ಬೆಂಗಳೂರು: ಇನ್ನು ಮುಂದೆ ಸರಕಾರ ಮತ್ತು ಸರಕಾರಿ ಸ್ವಾಮ್ಯದ ಸಂಸ್ಥೆಗಳು ಸಭೆಗಳಲ್ಲಿ ಹೂಗುಚ್ಛ, ಹಾರ, ಶಾಲುಗಳನ್ನು ನೀಡುವುದನ್ನು ನಿಷೇಧಿಸಿ ಶೀಘ್ರವೇ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಗೆ ಆಗಮಿಸಿದ ಸಿಎಂ, ಹೂಗುಚ್ಛ ಸ್ವೀಕರಿಸಲು ನಿರಾಕರಿಸಿದರು. ಇದು ಅನವಶ್ಯಕ ವೆಚ್ಚ. ಸಭೆಗಳಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹೂಗುಚ್ಛ, ಹಾರ, ಶಾಲುಗಳನ್ನು ನೀಡುವ ಅಗತ್ಯವಿಲ್ಲ. ಇನ್ನು ಮುಂದೆ ಆ ಸಂಪ್ರದಾಯ ಬೇಡ ಎಂದು ಅವರು ತಿಳಿಸಿದರು.
ಆದೇಶ ಪ್ರಕಟಿಸಿದ ಸರಕಾರ
ಸಿಎಂ ಈ ಆದೇಶವನ್ನು ಮೌಖಿಕವಾಗಿ ಹೇಳಿದ ತಕ್ಷಣ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ ಅವರು ಸರಕಾರಿ ಆದೇಶ ಜಾರಿ ಮಾಡಿದರು.
ಇನ್ನು ಮುಂದೆ ಹೂ ಗುಚ್ಚದ ಬದಲಿಗೆ ಕನ್ನಡ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.