ಕೊಳ್ಳೆಗಾಲ ಶಾಸಕ ಎನ್. ಮಹೇಶ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ- ಇನ್ನಷ್ಟು ನಾಯಕರು ಬಿಜೆಪೆ ಸೇರಲಿದ್ದಾರೆ ಎಂದ ಸಿಎಂ

ಬೆಂಗಳೂರು: ಬಿಎಸ್ಪಿಯಿಂದ ಉಚ್ಛಾಟಿತರಾಗಿರುವ ಕೊಳ್ಳೆಗಾಲ ಶಾಸಕ ಎನ್. ಮಹೇಶ ಅಂತೂ ಇಂತೂ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಯಡಿಯೂರಪ್ಪ ಸಿಎಂ ಆಗಿದ್ದಾಗ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಬಿಎಸ್ಪಿಯಿಂದ ಎನ್. ಮಹೇಶ ಅವರನ್ನು ಉಚ್ಛಾಟಿಸಲಾಗಿತ್ತು. ಈಗ ಎನ್. ಮಹೇಶ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ಅವರು ಎನ್. ಮಹೇಶ ಅವರನ್ನು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಎನ್. ಮಹೇಶ ನನ್ನ ಆತ್ಮೀಯ ಸ್ನೇಹಿತ. ಚಳವಳಿಯಿಂದ ಬಂದವರು. ಅವರ ಸಂಘಟನಾ ಸಕ್ತಿ ಬಹಳ ದೊಡ್ಡದಿದೆ. ಹೀಗಾಗಿ ಅವರು ಶಾಸಕರಾಗುವುದಕ್ಕಿಂತಲೂ ಮುಂಚೆಯೇ ದಲಿತ ಸಮುದಾಯದ ಹೃದಯವನ್ನು ಗೆದ್ದವರು. ಅವರನ್ನು ಕೊಳ್ಳೆಗಾಲದ ಎಲ್ಲ ಸಮುದಾಯದ ಜನ ಒಗ್ಗಟ್ಟಿನಿಂದ ಆಯ್ಕೆ ಮಾಡಿದ್ದಾರೆ. ಅವರ ಚಿಂತನೆ ಮತ್ತು ಬಿಜೆಪಿ ಚಿಂತನೆ ಬೇರೆಯಲ್ಲ ಎಂಬುದು ಅವರಿಗೆ ಮನವರಿಕೆಯಾದ ಮೇಲೆ ಮತ್ತು ಸರ್ವೆಜನ ಸುಖಿನೋಭವಂತೋ ಎಂಬ ಬಿಜೆಪಿ ತತ್ವ ಅವರಿಗೂ ಮನವರಿಕೆಯಾಗಿದೆ. ಯಡಿಯೂರಪ್ಪ ಸಿಎಂ ಆದ ಬಳಿಕ ಅವರು ಸ್ವಯಂ ಪ್ರೇರಿತರಾಗಿ ಬಂದು ಬಿಜೆಪಿ ಸರಕಾರಕ್ಕೆ ಬೆಂಬಲ ನೀಡಿದ್ದರು. ಒಂದು ಒಳ್ಳೆಯ ಸರಕಾರ ಬರುತ್ತದೆ. ಯಡಿಯೂರಪ್ಪ ನಾಯಕತ್ವದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯಾಗುತ್ತದೆ. ತುಳಿತಕ್ಕೊಳಪಟ್ಟವರಿಗೆ ವಿಶೇಷವಾದ ಸ್ವಾಭಿಮಾನ ಬದುಕನ್ನು ನೀಡುತ್ತಾರೆ ಎಂಬ ಕಾರಣದಿಂದ ಅವರು ಅಂದು ಬಿಜೆಪಿಗೆ ಬೆಂಬಲಿಸಿದ್ದರು ಎಂದು ತಿಳಿಸಿದರು.

ಎರಡು ವರ್ಷದಿಂದ ಬಿಜೆಪಿ ಮತ್ತು ಯಡಿಯೂರಪ್ಪ ಜೊತೆ ಇರುವ ಸಂಬಂಧ ಮತ್ತು ಅನುಭವ ಅವರು ಬಿಜೆಪಿ ಸೇರ್ಪಡೆಯಾಗಲು ಪ್ರಮುಖ ಕಾರಣವಾಗಿದೆ. ಬಿಜೆಪಿ ವತಿಯಿಂದ ಅವರಿಗೆ ಹೃದಯ ಪೂರ್ವಕವಾಗಿ ಸ್ವಾಗತ ಮಾಡುತ್ತೇನೆ. ಅವರಲ್ಲಿ ದೊಡ್ಡ ಸಂಘಟನೆ ಶಕ್ತಿಯಿದೆ. ಅವರ ಸೇವೆ ಇಡಿ ರಾಜ್ಯಕ್ಕೆ ಆಗಲಿ. ಅವರ ಸೇವೆಯನ್ನು ಬಿಜೆಪಿ ಪಡೆದುಕೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

ಮೈಸೂರು ಭಾಗದಲ್ಲಿ ಬಿಜೆಪಿ ಯುವ ಜನಪ್ರೀಯ ನಾಯಕ ವಿಜಯೇಂದ್ರ ವಾರಕ್ಕೆ ಒಮ್ಮೆಯಾದರೂ ಹಳ್ಳಿಗಳಲ್ಲಿ ಸುತ್ತಾಡಿ ಪಕ್ಷದ ಸಂಘಟನೆಯನ್ನು ಗಟ್ಟಿಯಾಗಿ ಮಾಡಿದ್ದಾರೆ. ಅವರ ಶ್ರಮಕ್ಕೆ ಮಹೇಶ ಅವರ ಶಕ್ತಿ ಸೇರಿದರೆ ಬರುವ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಹೊಡೆಯಲಿದೆ ಎಂಬ ವಿಶ್ವಾಸವಿದೆ. ಮಹೇಶ ಸೇರ್ಪಡೆಯಿಂದ ಒಂದು ದೊಡ್ಡ ಬಲ ನಮ್ಮ ಪಕ್ಷಕ್ಕೆ ಬಂದಿದೆ. ಅವರ ಸೇರ್ಪಡೆಗೆ ಯಡಿಯೂರಪ್ಪ ಅವರ ಆಶೀರ್ವಾದವೂ ಇರುವುದರಿಂದ ಆ ಭಾಗದಲ್ಲಿ ಸಾಮರಸ್ಯದ, ಸಹೋದರತ್ವದ ಸಾಮಾಜಿಕ ನೆಲೆಗಟ್ಟು ಇಂದಿನಿಂದ ಸ್ಥಾಪನೆಯಾಗಿದೆ. ಇನ್ನೂ ಹಲವಾರು ಸಮುದಾಯದ ನಾಯಕರು ಬಿಜೆಪಿ ಸೇರಲಿದ್ದಾರೆ. ಇದರಿಂದ ಒಂದು ಒಳ್ಳೆಯ ಸಂದೇಶ ರಾಜ್ಯಕ್ಕೆ ಹೋಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಗೋವಿಂದ ಕಾರಜೋಳ, ಸಚಿವರಾದ ಗೋವಿಂದ ಕಾರಜೋಳ, ಆರ್. ಅಶೋಕ, ಎಸ್. ಟಿ. ಸೋಮಶೇಖರ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

.

Leave a Reply

ಹೊಸ ಪೋಸ್ಟ್‌