ದೇವಸ್ಥಾನದ ಎದುರು ಟೆಂಗಿನಕಾಯಿ ಮಾರಾಟ ಮಾಡಿ ಆನಲೈನ್ ಮೂಲಕ ವಿದ್ಯಾಭ್ಯಾಸ ಮಾಡುತ್ತಿದ್ದ ಬಡ ವಿದ್ಯಾರ್ಥಿನಿಗೆ ನೆರವಾದ ಮಾಜಿ ಸಚಿವ ಎಂ. ಬಿ. ಪಾಟೀಲ

ವಿಜಯಪುರ: ಬಡತನದ ಹಿನ್ನೆಲೆಯಲ್ಲಿ ದೇವಸ್ಥಾನದ ಎದುರು ಟೆಂಗಿನಕಾಯಿ ಮಾರಾಟ ಮಾಡಿ ಆನಲೈನ್ ಪಾಠ ಕೇಳುತ್ತಿದ್ದ ಬಾಲಕಿಗೆ ಬಿ. ಎಲ್. ಡಿ. ಇ ಸಂಸ್ಥೆಯ ಅಧ್ಯಕ್ಷ ಮತ್ತು ಬಬಲೇಶ್ವರ ಶಾಸಕರಾದ ಶ್ರೀ ಎಂ. ಬಿ. ಪಾಟೀಲ ಆರ್ಥಿಕವಾಗಿ ನೆರವಾಗಿದ್ದಾರೆ. ಅಷ್ಟೇ ಅಲ್ಲ, ಅವಳ ಭಾವಿ ಶಿಕ್ಷಣಕ್ಕೂ ಸಹಾಯ ಹಸ್ತ ಚಾಚಿದ್ದಾರೆ.

ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ವಡವಡಗಿ ಗ್ರಾಮದ ಕಾವ್ಯಾ ಮಲ್ಲಪ್ಪ ಅರಮನಿ ಎಂಬ ವಿದ್ಯಾರ್ಥಿನಿಗೆ ತಂದೆಯಿಲ್ಲ. ತಾಯಿ ಕಾಶಿಬಾಯಿ ಮತ್ತು ತಮ್ಮ ಸಂಗಮೇಶ ವಡವ ಡಗಿಯಲ್ಲಿಯೇ ವಾಸಿಸುತ್ತಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಹಿನ್ನೆಲೆಯಲ್ಲಿ ತನ್ನ ವಿದ್ಯಾಭ್ಯಾಸ ಮುಂದುವರೆಸಲು ವಿಜಯಪುರ ನಗರದಲ್ಲಿ ವಾಸಿಸುವ ತನ್ನ ದೊಡ್ಡಮ್ಮನ ಮನೆಯಲ್ಲಿದ್ದಳು. ಮೊದಲೇ ಕಿತ್ತು ತಿನ್ನುವ ಬಡತನ ಬೇರೆ. ಈ ಹಿನ್ನೆಲೆಯಲ್ಲಿ ವಿಜಯಪುರ ನಗರದ ವಜ್ರಹನುಮಾನ ದೇವಸ್ಥಾನದ ಎದುರು ಟೆಂಗಿನಕಾಯಿ ಮಾರಾಟ ಮಾಡುತ್ತ ಆನಲೈನ್ ಮೂಲಕ ಪಾಠ ಕೇಳುತ್ತ ವಿದ್ಯಾಭ್ಯಾಸ ಮಾಡುತ್ತಿದ್ದಳು.

ಈ ಸುದ್ದಿ ತಿಳಿದ ಬಿ. ಎಲ್. ಡಿ. ಇ. ಸಂಸ್ಥೆಯ ಅಧ್ಯಕ್ಷ ಮತ್ತು ಮಾಜಿ ಸಚಿವರಾದ ಶ್ರೀ ಎಂ. ಬಿ. ಪಾಟೀಲ, ನಿರ್ದೇಶಕರು ಮತ್ತು ವಿಧಾನ ಪರಿಷತ ಸದಸ್ಯರಾದ ಶ್ರೀ ಸುನೀಲಗೌಡ ಪಾಟೀಲ ಹಾಗೂ ಶ್ರೀ ಬಸನಗೌಡ ಎಂ. ಪಾಟೀಲ ಅವರು ವಿದ್ಯಾರ್ಥಿನಿಯ ನೆರವಿಗೆ ಧಾವಿಸಿದ್ದಾರೆ. ಅಲ್ಲದೇ, ತಮ್ಮ ಸಂಸ್ಥೆಯ ಆಡಳಿತಾಧಿಕಾರಿ ಡಾ. ಆರ್. ವಿ . ಕುಲಕರ್ಣಿ ಅವರಿಗೆ ಕರೆ ಮಾಡಿ ವಿದ್ಯಾರ್ಥಿನಿಗೆ ಅಗತ್ಯವಿರುವ ಆರ್ಥಿಕ ಮತ್ತು ಶೈಕ್ಷಣಿಕ ಸಹಾಯ ಒದಗಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ ಕಾವ್ಯಾಳನ್ನು ಭೇಟಿ ಮಾಡಿ ವಿದ್ಯಾರ್ಥಿನಿಯ ಎರಡು ವರ್ಷದ ಕಾಲೇಜು ಫೀ ರೂ. 17000 ಮತ್ತು ಬಿ. ಎಲ್. ಡಿ. ಇ ಸಂಸ್ಥೆಯ ಸ್ಕಾಲರಶಿಪ್ ಮೊತ್ತವಾದ ರೂ. 18 ಸಾವಿರ ಸೇರಿದಂತೆ ಒಟ್ಟು ರೂ. 35000 ಹಣದ ಸಹಾಯ ನೀಡುವ ಮೂಲಕ ವಿದ್ಯಾರ್ಥಿನಿಗೆ ನೆರವಾದರು. ಅಲ್ಲದೇ, ಈ ವಿದ್ಯಾರ್ಥಿನಿ ಬಿ.ಕಾಂ ಓದಲು ಇಚ್ಛಿಸಿದರೆ ಬಿ. ಎಲ್. ಡಿ. ಇ. ಸಂಸ್ಥೆಯ ಕಾಲೇಜಿನಲ್ಲಿ ಉಚಿತವಾಗಿ ಪ್ರವೇಶ ನೀಡುವುದಾಗಿ ಭರವಸೆ ನೀಡಿದರು.

ಆ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿನಿ ಕಾವ್ಯಾ ಮಾತನಾಡಿ, ಚಿಕ್ಕವಳಿದ್ದಾಗ ತಂದೆಯನ್ನು ಕಳೆದುಕೊಂಡು ದೊಡ್ಡಮ್ಮನ ಜೊತೆ ವಿಜಯಪುರದಲ್ಲಿ ವಾಸಿಸುತ್ತಿದ್ದೇನೆ. ಟೆಂಗಿನಕಾಯಿ ಮಾರಾಟ ಮಾಡಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ನನ್ನ ಸಂಕಷ್ಟಕ್ಕೆ ಶಾಸಕರಾದ ಎಂ. ಬಿ. ಪಾಟೀಲ, ವಿಧಾನ ಪರಿಷತ ಸದಸ್ಯ ಸುನಿಲಗೌಡ ಪಾಟೀಲ ಮತ್ತು ಬಿ. ಎಲ್. ಡಿ. ಇ. ಸಂಸ್ಥೆಯ ನಿರ್ದೇಶಕ ಬಸನಗೌಡ ಪಾಟೀಲ ಸರ್ ಸಹಾಯ ಮಾಡುವ ಮೂಲಕ ನನಗೆ ಸಹಾಯ ಮಾಡಿದ್ದಾರೆ ಎಂದು ಆನಂದಭಾಷ್ಪ ಹಾಕಿದ ಘಟನೆ ನಡೆಯಿತು.

ಈ ಸಂದರ್ಭದಲ್ಲಿ ಬಿ ಎಲ್ ಡಿ‌ ಇ ಆಫೀಸ್ ಸುಪರಿಂಟೆಂಡೆಂಟ್ ಎಸ್. ಎ. ಬಿರಾದಾರ, ಆಡಳಿತಾಧಿಕಾರಿ ಕೆ. ಜಿ. ಪೂಜಾರಿ ಉಪಸ್ಥಿರಿದ್ದರು. ವಿದ್ಯಾರ್ಥಿನಿಯ ದೊಡ್ಡಮ್ಮ ಸುಗಲಾ ಕನ್ನೂರ ಮತ್ತು ಅಜ್ಜಿ ಭಾರತಿ ಇಂಗಳಗೇರಿ ಕೂಡ ಉಪಸ್ಥಿತರಿದ್ದು ಬಿ. ಎಲ್. ಡಿ. ಇ. ಸಂಸ್ಥೆಯಿಂದ ನೀಡಲಾದ ಚೆಕ್ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.

Leave a Reply

ಹೊಸ ಪೋಸ್ಟ್‌