ಬಸವ ನಾಡಿನಲ್ಲಿ ಗಮನ ಸೆಳೆಯುತ್ತಿದೆ ಅಣ್ಣ-ತಂಗಿಯರ ಸಂಬಂಧವನ್ನು ಪರಿಸರದೊಂದಿಗೆ ಬೆಸೆಯುವ ವಿಕಲ ಚೇತನರ ಸಂಸ್ಥೆಯ ವಿನೂತನ ಪ್ರಯತ್ನ

ವಿಜಯಪುರ: ರಕ್ಷಾ ಬಂಧನ ಅಣ್ಣ-ತಂಗಿಯರ ಬಾಂಧವ್ಯವನ್ನು ಬೆಸೆಯುವ ಮಧುರ ಹಬ್ಬ. ಈ ರಕ್ಷಾ ಬಂಧನವನ್ನು ಪರಿಸರದೊಂದಿಗೆ ಬೆಸಯುವ ವಿನೂತನ ಪ್ರಯತ್ನಕ್ಕೆ ಬಸವ ನಾಡಿನ ವಿಕಲ ಚೇತನ ಕಲ್ಯಾಣ ಸಂಸ್ಥೆ ಮುಂದಾಗಿದೆ.  

ಇಲ್ಲಿ ಸ್ವ ಕಾರ್ಯದ ಜೊತೆಗೆ ಸ್ವಾಮಿ ಕಾರ್ಯ ಮಾತ್ರವಲ್ಲ ಪರಿಸರ ಕಾರ್ಯಕ್ಕೂ ಸಂಬಂಧ ಬೆಸೆಯುವ ಮೂಲಕ ಇವರು ನಡೆಸುತ್ತಿರುವ ಈ ಕಾಯಕ ಗಮನ ಸೆಳೆದಿದೆ. ರಕ್ಷಾ ಬಂಧನವೆಂದರೆ ಸಾಕು ತರಹೇವಾರಿ ರಾಖಿಗಳು ಎಲ್ಲೆಗೆ ರಾರಾಜಿಸುತ್ತಿರುವತ್ತವೆ. ಆದರೆ, ರಕ್ಷಾ ಬಂದನ ಹಬ್ಬ ಮುಗಿದ ಬಳಿಕ ಕೈಗೆ ಸಹೋದರಿಯರು ಕಟ್ಟಿರುವ ರಾಖಿಗಳು ಕಸದ ಬುಟ್ಟಿ ಇಲ್ಲವೇ ತಿಪ್ಪೆಗುಂಡಿಯಲ್ಲಿ ಕಾಣ ಸಿಗುವುದು ಮಾಮೂಲು. ಇದು ಪರಿಸರಕ್ಕೂ ಮಾರಕವಾಗುತ್ತಿದೆ. ಇವುಗಳನ್ನು ಸೇವಿಸುವ ಪಕ್ಷಿಗಳು, ಜಾನುವಾರುಗಳು ಜೀವ ತೆರುವ ದುಸ್ಥಿತಿ ಎದುರಾದರೆ, ಈ ತ್ಯಾಜ್ಯಗಳು ನೀರನ್ನು ಸೇರಿ ಜಲಚರಗಳಿಗೂ ಅಪಾಯಕಾರಿಯಾಗುತ್ತಿವೆ.

ಆದರೆ, ಬಸವ ನಾಡು ವಿಜಯಪುರದ ಶ್ರೀಮತಿ ವಿಜಯಲಕ್ಷ್ಮಿ ಸರ್ವೊತ್ತಮ ದೇಶಪಾಂಡೆ ಸೋಶಿಯಲ್ ಆ್ಯಂಡ ವೆಲಪೇರ್ ಸಂಸ್ಥೆ ಈ ಬಾರಿ ಪರಿಸರಕ್ಕೆ ಪೂರಕವಾಗಿರುವ ಮತ್ತು ಜನರಿಗೂ ಮೆಚ್ಚುಗೆಯಾಗುವ ರಾಖಿ ತಯಾರಿಸುವ ಮೂಲಕ ಗಮನ ಸೆಳೆದಿವೆ. ಈ ರಾಖಿಯನ್ನು ಕಟ್ಟಿಕೊಂಡ ನಂತರ ಇವುಗಳನ್ನು ಬಿಸಾಕಿದರೆ ಸಾಕು ಅಲ್ಲಿ ತುಳಸಿ ಗಿಡಗಳು ಮೊಳಕೆಯೊಡೆದು ಪರಿಸರಕ್ಕೂ ಪೂರಕವಾಗುತ್ತವೆ.

ಇಂಥದ್ದೊಂದು ವಿನೂತನ ಕಲ್ಪನೆಯನ್ನು ಜಾರಿಗೆ ತಂದಿರುವ ಈ ಸಂಸ್ಥೆ ವಿಕಲ ಚೇತನ ಮಕ್ಕಳ ಪೋಷಕರ ಮೂಲಕವೇ ಈ ಕಾರ್ಯ ಮಾಡುತ್ತಿರುವುದು ವಿಶೇಷವಾಗಿದೆ. ಈ ಪರಿಸರ ಸ್ನೇಹಿ ರಾಖಿಗಳು ಪಂಚಗವ್ಯ ಅಂದರೆ ಸಗಣಿ, ಗೋಮೂತ್ರ, ತುಪ್ಪ, ಹುಣಸೆ ಬೀಜ ಹಾಗೂ ನೈಸರ್ಗಿಕವಾದ ಅಂಟಿನಿಂದ ತಯಾರಾಗಿವೆ. ರಾಖಿಯ ಮೇಲ್ಭಾಗದಲ್ಲಿ ತುಳಸಿ ಬೀಜಗಳನ್ನು ಅಂಟಿಸಲಾಗಿದ್ದು, ರಕ್ಷ ಬಂಧನ ಹಬ್ಬ ಮುಗಿದ ಮರುದಿನ ಈ ರಾಖಿಯನ್ನು ಹೂವಿನ ಕುಂಡದಲ್ಲಿ ಇಟ್ಟು ಮಣ್ಣಿನಿಂದ ಮುಚಿದರೆ ಸಾಕು. ರಾಖಿಯು ಕ್ರಮೇಣವಾಗಿ ಕರಗಿ ಗೊಬ್ಬರವಾಗಿ ತುಳಸಿ ಬೀಜ ಮೊಳಕೆಯೊಡೆಯಲು ಅನುಕೂಲವಾಗುತ್ತದೆ. ಅಪ್ಪಿತಪ್ಪಿ ಈ ರಾಖಿಯನ್ನು ಹೊರಗೆ ಬಿಸಾಡಿದರು ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎನ್ನುತ್ತಾರೆ ಸಂಸ್ಥೆಯ ಅಧ್ಯಕ್ಷ ಪ್ರಶಾಂತ ದೇಶಪಾಂಡೆ.

ಈ ರಾಖಿಗಳೂ ಕೂಡ ನೋಡಲು ಒಂದಕ್ಕಿಂದ ಮತ್ತೋಂದು ಅಂದವಾಗಿವೆ. ಅಷ್ಟೇ ಅಲ್ಲ, ಖರೀದಿಸಲೇಬೇಕು ಎಂಬಷ್ಟು ಚೆಂದವಾಗಿದವೆ. ಶುದ್ಧ ಸಗಣಿಯಿಂದ ಈ ರಾಖಿಗಳು ತಯಾರಾಗಿರುವುದರಿಂದ ಅವುಗಳ ಮೇಲೆ ಅಲಂಕಾರಿಕ ಸಾಧನಗಳನ್ನು ಲೇಪಿಸಲಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಪ್ಲಾಸ್ಟಿಕ್ ರಾಖಿಗಳಿಗಿಂತಲೂ ಇವು ಅಗ್ಗವಾಗಿವೆ.

ಈ ರಾಖಿಗಳನ್ನು ಮಾರಾಟ ಮಾಡಿ ಬರುವ ಹಣದಿಂದ ಈ ಸಂಸ್ಥೆಯಲ್ಲಿರುವ 40ಕ್ಕೂ ಹೆಚ್ಚು ವಿಕಲಚೇತನ ಮಕ್ಕಳ ಕಲ್ಯಾಣಕ್ಕಾಗಿ ಬಳಸಲು ಸಂಸ್ಥೆ ನಿರ್ಧರಿಸಿದೆ. ಲಾಕ್ ಡೌನ್ ಬಳಿಕ ಈ ಸಂಸ್ಥೆಯಲ್ಲಿ ಮಕ್ಕಳ ಊಟ ಮತ್ತು ಮಾತ್ರೆಗಳಿಗೆ ಸಾಕಷ್ಟು ಆರ್ಥಿಕ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸಂಸ್ಥೆಯಲ್ಲಿರುವ ವಿಕಲಚೇತನ ಮಕ್ಕಳ ಪೊಷಕರು ಈಗ ರಾಖಿ ಸಿದ್ಧಪಡಿಸುತ್ತಿದ್ದಾರೆ. ಈ ರಾಖಿ ಮಾರಾಟದ ಜವಾಬ್ದಾರಿಯನ್ನೂ ಹೊರುತ್ತಿದ್ದಾರೆ. ಇವರ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನುತ್ತಾರೆ ವಿಕಲಚೇತನ ಮಗುವಿನ ತಾಯಿ ಸುರೇಖಾ ಇಂಡಿ ಮತ್ತು ಸ್ಥಳೀಯ ನಿವಾಸಿ ಪ್ರಕಾಶ ಆರ್. ಕೆ.

ಒಟ್ಟಿನಲ್ಲಿ ಸಾರ್ವಜನಕನಿಕರು ಇನ್ನಾದರೂ ಪ್ಲಾಸ್ಟಿಕ್ ರಾಖಿ ಬಳಕೆ ಕೈಬಿಟ್ಟು ಪ್ರಾಣಿಗಳಿಗೆ ಹಾಗೂ ಪರಿಸರಕ್ಕೆ ಪೂರಕವಾಗಿರುವ ಇಂಥ ಪರಿಸರ ಸ್ನೇಹಿ ರಾಖಿ ಖರೀದಿಸಿ ಬಳಸುವ ಮೂಲಕ ಸಮಾಜವಷ್ಟೇ ಅಲ್ಲ ಪ್ರಕೃತಿಗೂ ನೆರವಾಗಲು ಸುವರ್ಣಾವಕಾಶ ದೊರೆತಂತಾಗಿದೆ. ಅಷ್ಟೇ ಅಲ್ಲ, ಈ ರಾಖಿ ಮಾರಾಟದಿಂದ ಸಿಗುವ ಹಣದಲ್ಲಿ ವಿಕಲ ಚೇತನ ಮಕ್ಕಳಿಗೂ ನೆರವಾಗುವುದರಲ್ಲಿ ಸಂಶಯವಿಲ್ಲ.

 

Leave a Reply

ಹೊಸ ಪೋಸ್ಟ್‌