ಬೆಂಗಳೂರು : ಮಾನವೀಯ ಮೌಲ್ಯಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಅಳವಡಿಸುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತವೆ. ಅಲ್ಲದೇ, ನ್ಯಾಯಾಂಗ ಇನ್ನಷ್ಟು ಮಾನವೀಯ ಹಾಗೂ ಜನಸ್ನೇಹಿಯಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಹುಬ್ಬಳ್ಳಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ವಿಜ್ಞಾನೇಶ್ವರ ಅಧ್ಯಯನ ಪೀಠವು ಏರ್ಪಡಿಸಿದ್ದ ಕರ್ನಾಟಕದಲ್ಲಿ ಮಿತಾಕ್ಷರ, ವಚನ ದಾಸ ಮತ್ತು ಜಾನಪದ ಸಾಹಿತ್ಯದಲ್ಲಿ ಕಾನೂನಿನ ಸಮಾಜಮುಖಿ ಮೌಲ್ಯಗಳು- ಒಂದು ಪರಿಶೋಧನೆ ಕುರಿತ ವೆಬಿನಾರ್ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ವಚನ, ದಾಸ ಸಾಹಿತ್ಯ ಹಾಗೂ ಜಾನಪದ ಸಾಹಿತ್ಯಗಳು ಸಮಾನತೆ, ಸಹಿಷ್ಣುತೆ, ಧನ್ಯತೆ, ಕ್ಷಮಾಗುಣ ಮೊದಲಾದ ಭಾವಗಳನ್ನು ಸಮರ್ಥವಾಗಿ ಅಭಿವ್ಯಕ್ತಪಡಿಸಿವೆ. ಈ ಮೌಲ್ಯಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಅಳವಡಿಸುವ ನಿಟ್ಟಿನಲ್ಲಿ ವಿಜ್ಞಾನೇಶ್ವರ ಅಧ್ಯಯನ ಪೀಠ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಸಮಾಜದಲ್ಲಿನ ಬದಲಾವಣೆಗಳೊಂದಿಗೆ ಕಾನೂನಿನಲ್ಲಿಯೂ ಪರಿವರ್ತನೆಗಳಾಗಿವೆ. ಇಂದಿನ ದಿನಗಳಲ್ಲಿ ಸಾಮಾಜಿಕ ಸ್ಥಿತಿಗತಿಗಳಲ್ಲಿ, ವ್ಯಕ್ತಿ-ವ್ಯಕ್ತಿಯ ಸಂಬಂಧದಲ್ಲಿ, ಸಮಾಜ- ಸಮಾಜದ ಸಂಬಂಧದಲ್ಲಿ ಅಗಾಧ ಬದಲಾವಣೆಗಳಾಗುತ್ತಿದೆ. ಅದೇ ರೀತಿ ಕಾನೂನಿನ ಕುರಿತ ಜನತೆಯ ಚಿಂತನೆಯಲ್ಲಿಯೂ ಬದಲಾವಣೆಗಳಾಗುತ್ತಿದೆ. ಈ ಅಂಶಗಳ ಕುರಿತು ಅಧ್ಯಯನ ಪೀಠ ಅಧ್ಯಯನ ನಡೆಸಬೇಕು ಎಂದು ಅವರು ತಿಳಿಸಿದರು.
ಕರ್ನಾಟಕದ ಸಾಹಿತ್ಯ ಕ್ಷೇತ್ರದ ಕ್ರಾಂತಿ ಗಮನಾರ್ಹವಾದುದು. ನಮ್ಮ ದೇಶದ ಕಾನೂನಿಗೆ ಆಧಾರವಾದ ಸಂವಿಧಾನದ ಆಶಯಗಳು ಬಸವಣ್ಣನವರ ಚಿಂತನೆಗಳನ್ನೇ ಬಿಂಬಿಸುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟರು.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಆಸಕ್ತಿ ವಹಿಸಿ ಸ್ಥಾಪಿಸಿದ ಈ ಅಧ್ಯಯನ ಪೀಠವು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಜ್ಞಾನೇಶ್ವರ ಅಧ್ಯಯನ ಪೀಠದ ಅಧ್ಯಕ್ಷ, ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ, ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಬಿ. ಎನ್. ಶ್ರೀಕೃಷ್ಣ, ಕರ್ನಾಟಕ ಕಾನೂನು ವಿವಿ ಕುಲಪತಿ ಪ್ರೊ. ಈಶ್ವರ ಭಟ್, ಸಚಿವರಾದ ವಿ. ಸೋಮಣ್ಣ, ಡಾ. ಕೆ. ಸುಧಾಕರ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಗಿರೀಶ ಹೊಸೂರು ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.