ವಿಜಯಪುರ: ಭೀಮಾ ತೀರದ ತಾರಾಪುರ ಗ್ರಾಮಸ್ಥರು ಈಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ದಶಕಗಳಿಂದ ಪ್ರವಾಹ ಬಂದರೆ ಸಾಕು ಸಂಕಷ್ಟಕ್ಕೆ ಸಿಲುಕುತ್ತಿದ್ದ ಇಲ್ಲಿನ ಗ್ರಾಮಸ್ಥರು ಸ್ಥಳಾಂತರ ನಿವೇಶನ ಹಂಚಿಕೆ ವಿವಾದದಿಂದಾಗಿ ಗೋಲಾಡುತ್ತಲೇ ಇದ್ದರು.
ಆದರೆ, ಈಗ ಕಳೆದ ವರ್ಷ ನೀಡಿದ ಭರವಸೆಯನ್ನು ಸಚಿವೆ ಶಶಿಕಲಾ ಜೊಲ್ಲೆ ಈಡೇರಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಭೀಮಾ ನದಿ ಪ್ರವಾಹಕ್ಕೆ ಸಿಲುಕಿ ಬದಕು ಕಳೆದುಕೊಂಡಿದ್ದ ತಾರಾಪುರ ಗ್ರಾಮದ ನಿರಾಶ್ರಿತರಿಗೆ ಹೊಸ ನಿವೇಶನಗಳ ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ದಶಕಗಳ ಜನರ ಬೇಡಿಕೆಯನ್ನು ಈಡೇರಿಸಿದ್ದಾರೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ತಾರಾಪುರ ಗ್ರಾಮದಲ್ಲಿ ಸೋಮವಾರ 47 ಜನರಿಗೆ ಹಕ್ಕು ಪತ್ರ ವಿತರಣೆ ಮಾಡುವ ಮೂಲಕ ಅವರು ಈ ಗ್ರಾಮಸ್ಥರ ಸಮಸ್ಯೆಗೆ ಇತಿಶ್ರೀ ಹಾಡಿದ್ದಾರೆ.
2010 ರಿಂದ ಈ ಗ್ರಾಮದ ಸ್ಥಳಾಂತರ ಸಮಸ್ಯೆ ಹರಿಯದೇ ಉಳಿದಿತ್ತು. ಈಗ ನಿಜವಾದ ಫಲಾನುಭವಿಗಳಿಗೆ ಸಚಿವರಾದ ಶಶಿಕಲಾ ಜೊಲ್ಲೆಯವರು ಹಕ್ಕು ಪತ್ರ ವಿತರಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿದ್ದಾರೆ. ಭೀಮಾ ಏತನೀರಾವರಿ ಯೋಜನೆಯಲ್ಲಿ ಮನೆಗಳನ್ನು ಕಳೆದುಕೊಂಡಿದ್ದ ತಾರಾಪುರ ಗ್ರಾಮದ ಜನರು ಪುನರ್ವಸತಿಗಾಗಿ ಬದಲಿ ನಿವೇಶನದ ಹಕ್ಕು ಪತ್ರ ನೀಡುವಂತೆ ನಿರಂತರ ಹೋರಾಟ ನಡೆಸುತ್ತಿದ್ದರು. ಆದರೆ, ಸುಮಾರು 11 ವರ್ಷಗಳಿಂದ ಈ ಗ್ರಾಮದ ಜನರ ಸಮಸ್ಯೆಗೆ ಯಾರೂ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿರಲಿಲ್ಲ. 2016 ರಲ್ಲಿ ಅಂದಿನ ಸಿಂದಗಿ ಕ್ಷೇತ್ರದ ಶಾಸಕರಾಗಿದ್ದ ರಮೇಶ ಬೂಸನೂರ ಅವರ ಅಧ್ಯಕ್ಷತೆಯಲ್ಲಿ ಸುಮಾರು 18 ಎಕರೆ ಜಾಗದಲ್ಲಿ 199 ನಿವೇಶನಗಳ ಹಂಚಿಕೆ ಮಾಡಿದ್ದರು.
ಆದರೆ, ಈ ನಿವೇಶನಗಳ. ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ನಿವೇಶನ ಹಕ್ಕು ಪತ್ರ ಹಂಚಿಕೆ ಪ್ರಕ್ರಿಯೆ ತಡೆಯೊಡ್ಡಿದ್ದರು. ಈ ಮಧ್ಯೆ, 2020 ರಲ್ಲಿ ಭೀಮಾ ನದಿಯಲ್ಲಿ ಪ್ರವಾಹ ಉಂಟಾಗಿ ತಾರಾಪುರ ಗ್ರಾಮ ಸಂಪೂರ್ಣ ಜಲಾವೃತವಾಗಿತ್ತು. ಆ ಸಂದರ್ಭದಲ್ಲಿ ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಆಗ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ. ತಾರಾಪುರ ಗ್ರಾಮಕ್ಕೆ ಭೇಟಿ ನೀಡಿ, ಮನೆ ಮಠ ಕಳೆದುಕೊಂಡಿದ್ದ ಜನರಿಗೆ ಪುನರ್ವಸತಿ ಕಲ್ಪಿಸಿ ಹಕ್ಕು ಪತ್ರ ವಿತರಿಸುವ ಭರವಸೆ ನೀಡಿದ್ದರು.
ಅಲ್ಲದೇ 2016 ರಲ್ಲಿ ಹಂಚಿಕೆಯಾದ ಹಕ್ಕುಪತ್ರಗಳ ತಾರತಮ್ಯ ಸರಿಪಡಿಸಲು ಸಿಂದಗಿ ತಹಸೀಲ್ದಾರ, ಸಿಂದಗಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಕೆ ಎನ್ ಎನ್ ಎಲ್ ಅಫಜಲಪುರ್ ಸಹಾಯಕ ಕಾರ್ಯ ನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಜಂಟಿ ಸಮಿತಿ ರಚನೆ ಮಾಡಿ, ತಕ್ಷಣ ವರದಿ ನೀಡುವಂತೆ ಸೂಚಿಸಿದ್ದರು.
ಸಚಿವೆ ಶಶಿಕಲಾ ಜೊಲ್ಲೆ ಅವರ ಸೂಚನೆಯಂತೆ 2021 ರ ಫೆಬ್ರವರಿಯಲ್ಲಿ ಫಲಾನುಭವಿಗಳ ಆಯ್ಕೆಯ ತಾತ್ಕಾಲಿಕ ಪಟ್ಟಿ ಪ್ರಕಟಿಸಿ, ಸರ್ವಾಜನಿಕರಿಂದ ಆಕ್ಷೇಪಣೆಗೆ ಅವಕಾಶ ಕಲ್ಪಿಸಿ ಅಂತಿಮವಾಗಿ 2021 ರ ಏಪ್ರಿಲ್ ನಲ್ಲಿ ಫಲಾನುಭವಿಗಳ ಅಂತಿಮ ಮಟ್ಟಿ ಸಿದ್ದಪಡಿಸಿ 19 ನಿವೇಶನಗಳನ್ನು ವಾಪಸ್ ಪಡೆದು,47 ಜನರಿಗೆ ಹಕ್ಕು ಪತ್ರ ವಿತರಿಸಲು ತೀರ್ಮಾನಿಸಲಾಗಿತ್ತು.
ಆ ಹಿನ್ನೆಲೆಯಲ್ಲಿ ಕಳೆದ 2020 ರ ಅಕ್ಟೋಬರ್ ತಿಂಗಳಿನಲ್ಲಿ ತಾರಾಪುರ ಗ್ರಾಮದ ಜನತೆಗೆ ಮಾತು ಕೊಟ್ಟಂತೆ ಸಚಿವೆ ಶಶಿಕಲಾ ಜೊಲ್ಲೆ ಅವರು ಈಗ 47 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ್ದಾರೆ. ಕೊಟ್ಟ ಮಾತಿನಂತೆ ತಾರಾಪುರ ಗ್ರಾಮದ ಜನರ ಬೇಡಿಕೆ ಈಡೇರಿಸಿ ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಇಂಡಿ ಉಪವಿಭಾಗಾಧಿಕಾರಿ ರಾಹುಲ ಸಿಂಧೆ ಕ್ರಮ ಶ್ಲಾಘನೀಯ
ಇಲ್ಲಿ ಸಚಿವರ ಯೋಚನೆಯನ್ನು ಅಕ್ಷರಶಃ ಜಾರಿಗೆ ತರಲು ಶ್ರಮಿಸಿದವರು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಇಂಡಿ ಉಪವಿಭಾಗಾಧಿಕಾರಿ ರಾಹುಲ ಸಿಂಧೆ. ಕಳೆದ ವರ್ಷ ಸಚಿವರು ಈ ಗ್ರಾಮಕ್ಕೆ ಭೇಟಿ ನೀಡಿ ಹೋದಾಗಿನಿಂದ ಇಂಡಿ ಉಪವಿಭಾಗಾಧಿಕಾರಿ ರಾಹುಲ ಸಿಂಧೆ ಅವರು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾರ್ಗದರ್ಶನದಂತೆ ದಶಕದ ಸಮಸ್ಯೆಗೆ ತಮ್ಮ ಅವಧಿಯಲ್ಲಿಯೇ ಬಗೆಹರಿಸಲು ಛಲ ಬಿಡದ ತ್ರಿವಿಕ್ರಮನಂತೆ ಸತತ ಕೆಲಸ ಮಾಡಿದ್ದಾರೆ. ಅಲ್ಲದೇ, ಗ್ರಾಮಸ್ಥರ ಮನವೊಲೀಸಲು ಅಧಿಕಾರಿ ಎಂಬ ಹಂಗು ತೋರದೆ ಜನಸಾಮಾನ್ಯರಲ್ಲಿ ಒಬ್ಬರಂತಾಗಿ ತಾರಾಪುರ ಗ್ರಾಮಸ್ಥರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ಲಾಟರಿ ಮೂಲಕ 47 ಜನರಿಗೆ ನಿವೇಶನ ಹಂಚುವ ಮೂಲಕ ಯಾವುದೇ ಅಸಮಾಧಾನಕ್ಕೆ ಅವಕಾಶ ಇಲ್ಲದಂತೆ ಮಾಡಿದ್ದಾರೆ.
ಈಗ ತಮಗೆ ನಿವೇಶನ ನೀಡಲಾಗಿದ್ದರೂ, ಸರಕಾರದ ಯಾವುದಾದರೊಂದು ಯೋಜನೆಯಡಿ ಎಲ್ಲ ಫಲಾನುಭವಿಗಳಿಗೆ ಮನೆ ನಿರ್ಮಿಸಿ ಕೊಡಬೇಕು. ಇದರಿಂದ ತಮ್ಮ ಬಾಳು ಹಸನಾಗುತ್ತದೆ ಎಂದು ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ. ಇವರ ಬೇಡಿಕೆಗಳಿಗೆ ಸರಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಈ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಎಸ್ಪಿ ಎಚ್. ಡಿ. ಆನಂದ ಕುಮಾರ, ಜಿ. ಪಂ. ಸಿಇಓ ಗೋವಿಂದ ರೆಡ್ಡಿ, ವಿಧಾನ ಪರಿಷತ ಸದಸ್ಯರಾದ ಅರುಣ ಶಹಾಪುರ, ಹಣಮಂತ ನಿರಾಣಿ, ಲಿಂಬೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಅಲ್ಲಾಪುರ ಸೇರಿದಂತೆ ನಾನಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.