್ ಮೇಲೆ ತೆರೆಳಿದ ಅದು ಸ್ಥಗಿತಗೊಂಡಿರುವುದನ್ನು ಗಮನಿಸಿದರು. ಕೂಡಲೇ ಬ್ರಿಡ್ಜ್ ನ್ನು ದುರಸ್ತಿ ಮಾಡಿ ಚಾಲನೆಯಲ್ಲಿಡಲು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳಿಕ ಫಿಲ್ಟರಬೆಡ್‌ನ್ನು ಪರಿಶೀಲಿಸಿ ನೀರು ಶುದ್ದೀಕರಣದ ಬಗ್ಗೆ ಮಾಹಿತಿ ಪಡೆದು ಒಂದು ಬೆಡ್ ಬ್ಯಾಕ್‌ವಾಷ್ ಮಾಡಿಸಿ ನೀರನ್ನು ಫಿಲ್ಟರ್ ಮಾಡಲು ಅಳವಡಿಸಿರುವ ಫಿಲ್ಟರ್ ಮೀಡಿಯಾ ಬಗ್ಗೆ ವರದಿ ಪಡೆದು ಫಿಲ್ಟರ್ ಮರಳನ್ನು ಪರೀಕ್ಷಿಸಿದರು. ನಂತರ ಶುದ್ದೀಕರಣ ಘಟಕದಲ್ಲಿರುವ ನೀರಿನ ಪ್ರಯೋಗಾಲಯಕ್ಕೆ ಭೇಟಿ ನೀಡಿ, ಪ್ರಯೋಗಾಲಯದಲ್ಲಿ ನಡೆಸುತ್ತಿರುವ ಟರ್ಬಿಡಿಟಿ, ಟಿ. ಡಿ. ಎಸ್. ಪಿ. ಎಚ್ ಬಗ್ಗೆ ಪ್ರಯೋಗಾಲಯದಲ್ಲಿ ಪರಿಶೀಲಿಸಿ, ನೀರಿನ ಗುಣಮಟ್ಟವು ನಿಗದಿತ ಗುಣಮಟ್ಟಕ್ಕೆ ಒಳಪಟ್ಟಿರುವುದನ್ನು ಪರಿಶೀಲಿಸಿ ಮಾಹಿತಿ ಪಡೆದರು.

ವಿಜಯಪುರ ನಗರಕ್ಕೆ ಟರ್ಬಿಡಿಟಿ ನೀರನ್ನು ಸರಬರಾಜು ಆಗಿರುವ ಬಗ್ಗೆ ವರದಿ ಕೋರಿದ್ದು, ಜಲಮಂಡಳಿ ಅಧಿಕಾರಿಗಳು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವಿವರಣೆ ನೀಡಿದ ನಂತರ ಇನ್ನು ಮುಂದೆ ನಗರಕ್ಕೆ ನೀರು ಸರಬರಾಜಿನಲ್ಲಿ ಈ ರೀತಿ ಘಟನೆ ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ಜಲಮಂಡಳಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಬಳಿಕ ಕೋಲ್ಹಾರ ಪಟ್ಟಣಕ್ಕೆ ದಿನದ 25 ಗಂಟೆಗಳ ಕಾಲ ನಿರಂತರ ನೀರು ಸರಬರಾಜು ಮಾಡುವ ಕುರಿತು ಮಾಹಿತಿ ಪಡೆದ ಪಿ. ಸುನೀಲ ಕುಮಾರ, ವಾರ್ಡ ನಂ.4 ರಲ್ಲಿ ನೀರು ಸರಬರಾಜು ವಿತರಣೆ ಬಗ್ಗೆ ಬಂದಿರುವ ದೂರಿನ ಬಗ್ಗೆ ಚರ್ಚಿಸಿದರು. ಅಲ್ಲದೇ, ಕೂಡಲೇ ಸದರಿ ವಾರ್ಡನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ಕೊಲ್ಹಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

 

Leave a Reply

ಹೊಸ ಪೋಸ್ಟ್‌