ಭೀಮಾ ತೀರದ ಜನರ ದುಸ್ಸಾಹಸ- ಕೊರೊನಾ ಮಹಾ ಕಂಟಕ ತಪ್ಪಿಸಲು ಬಂದ್ ಮಾಡಿರುವ ಬ್ಯಾರೇಜ್ ಮೇಲಿನ ರಸ್ತೆಯ ಮೇಲೆ ಬೈಕ್ ಹತ್ತಿಸಿ ಸಂಚಾರ

ವಿಜಯಪುರ: ಈ ಜನರೇ ಹೀಗೆ. ಸರಕಾರ ಕೈಗೊಳ್ಳುವ ನಿರ್ಧಾರಗಳು ಅವರ ಒಳಿತಿಗೆ ಇವೆ ಎಂಬುದನ್ನು ಮೈ ಮರೆತು ತಮ್ಮ ಚತುರತನವನ್ನು ಯಾವ್ಯಾವ ರೀತಿ ತೋರಿಸುತ್ತಾರೆ ಎಂಬುದಕ್ಕೆ ಉದಾಹರಣೆ ಇಲ್ಲಿದೆ.

ಕರ್ನಾಟಕದಲ್ಲಿ ಕೊರೊನಾ ಸೋಂಕು ಸಾಕಷ್ಟು ನಿಯಂತ್ರಣಕ್ಕೆ ಬಂದಿದ್ದರೂ ನೆರೆಯ ಮಹಾರಾಷ್ಟ್ರದಲ್ಲಿ ಹೆಚ್ಚಾಗುತ್ತಿರುವ ಸೋಂಕಿನ ಪ್ರಮಾಣ ಗಡಿಭಾಗ ಅಷ್ಟೇ ಅಲ್ಲ, ಇಡೀ ಕರ್ನಾಟಕಕ್ಕೂ ಕಂಟಕ ತರುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಗಡಿಯಲ್ಲಿರುವ ವಿಜಯಪುರ ಜಿಲ್ಲೆಯಲ್ಲಿಯೂ ಮಹಾರಾಷ್ಟ್ರವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಕೊರೊನಾ ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಇಂಡಿ ತಾಲೂಕಿನ ಹಿಂಗಣಿ ಬ್ಯಾರೇಜ್ ಮೇಲಿನ ಸಂಚಾರ ಬಂದ್ ಮಾಡಲಾಗಿದೆ. ವಿಜಯಪುರ ಜಿಲ್ಲಾ ಪೊಲೀಸರು ಜೆಸಿಬಿ ಬಳಸಿ ಬ್ಯಾರೇಜಿನ ಮೇಲೆ ಮಣ್ಣಿನ ಒಡ್ಡು ಹಾಕಿಸಿದ್ದಾರೆ. ಅಷ್ಟೇ ಅಲ್ಲ, ಬೈಕ್ ಸವಾರರನ್ನೂ ತಡೆಯಲು ಒಡ್ಡಿನ ಮೇಲೆ ಮುಳ್ಳು ಕಂಟಿಗಳನ್ನು ಹಾಕಿ ರಸ್ತೆ ಸಂಪರ್ಕವನ್ನು ಸಂಪೂರ್ಣ ಬಂದ್ ಮಾಡಿದ್ದಾರೆ.

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಮತ್ತು ವಿಜಯಪುರ ಜಿಲ್ಲೆಗಳ ಮಧ್ಯೆ ಹಿಂಗಣಿ ಬ್ಯಾರೇಜ್ ಸಂಪರ್ಕ ಕೊಂಡಿಗಳಲ್ಲಿ ಒಂದಾಗಿದೆ. ಇಂಡಿ ತಾಲೂಕಿನ ಹಿಂಗಣಿ ಬ್ಯಾರೇಕಜ್ ಸಂಪರ್ಕ ಬಂದ್ ಮಾಡಿದರೂ ಸ್ಪಂದಿಸದ ಜನರು ಬಂದ್ ಆಗಿರುವ ಬ್ಯಾರೇಜಿನ ಮಣ್ಣಿನ ಒಡ್ಡಿನ ಮೇಲಿನ ಮುಳ್ಳು ಕಂಟಿ ತೆಗೆದು ಪ್ರಯಾಣ ಮಾಡುತ್ತಿದ್ದಾರೆ. ಆದರೆ, ಜನರು ಮಾತ್ರ ನದಿಯಿಂದ ಬೈಕ್ ಗಳನ್ನು ಬ್ಯಾರೇಜ್ ಮೇಲೆ ಎತ್ತಿ ಹಾಕಿಕೊಂಡು ಹೋಗುತ್ತಿರುವುದು ತಲೆನೋವು ತಂದಿದೆ. ಉಭಯ ರಾಜ್ಯಗಳ ಜನರು ಬಂದ್ ಆಗಿರುವ ಬ್ಯಾರೇಜುಗಳ ಮೇಲೆ ಸಂಚಾರ ಮಾಡುತ್ತಿರುವುದು ಕೊರೊನಾ ಅಲೆ ತಡೆಯಲು ಕ್ರಮ ತೆಗೆದುಕೊಂಡಿದ್ದ ಪೊಲೀಸರಿಗೂ ಕಿರಿಕಿರಿ ಉಂಟು ಮಾಡಿದೆ.

 

Leave a Reply

ಹೊಸ ಪೋಸ್ಟ್‌