ಖಾತೆಯ ಬಗ್ಗೆ ಕ್ಯಾತೆ ತೆಗೆಯದೆ ಜನಸೇವೆಗೆ ಮಹತ್ವ ನೀಡುವುದು ಒಳ್ಳೆಯದು- ಸಚಿವೆ ಶಶಿಕಲಾ ಜೊಲ್ಲೆ

ವಿಜಯಪುರ: ಖಾತೆ ಕುರಿತು ಅಸಮಾಧಾನ ವ್ಯಕ್ತ ಪಡಿಸುವುದು ಅವರವರಿಗೆ ಬಿಟ್ಟ ವಿಚಾರ. ಕೆಲಸ ಮಾಡುವವರಿಗೆ ಯಾವ ಖಾತೆ ಯಾದರೇನು? ಎಂದು ಮುಜರಾಯಿ, ಹಜ್ ಮತ್ತು ವಕ್ಪ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ವಿಜಯಪುರದಲ್ಲಿ ಗ್ರಾಮದೇವತೆ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಕೆಲಸ ಮಾಡುವ ಮತ್ತು ಜನರಿಗೆ ಸ್ಪಂದನೆ ಮಾಡುವ ಇಚ್ಛೆ ಇದ್ದರೆ ಯಾವ ಖಾತೆಯಾದರೇನು? ಕೆಲಸ ಮಾಡಬಹುದು ಎಂದು ಖಾತೆ ವಿಚಾರವಾಗಿ ಅಸಮಾಧಾನಗೊಂಡಿರುವ ಸಚಿವರಿಗೆ ಸಚಿವೆ ಶಶಿಕಲಾ ಜೊಲ್ಲೆ ಟಾಂಗ್ ನೀಡಿದರು.

ಖಾತೆ ವಿಚಾರವಾಗಿ ಅಸಮಾಧಾನ ಸ್ಫೋಟಗೊಂಡಿರುವುದು ದೊಡ್ಡ ವಿಚಾರವಲ್ಲವೇನಲ್ಲ. ಈಗಿರುವ ಅಸಮಾಧಾನವನ್ನು ನಿವಾರಿಸಿಕೊಂಡು ಅವರವರ ಖಾತೆಯಲ್ಲಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಒಳ್ಳೆಯ ಸಿಎಂ, ಒಳ್ಳೆಯ ಕ್ಯಾಬಿನೆಟ್ ಇದೆ. ಎಲ್ಲರೂ ಕೂಡಿಕೊಂಡು ಟಿಂ ವರ್ಕ್ ಮಾಡುವ ಮೂಲಕ ರಾಜ್ಯದಲ್ಲಿ ಉತ್ತಮ ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದರು.

ರಾಜ್ಯದ ಅಭಿವೃದ್ಧಿಗೆ ಕಟಿಬದ್ಧರಾಗಿದ್ದೇವೆ. ಎಲ್ಲರ ಮನೆಯಂತೆ ನಮ್ಮ ಕುಟುಂಬದಲ್ಲಿ ಕೂಡ ಅಸಮಾಧಾನವಿದೆ. ಅವೆಲ್ಲವನ್ನೂ ಹಿರಿಯರು ಸರಿದೂಗಿಸಿಕೊಂಡು ಹೆಜ್ಜೆ ಇಡುತ್ತಾರೆಂಬ‌ ವಿಶ್ವಾಸವಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ರಾಜ್ಯ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಮಹಾನಗರ ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಮತ್ತು ಇತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌