ವಿಜಯಪುರ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯಲಗೂರ ವ್ಯಾಪ್ತಿಯಲ್ಲಿ ಪ್ರವಾಹದಿಂದಾದ ಬೆಳೆಹಾನಿಗೆ ಸಂಬಂಧಿಸಿದ ಸಮೀಕ್ಷೆ ಕಾರ್ಯ ಮುಗಿದಿದ್ದು, ಈ ಕುರಿತು ಸಂಪೂರ್ಣ ವರದಿ ಪಡೆದು ಸೂಕ್ತ ಮತ್ತು ತಕ್ಷಣ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಹಾಗೂ ಪ್ರವಾಹ ಮತ್ತು ಕೋವಿಡ್ ನಿರ್ವಹಣೆ ವಿಜಯಪುರ ಉಸ್ತುವಾರಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಪ್ರವಾಹ ಹಾನಿ ಪರಿಶೀಲನೆಗಾಗಿ ಯಲಗೂರು ಶ್ರೀ ಹನುಮಾನ್ ದೇವಸ್ಥಾನದ ದರ್ಶನ ಪಡೆದ ನಂತರ ಕೃಷ್ಣಾ ನದಿ ದಂಡೆಯ ಜಾಕ್‍ವೆಲ್ ಪರಿಶೀಲಿಸಿದ ಅವರು ಯಲಗೂರ ವ್ಯಾಪ್ತಿಯಲ್ಲಿ 465 ಹೆಕ್ಟೇರ್ ಬೆಳೆ ಹಾನಿ ವರದಿಯಾಗಿದೆ. ಕಬ್ಬು ಬೆಳೆ ಹೆಚ್ಚಿನ ರೀತಿಯಲ್ಲಿ ನಾಶವಾಗಿರುವ ಬಗ್ಗೆ ಮಾಹಿತಿಯಿದೆ. ಅಲ್ಲದೇ, ಹತ್ತಿ, ತೊಗರಿ, ಸೂರ್ಯಪಾನ ಸಹ ಹಾನಿಯಾಗಿದೆ. ಬೆಳೆಹಾನಿಗೆ ಸಂಬಂಧಿಸಿದಂತೆ ಸಮಿಕ್ಷೆ ಕಾರ್ಯ ನಡೆದಿದ್ದು, ಅದು ಪೂರ್ಣವಾದ ತಕ್ಷಣ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಪ್ರವಾಹ ಸಂದರ್ಭದಲ್ಲಿ ಜಾಕ್‍ವೆಲ್ ಮುಳುಗಿ ನಾಗರೀಕರಿಗೆ ನೀರಿನ ಸಮಸ್ಯೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಇದರ ಸ್ಥಳಾಂತರಕ್ಕೆ ನಾಗರೀಕರಿಂದ ಬೇಡಿಕೆ ಕೂಡ ಬಂದಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ನೀಡಲು ಸೂಚಿಸಲಾಗಿದೆ. ವರದಿ ಪಡೆದ ನಂತರ ಸರಕಾರದ ಹಂತದಲ್ಲಿ ಪ್ರಯತ್ನಿಸಿ ನಾಗರೀಕರಿಗೆ ತೊಂದರೆಯಾಗದಂತೆ ಅದನ್ನು ಸ್ಥಳಾಂತರ ಮಾಡಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.
ಕಳೆದ ವರ್ಷ ಕೊರೊನಾ, ಬರಗಾಲ ಹಾಗೂ ಪ್ರವಾಹ ಏಕಕಾಲಕಕ್ಕೆ ಬಂದಿರುವುದರಿಂದ ಇವುಗಳನ್ನು ಸಮರ್ಪಕ ನಿಭಾಯಿಸಲಾಗಿದೆ. ಅದರಂತೆ ಜಿಲ್ಲಾಡಳಿತ, ತಾಲೂಕಾಡಳಿತ, ಶಾಸಕರು ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಪ್ರವಾಹ ಮತ್ತು ಕೋವಿಡ್ ಎರಡನೇ ಅಲೆ ಸಮರ್ಪಕವಾಗಿ ನಿಭಾಯಿದ್ದೇವೆ. ಇದಕ್ಕಾಗಿ ಮಾಧ್ಯಮ ಸಹೋದರರ ಸಹಕಾರಕ್ಕೆ ಅಭಿನಂದಿಸಿವೆ ಎಂದು ತಿಳಿಸಿದ ಅವರು, ಕೊರೊನಾ ಮೂರನೇ ಅಲೆ ಎದುರಿಸಲು ಸರ್ವ ರೀತಿಯಲ್ಲಿ ಸನ್ನದ್ಧರಾಗುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಇತ್ತೀಚೆಗೆ ಪ್ರವಾಹ ಸಂದರ್ಭದಲ್ಲಿ ಜನರಿಗೆ ಆಗಿರುವ ತೊಂದರೆ ನಿಭಾಯಿಸಲು ಮತ್ತು ಅವರ ಸಂಕಷ್ಟಕ್ಕೆ ಸ್ಪಂದಿಸಲು ಇಂದು ಪ್ರವಾಹ ಹಾನಿ ಪ್ರದೇಶಗಳಾದ ಯಲಗೂರ, ತಂಗಡಗಿ, ಕಮಲದಿನ್ನಿ ಮತ್ತು ಗಂಗೂರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ತೊಂದರೆಗೀಡಾದ ನಾಗರೀಕರಿಗೆ ಎಲ್ಲ ರೀತಿಯಿಂದ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಪ್ರವಾಹದಿಂದ ಮುದ್ದೇಬಿಹಾಳ ತಾಲೂಕಿನ ಇಂತಹ ಗ್ರಾಮಗಳು ಪದೇ ಪದೇ ಪ್ರವಾಹಕ್ಕೆ ತುತ್ತಾಗಿ ತೀವ್ರ ಸಂಕಷ್ಟ ಎದುರಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಅದರಂತೆ ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೂ ತೊಂದರೆಯಾಗುತ್ತಿರುವುದು ಸಹ ಗಮನಕ್ಕೆ ಬಂದಿದೆ. ಈ ಕುರಿತು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ತಂಗಡಗಿಯಿಂದ ದೇವಗಿರಿವರೆಗೆ ನದಿ ದಡದಲ್ಲಿ 9.50 ಕಿ. ಮೀ. ರಸ್ತೆ ಹಾನಿಯಾಗಿದ್ದು, 17 ಹಳ್ಳಿಗಳು ಜಲಾವೃತಗೊಂಡು ಜನರ ರಕ್ಷಣೆ ಸಹ ಕಷ್ಟವಾಗುತ್ತಿದೆ. ಈ ರಸ್ತೆಯನ್ನು 2 ಮೀ.ನಷ್ಟು ಎತ್ತರಿಸಿ 7.50 ಮೀ ನಷ್ಟು ಅಗಲ ಮಾಡಿ ತಡೆಗೋಡೆ ರೀತಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕೃಷ್ಣಾ ನದಿ ದಡದಲ್ಲಿರುವ ಎಸ್ಸಿ, ಎಸ್ಟಿ ಕಾಲನಿಗಳು ಪ್ರವಾಹದಿಂದಾಗಿ ಪ್ರಭಾವಿತವಾಗಿವೆ. ಶಾಸಕರು ಕೂಡ ಇಂಥ ಬಡಜನರಿಗೆ ಮನೆ ನಿರ್ಮಿಸಿ ಕೊಡಲು ತಲಾ ರೂ. 11.25 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುವ ಪ್ರಸ್ತಾವನೆ ನೀಡಿದ್ದಾರೆ. ಸರಕಾರದ ಮಟ್ಟದಲ್ಲಿ ಈ ಕುರಿತು ಪ್ರಯತ್ನ ಮಾಡಿ ಸೂಕ್ತ ಕ್ರಮ ಕೈಗೊಲ್ಳುವುದಾಗಿ ಶಶಿಕಲಾ ಜೊಲ್ಲೆ ತಿಳಿಸಿದರು.
ಕಮಲದಿನ್ನಿ ಗ್ರಾಮದ ಹಣಮವ್ವ, ಸಂಗಪ್ಪ ಕಾಶೀಬಾಯಿ ಅವರಿಗೆ ಧನ ಸಹಾಯ ನೀಡಿ ಮಾನವೀಯತೆ ಮೆರೆದ ಸಚಿವೆ ಶಶಿಕಲಾ ಜೊಲ್ಲೆ
ಇದೇ ವೇಳೆ, ಕಮಲದಿನ್ನಿ ಗ್ರಾಮದ ಹಣಮವ್ವ ಸಂಗಪ್ಪ ಕಾಶೀಬಾಯಿ ಎಂಬ ವೃದ್ಧ ಮಹಿಳೆಯು ಒಬ್ಬಂಟಿಯಾಗಿ ಮನೆಯಲ್ಲಿ ವಾಸವಿದ್ದು, ಇತ್ತೀಚೆಗೆ ಬಂದ ಪ್ರವಾಹ ಮತ್ತು ಮಳೆಯಿಂದಾಗಿ ಮನೆಗೆ ತೀವ್ರ ಹಾನಿಯಾಗಿದೆ. ಅಪಾಯ ಅಂಚಿನಲ್ಲಿರುವದರಿಂದಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಗಮನ ಹರಿಸಲು ಅಧಿಕಾರಿಗಳಿಗೆ ತಿಳಿಸಿದ ಅವರು ಖರ್ಚಿಗಾಗಿ ಧನ ಸಹಾಯ ನೀಡುವ ಮೂಲಕ ಮಾನವೀಯತೆ ಮೆರೆದರು.
ತಾವು ಈ ಹಿಂದೆಯೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಅತ್ಯುತ್ತಮವಾಗಿ ನಿಭಾಯಿಸಿದ್ದು, ರಾಜ್ಯಾದ್ಯಂತ ಸಂಚರಿಸಿ ತಮ್ಮ ಜವಾಬ್ದಾರಿ ನಿರ್ವಹಿಸಿ ಜನರಿಗೆ ನೆರವಾಗಿದ್ದೇನೆ. ಸದ್ಯದ ಖಾತೆಯಲ್ಲಿಯೂ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುವುದಾಗಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಈ ಸಂದರ್ಭದಲ್ಲಿ ಮುದ್ದೇಬಿಹಾಳ ಶಾಸಕ ಎ.ಎಸ್ ಪಾಟೀಲ ನಡಹಳ್ಳಿ ಅವರು ಮುದ್ದೇಬಿಹಾಳ ತಾಲೂಕಿನಲ್ಲಿ ಪದೇ ಪದೇ ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳ ಹಾಗೂ ಪರಿಹಾರದ ಬಗ್ಗೆ ಸಚಿವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಎಸ್ಪಿ ಎಚ್. ಡಿ. ಆನಂದ ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ತಹಸೀಲ್ದಾರ ವಿಜಯ ಕಡಕಭಾವಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ರಾಜಶೇಖರ ವಿಲಿಯಮ್ಸ್, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಪ್ರಾಣೇಶ ಜಹಾಗಿರದಾ, ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.