ಬೆಂಗಳೂರು: ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ತಮ್ಮ ಸರಕಾರದ ಮೊದಲ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಆದ್ಯತೆಗಳನ್ನು ತಿಳಿಸಿಲು ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಲಹೆ, ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಲೂರಿನಲ್ಲಿ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಪೊಲೀಸರು ದಕ್ಷ ಮತ್ತು ಪ್ರಾಮಾಣಿಕತೆಗೆ ದೇಶದಲ್ಲಿಯೇ ಹೆಸರು ಮಾಡಿದ್ದಾರೆ. ದಕ್ಷತೆ ಮತ್ತು ಪ್ರಾಮಾಣಿಕತೆ ಇನ್ನೂ ಹೆಚ್ಚಿನ ರೀತಿಯಲ್ಲಾಗಬೇಕು. ಕಾನೂನು ಸುವ್ಯವಸ್ಥೆ ಇನ್ನಷ್ಟು ಜನಸ್ನೇಹಿಯಾಗಬೇಕು. ಅಲ್ಲಲ್ಲಿ ನಡೆಯುತ್ತಿರುವ ಘಟನೆಗಳು ನಿಲ್ಲಬೇಕು. ಅಪರಾಧವನ್ನು ಸಂಪೂರ್ಣವಾಗಿ ಸದೆ ಬಡಿದು ನಿಯಂತ್ರಣ ಮಾಡುವಂತೆ ಸೂುಚನೆ ನೀಡಿದ್ದೇನೆ ಎಂದು ಸಿಎಂ ತಿಳಿಸಿದರು.
ಮುಂಬರುವ ದಿನಗಳಲ್ಲಿ ಎದುರಾಗುವ ಸವಾಲುಗಳು, ಕೊರೊನಾ, ನ್ಯಾಯಾಲಯಗಳ ಆದೇಶಗಳ ಪಾಲನೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪೊಲೀಸ್ ಇಲಾಖೆಯಲ್ಲಿ ಮೂಲಭೂತ ಸೌಕರ್ಯಗಳಿಗಾಗಿ ರೂಪಿಸಲಾಗಿರುವ ಕಾರ್ಯಕ್ರಮಗಳ ಸಮರ್ಪಕ ಜಾರಿ, ಪೊಲೀಸ್ ವಸತಿ ಗೃಹಗಳು, ತನಿಖೆಗೆ ಅಗತ್ಯವಾಗಿರುವ ವಿಧಿ ವಿಜ್ಞಾನ ಪ್ರಯೋಗಾಲಯ, ಕೆಎಸ್‌ಆರ್ ಪಿ ಅಗ್ನಿಶಾಮಕ ದಳ, ಜೈಲು ಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಸೂಚನೆ ನೀಡಿರುವುದಾಗಿ ಅವರು ತಿಳಿಸಿದರು.
ಪೊಲೀಸರ ಕಲ್ಯಾಣ ಕಾರ್ಯಕ್ರಮ, ಶಿಷ್ಯವೇತನ, ಆರೋಗ್ಯ ಮತ್ತಷ್ಟು ಸರಳೀಕರ ಮಾಡಲು ಹೇಳಿದ್ದೇನೆ. ಗ್ರಹ ಸಚಿವರು ತಮ್ಮ ವಿಚಾರಗಳನ್ನು ತಿಳಿಸಿದ್ದಾರೆ. ಪೊಲೀಸರು ಜನಪರ, ದಕ್ಷತೆಯಿಂದ ಅಪರಾಧ ನಿಯಂತ್ರಣ ಮಾಡುವ ಕೆಲಸ ಮಾಡಲು ತಿಳಿಸಿದ್ದೇನೆ. ರಾಜ್ಯ ಸುಭಿಕ್ಷೆಯಾಗಬೇಕಾದರೆ ಶಾಂತಿ ಮತ್ತು ಸುವ್ಯವಸ್ಥೆ ಬಹಳ ಮುಖ್ಯ. ಈ ಅರಿವಿನ ಹಿನ್ನೆಲೆಯಲ್ಲಿಯೇ ನಮ್ಮ ಸರಕಾರ ಕಾನೂನು ಮತ್ತು ಸುವ್ಯವಸ್ಥೆಗೆ ಮೊದಲ ಆದ್ಯತೆ ನೀಡಲಿದೆ. ಈ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದೇನೆ ಎಂದು ಅವರು ತಿಳಿಸಿದರು.
ನೂತನ ಗೃಹ ಸಚಿವ ಅರಗ ಜ್ಞಾನೇಂದ್ರ ತಮ್ಮ ಸಾರ್ವಜನಿಕ ಅನುಭವವನ್ನು ಸಂಪೂರ್ಣವಾಗಿ ಉಪಯೋಗಿಸಲಿದ್ದಾರೆ. ಅವರು, ಗೃಹ ಇಲಾಖೆಗೆ ಹೊಸ ಚೈತನ್ಯ ನೀಡಲಿದ್ದಾರೆ ಎಂದು ತಿಳಿಸಿದ ಬಸವರಾಜ ಬೊಮ್ಮಾಯಿ, ಭೂಮಾಫಿಯಾ ಜೊತೆ ಯಾವುದೇ ರೀತಿ ಸಂಬಂಧ ಬೇಡ ಎಂದು ಎಚ್ಚರಿಕೆ ನೀಡಿದ್ದೇನೆ. ಇಂಥ ಪ್ರಕರಣಗಳಲ್ಲಿ ಸರಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, ಕೆಲವರನ್ನು ಅಮಾನತು ಮಾಡಿದ್ದೇವೆ ಎಂದು ತಿಳಿಸಿದರು.
ಸಚಿವ ಕೆ. ಎಸ್. ಈಶ್ವರಪ್ಪ ಅವರ ಪ್ರಚೋದನಕಾರಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಮುಕ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ ನೀಡಿಲ್ಲ. ಈ ಹಿಂದೆ ನಡೆದಿರುವ ಘಟನೆಗಳನ್ನು ಮೆಲಕು ಹಾಕಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ ಉಪಸ್ಥಿತರಿದ್ದರು.