ವಿಜಯಪುರ: ಕೆಲಸ ಮಾಡುವವರಿಗೆ ಜನತೆಗೆ ನ್ಯಾಯ ಒದಗಿಸಲು ಖಾತೆ ಯಾವುದಾದರೇನು? ಎಂದು ಪ್ರಶ್ನಿಸುವ ಮೂಲಕ ಮೂಲಕ ಮುಜರಾಯಿ, ಹಜ್ ಮತ್ತು ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ತಮಗೆ ನೀಡಿರುವ ಖಾತೆಯ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಭೇಟಿಯ ನಂತರ ಮಾತನಾಡಿದ ಅವರು, ಯಾವ ಖಾತೆ ಇದ್ದರೂ ಆ ಖಾತೆ ಯೋಜನೆಗಳನ್ನು ತಳಮಟ್ಟದ ಜನತೆಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎರಡು ವರ್ಷಗಳಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ ಸಮಾಧಾನವಿದೆ. ಉತ್ತರ ಕನ್ನಡ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ, ಸ್ವಂತ ಕ್ಷೇತ್ರದಲ್ಲಿ ಶಾಸಕಿಯಾಗಿಯೂ ಉತ್ತಮ ಕೆಲಸ ಮಾಡಿದ್ದೇನೆ. ನನ್ನ ಜವಾಬ್ದಾರಿಯನ್ನು ನಾನು ಸರಿಯಾಗಿ ನಿರ್ವಹಣೆ ಮಾಡಿದ್ದೇನೆ ಎಂದು ತಿಳಿಸಿದರು.
ಈಗ ವಹಿಸಿರುವ ಖಾತೆಯ ಯೋಜನೆಗಳನ್ನು ರಾಜ್ಯದ ಜನರಿಗೆ ಮುಟ್ಟಿಸುತ್ತೇನೆ. ಜೊತೆಗೆ ಪಕ್ಷ ಸಂಘಟನಯನ್ನೂ ಮಾಡುತ್ತೇನೆ. ಖಾತೆ ಹಂಚಿಕೆಯಲ್ಲಿ ಹಿಂಬಡ್ತಿ, ಮುಂಬಡ್ತಿ ಎಂಬುವುದಿಲ್ಲ. ಅದು ತಿಳಿದುಕೊಳ್ಳುವವರ ಮೇಲೆ ಹೋಗುತ್ತದೆ. ನಮಗೆ ಸಕಾರಾತ್ಮಕ ಚಿಂತನೆ ಇರಬೇಕು ಅಷ್ಟೇ ಎಂದು ಹೇಳಿದ ಸಚಿವೆ ಶಶಿಕಲಾ ಜೊಲ್ಲೆ, ಇದೇ ವೇಳೆ ಅಕ್ಕಮಹಾದೇವಿ ಅವರ ವಚನ ಹೇಳುವ ಮೂಲಕ ತಮ್ಮ ಪರಿಸ್ಥಿತಿಯನ್ನು ವಿವರಿಸಿದರು.
ಬೆಟ್ಟದ ಮೇಲೋಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೆಡೆಯಂತಯ್ಯ ಎಂದು ಹೇಳಿದ ಶಶಿಕಲಾ ಜೊಲ್ಲೆ, ನಾನು ರಾಜಕಾರಣ ಮಾಡುತ್ತಿದ್ದೇನೆ. ಓರ್ವ ಮಹಿಳೆಯಾಗಿ ಶಾಸಕಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷದ ವರಿಷ್ಠರು ನೀಡಿದ ಜವಾಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ತಿಳಿಸಿದರು.