ಶಾಸಕ ಯತ್ನಾಳಗೆ ಸಚಿವ ಸ್ಥಾನ ನೀಡಲೇಬೇಕಾದ ಸಂದಿಗ್ಧತೆಯಲ್ಲಿ ಬಿಜೆಪಿ ಹೈಕಮಾಂಡ್- ಯಾಕೆ ಗೊತ್ತಾ?

ವಿಜಯಪುರ: ಬಸವರಾಜ ಬೊಮ್ಮಾಯಿ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕವೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಗ್ಗಂಟು ಮುಂದುವರೆದಿದೆ. ಈ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿಯ ಮೂಲ ಮತ್ತು ವಲಸಿಗ ಶಾಸಕರಲ್ಲಿ ಯಾರಿಗೆ ಎಷ್ಟು ಸ್ಥಾನ ನೀಡಬೇಕು? ಜಾತಿವಾರು, ಪ್ರಾದೇಶಿಕವಾರು, ಗುಂಪುಗಳವಾರು ಅಂಶಗಳನ್ನೂ ಕೂಡ ಪರಿಶೀಲನೆ ನಡೆಸಲಾಗುತ್ತಿದೆ.

ಅತ್ತ ನಾನಾ ಶಾಸಕರು ತಮಗೆ ಸಚಿವ ಸ್ಥಾನ ನೀಡಲೇಬೇಕು ಎಂದು ದೆಹಲಿ ಮತ್ತು ಬೆಂಗಳೂರು ಸೇರಿದಂತೆ ನಾನಾ ಕಡೆಗಳಲ್ಲಿ ಸುತ್ತಾಡಿ ಕೇಂದ್ರ ಹೈಕಮಾಂಡ್ ಮತ್ತು ರಾಜ್ಯ ಹಿರಿಯ ಮುಖಂಡನ್ನು ಭೇಟಿಯಾಗಿ ಹಕ್ಕು ಮಂಡಿಸುತ್ತಲೇ ಲಾಬಿಯನ್ನು ಆರಂಬಿಸಿದ್ದಾರೆ.

ಆದರೆ, ಬಿಜೆಪಿಯ ಫಾಯರ್ ಬ್ರ್ಯಾಂಡ್ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಮಾತ್ರ ಅತ್ತ ದೆಹಲಿಗೂ ಹೋಗದೇ, ಇತ್ತ ಬೆಂಗಳೂರಿಗೂ ತೆರಳದೇ ಬಸವ ನಾಡು ವಿಜಯಪುರದಲ್ಲಿಯೇ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತ ಆರಾಮಾಗಿದ್ದಾರೆ. ವಿಜಯಪುರ ಜಿಲ್ಲೆಗೆ ಅದರಲ್ಲೂ ತಮಗೆ ಸಚಿವ ಸ್ಥಾನ ಸಿಕ್ಕೆ ಸಿಗುತ್ತದೆ ಎಂದು ಆತ್ಮ ವಿಶ್ವಾಸದಲ್ಲಿದ್ದಾರೆ.

ಬಿಜೆಪಿಯಲ್ಲಿ ಯಡಿಯೂರಪ್ಪ, ಅನಂತಕುಮಾರ, ಕೆ. ಎಸ್. ಈಶ್ವರಪ್ಪ ಹೊರತು ಪಡಿಸಿದರೆ ತಾವೇ ಹಿರಿಯರು. ಈ ಹಿಂದೆ ಬಿಜೆಪಿ ಕಟ್ಟಿ ಬೆಳೆಸಿದ್ದೇನೆ. ತಮ್ಮನ್ನು ಕಡೆಗಣಿಸಿದರೆ ಬಿಜೆಪಿಗೆ ತಕ್ಕಪಾಠವನ್ನು ಜನರೇ ಕಲಿಸಲಿದ್ದಾರೆ ಎಂಬ ವಿಶ್ವಾಸವನ್ನು ಯತ್ನಾಳ ಹೊಂದಿದ್ದಾರೆ.

ಸಂದಿಗ್ಧತೆಯಲ್ಲಿ ಹೈಕಮಾಂಡ

ಎಲ್ಲವೂ ಅಂದುಕೊಂಡತೆ ನಡೆದರೆ ಯತ್ನಾಳ ಯಾವ ಗುಂಪಿಗೂ ಸೇರಿರದೆ ಹೈಕಮಾಂಡ್ ನಿಂದ ಸಚಿವ ಸ್ಥಾನಕ್ಕೆ ಶಿಫಾರಸು ಮಾಡುವ ಶಾಸಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇದಕ್ಕೆ ಪ್ರಬಲವಾದ ಕಾರಣವೂ ಇದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಅದೇನೆಂದರೆ, ಈ ಮುಂಚೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ಪರವಿದ್ದು ಪ್ರವಾಹ ಸಂದರ್ಭದಲ್ಲಿ ಸ್ಪಂದಿಸದ ಹೈಕಮಾಂಡ್ ವಿರುದ್ಧ ಯತ್ನಾಳ ತಮ್ಮದೇ ಶೈಲಿಯಲ್ಲಿ ಗುಡುಗಿದ್ದರು. ಅವರ ಆರ್ಭಟಕ್ಕೆ ಬೆಚ್ಚಿಬಿದ್ದ ಹೈಕಮಾಂಡ್ ಎರಡು ವರ್ಷಗಳ ಹಿಂದೆ ಪ್ರವಾಹ ಸಂತ್ರಸ್ತರಿಗಾಗಿ ಪರಿಹಾರ ಹಣ ಬಿಡುಗಡೆ ಮಾಡಿತ್ತು.

ಅದಾದ ಬಳಿಕ ಯಡಿಯೂರಪ್ಪ ಅವರ ಪುತ್ರ ಬಿ. ವೈ. ವಿಜಯೇಂದ್ರ ಸರಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಯಡಿಯೂರಪ್ಪ ತಮ್ಮ ಪುತ್ರನನ್ನು ರಾಜಕೀಯವಾಗಿ ಬೆಳೆಸುವುದಕ್ಕೋಸ್ಕರ ತಮ್ಮನ್ನು ತುಳಿಯುತ್ತಿದ್ದಾರೆ ಎಂಬುದನ್ನು ಮೊದಲೇ ಅರಿತ ಯತ್ನಾಳ, ಹೈಕಮಾಂಡ್ ನತ್ತ ಬೀರಿದ್ದ ವಕ್ರದೃಷ್ಠಿಯನ್ನು ಯಡಿಯೂರಪ್ಪ ಮತ್ತು ವಿಜಯೇಂದ್ರ ಕಡೆಗೆ ತಿರುಗಿಸಿದ್ದರು. ನಂತರ, ಮುರುಗೇಶ ನಿರಾಣಿ ಸೇರಿದಂತೆ ಕೆಲವು ಮುಖಂಡರ ವಿರುದ್ಧವೂ ಹರಿಹಾಯ್ದಿದ್ದು ಈಗ ಇತಿಹಾಸ.

ಈಗ ಸಚಿವ ಸಂಪುಟ ವಿಸ್ತರಣೆಯಲ್ಲಿ ಯತ್ನಾಳ ಅವರಿಗೆ ಸ್ಥಾನ ನೀಡುವ ಕುರಿತು ಹೈಕಮಾಂಡ್ ಸಂದಿಗ್ಧತೆಯಲ್ಲಿ ಸಿಲುಕಲು ಪ್ರಮುಖ ಕಾರಣವೊಂದಿದೆ ಎಂದು ದೆಹಲಿ ಮೂಲಗಳು ತಿಳಿಸಿವೆ. ಯಡಿಯೂರಪ್ಪ ಮತ್ತು ಅವರ ಪುತ್ರನ ವಿರುದ್ಧ ಯತ್ನಾಳ ತಿರುಗಿ ಬಿದ್ದ ಬಳಿಕ ಯಡಿಯೂರಪ್ಪ ಅವರನ್ನು ಹದ್ದುಬಸ್ತಿನಲ್ಲಿಡಲು ಹೈಕಮಾಂಡ್ ಯತ್ನಾಳ ಅವರಿಗೆ ಪ್ರೋತ್ಸಾಹ ನೀಡಿತ್ತು. ಹೀಗಾಗಿಯೇ ಅವರು ವಾಗ್ದಾಳಿ ನಡೆಸುತ್ತಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಹೈಕಮಾಂಡ್ ಮುಂದಾಗಲಿಲ್ಲ. ಅಲ್ಲದೇ, ಯತ್ನಾಳ ವಾಗ್ದಾಳಿ ನಡೆಸುತ್ತಿರುವುದರ ಹಿಂದೆ ಇರುವ ಕಾರಣವೂ ಸತ್ಯಕ್ಕೆ ಹತ್ತಿರವಾಗಿದೆ ಎಂದು ಅರ್ಥೈಸಿಕೊಂಡು ಸುಮ್ಮನಾಗಿತ್ತು ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಈಗ ಸಚಿವ ಸಂಪುಟ ವಿಸ್ತರಣೆ ಸಂಬಂಧ ಯಾರನ್ನು ಸೇರಿಸಬೇಕು ಎಂಬ ಪಟ್ಟಿಯನ್ನು ಸಿದ್ಧಪಡಿಸಲು ನೂತನ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಈ ಪಟ್ಟಿಯಲ್ಲಿ ಹೈಕಮಾಂಡ್ ಯತ್ನಾಳ ಅವರ ಹೆಸರನ್ನು ಸೇರಿಸಲು ಉತ್ಸುಕವಾಗಿದೆ. ಆದರೆ, ಈ ಹಿಂದೆ ಯಡಿಯೂರಪ್ಪ ವಿರುದ್ಧ ಯತ್ನಾಳ ಮಾತನಾಡಿದಾಗ ಮೌನ ವಹಿಸಿದ್ದ ಹೈಕಮಾಂಡ್ ಈಗ ಯತ್ನಾಳ ಅವರಿಗೆ ಸಚಿವ ಸ್ಥಾನ ನೀಡಿದರೆ, ಯಡಿಯೂರಪ್ಪ ಯಾವ ರೂಪ ತಾಳುತ್ತಾರೆ ಎಂಬ ಆತಂಕ ಹೈಕಮಾಂಡ್ ನ್ನು ಕಾಡುತ್ತಿದೆ. ಹಾಗಂತ ಹೈಕಮಾಂಡ್ ಕೂಡ ತಮ್ಮ ಶಾಸಕರನ್ನು ಬೇಕಾದಂತೆ ಬಳಸಿಕೊಂಡು ನಂತರ ಅವರಿಗೆ ಸೂಕ್ತ ಸ್ಥಾನಮಾನ ನೀಡದಿದ್ದರೆ, ಭವಿಷ್ಯದಲ್ಲಿ ಯಾರೂ ಕೂಡ ಹೈಕಮಾಂಡ್ ಗೆ ಬೇಕಾದ ರೀತಿಯಲ್ಲಿ ಸ್ಪಂದಿಸಲಿಕ್ಕಿಲ್ಲ ಎಂಬ ಆತಂಕವೂ ವರಿಷ್ಠರನ್ನು ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಯತ್ನಾಳ ಅವರಿಗೆ ಸಚಿವ ಸ್ಥಾನ ನೀಡಿದರೆ ಹಿಂದೂ ಮತಗಳ ಕ್ರೂಢೀಕರಣವಾಗಲಿದೆ. ಅಲ್ಲದೇ, ಪ್ರತಿಪಕ್ಷಗಳನ್ನು ಹದ್ದುಬಸ್ತಿನಲ್ಲಿಡಲು ಅನುಕೂಲವಾಗಬಹುದು ಎಂದು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆಯಾದರೂ, ಒಂದು ವೇಳೆ ಯತ್ನಾಳ ಅವರಿಗೆ ಸಚಿವ ಸ್ಥಾನ ನೀಡಿದರೆ ಯಡಿಯೂರಪ್ಪ ಯಾವ ತಂತ್ರ ಹೂಡುತ್ತಾರೆ? ಅದರಿಂದಾಗುವ ದೂರದೃಷ್ಠಿ ಪರಿಣಾಮಗಳೇನು ಎಂಬುದರ ಬಗ್ಗೆಯೂ ಬಿಜೆಪಿ ಹಿರಿಯಲು ಗಂಭೀರವಾಗಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಒಟ್ಟಾರೆ, ಯತ್ನಾಳ ಅವರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಉತ್ಸುಕವಾಗಿದ್ದರೂ, ಇನ್ನು ಕೆಲ ಗಂಟೆಗಳಲ್ಲಿ ಎದುರಾಗುವ ಸಾಂದರ್ಭಿಕ ಸನ್ನಿವೇಶಗಳಿಗೆ ಅನುಗುಣವಾಗಿ ಸ್ಪಷ್ಟ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ ಕೈಗೊಳ್ಳಲಿದೆ ಎಂದು ಬಿಜೆಪಿ ಮೂಲಗಳು ಬಸವ ನಾಡಿಗೆ ತಿಳಿಸಿವೆ.

 

Leave a Reply

ಹೊಸ ಪೋಸ್ಟ್‌