ಸಂಪುಟ ವಿಸ್ತರಣೆ- ಇಂದು ರಾತ್ರಿ ಹೈಕಮಾಂಡ್ ಸಚಿವ ಪಟ್ಟಿ ಪ್ರಕಟಿಸಲಿದೆ- ನಂತರ ಪ್ರಮಾಣ ವಚನ ದಿನ ನಿಗದಿ- ಸಿಎಂ ಬಸವರಾಜ ಬೊಮ್ಮಾಯಿ

ನವದೆಹಲಿ: ರಾಜ್ಯ ಸಚಿವ ಸಂಪುಟ ಸೇರಲಿರುವವ ಪಟ್ಟಿಯನ್ನು ಇಂದು ರಾತ್ರಿ ಹೈಕಮಾಂಡ ಪ್ರಕಟಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸೋಮವಾರ ತಡರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಆವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸಿಎಂ ಈ ಕುರಿತು ಮಾಹಿತಿ ನೀಡಿದರು.

ಮಂಗಳವಾರ ಲೋಕಸಭೆ ಅಧಿವೇಶನ ಮುಗಿದ ಬಳಿಕ ಎಷ್ಟು ಜನರಿಗೆ ಮತ್ತು ಯಾರಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದರ ಕುರಿತು ಹೈಕಮಾಂಡ್ ಸಭೆ ನಡೆಸಿ ನಿರ್ಧರಿಸಲಿದೆ. ಹೈಕಮಾಂಡ್ ಪಟ್ಟಿ ಪ್ರಕಟಿಸಿದ ನಂತರ ಬಿಜೆಪಿ ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿ ಸಚಿವ ಸಂಪುಟ ವಿಸ್ತರಣೆ ದಿನವನ್ನು ನಿಗದಿ ಪಡಿಸಲಾಗುವುದು ಎಂದು ಅವರು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆಯ ಎಲ್ಲ ಆಯಾಮಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಹಲವಾರು ಸಲಹೆ ಮತ್ತು ಸೂಚನೆಗಳನ್ನು ನಡ್ಡಾ ಕೊಟ್ಟಿದ್ದಾರೆ. ನಾವು ರಾಜ್ಯದಲ್ಲಿರುವ ವಸ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಬೇಕು ಎಂಬುದನ್ನು ತಿಳಿಸಿದ್ದೇವೆ. ಒಳ್ಳೆಯ ವಾತಾವರಣದಲ್ಲಿ ಚರ್ಚೆಯಾಗಿದೆ. ಹೈಕಮಾಂಡ ಒಳ್ಳೆಯ ತೀರ್ಮಾನ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಿಎಂ ತಿಳಿಸಿದರು.

ಹೈಕಮಾಂಡ್ ಮತ್ತು ನಮ್ಮ ನಡುವೆ ಒಂದು ಪಟ್ಟಿ ಕುರಿತು ಚರ್ಚೆಯಾಗಿದೆ. ಇದರಲ್ಲಿ ಯಾರನ್ನು ಸಚಿವರನ್ನಾಗಿ ಮಾಡಬೇಕು ಯಾರನ್ನು ಮಾಡಬಾರದು ಎಂಬುದನ್ನು ತಾವು ತೀರ್ಮಾನ ಮಾಡುವುದಾಗಿ ಹೈಕಮಾಂಡ್ ತಿಳಿಸಿದೆ. ಡಿಸಿಎಂ ಸ್ಥಾನಗಳ ಬಗ್ಗೆಯೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ನಾವು 2-3 ಪಟ್ಟಿಗಳನ್ನು ಕೊಟ್ಟಿದ್ದೇವೆ ಎಂದು ಅವರು ತಿಳಿಸಿದರು.

ಇಲ್ಲಿ ಯಾರೂ ವಲಸಿಗರಿಲ್ಲ. ಅವರು ನಮ್ಮವರೇ, ಇಲ್ಲಿ ಎಲ್ಲರೂ ಬಿಜೆಪಿಗರೇ ಆಗಿರುವುದರಿಂದ ಪಕ್ಷದ ಪರವಾಗಿ ನಿರ್ಧಾರವಾಗುತ್ತೆ. ಹೈಕಮಾಂಡ್ ಅಂತಿಮವಾಗಿ ಎಷ್ಟು ಜನರನ್ನು ಆಯ್ಕೆ ಮಾಡುತ್ತೆ ಗೊತ್ತಿಲ್ಲ. ನಾವು ತಿಳಿಸಿರುವ ವಿಚಾರಗಳನ್ನು ಅವರು ಇನ್ನೋಂದು ಸುತ್ತಿನ ಸಭೆ ನಡೆಸಿ ನಿರ್ಧರಿಸುತ್ತಾರೆ. ನಾವು ಸಾಮಾಜಿಕ ಮತ್ತು ಪ್ರಾದೇಶಿಕವಾರು ಅಂಶಗಳನ್ನು ಪರಿಗಣಿಸಿ ಮಾಹಿತಿ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದಕ್ಕೂ ಮುನ್ನ ಸಿಎಂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

Leave a Reply

ಹೊಸ ಪೋಸ್ಟ್‌