ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆಗ್ರಹ- ವಿಜಯಪುರದಲ್ಲಿ ಅಖಿಲ ಭಾರತ ಯುವಜನ ಹೋರಾಟ ಸಮಿತಿ ಪ್ರತಿಭಟನೆ

ವಿಜಯಪುರ: ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವದ ಅಂಗವಾಗಿ ವಿಜಯಪುರ ನಗರದಲ್ಲಿ ಅಖಿಲ ಭಾರತ ಯುವಜನ ಹೋರಾಟ ಸಮಿತಿ ಅಖಿಲ ಭಾರತ ಬೇಡಿಕೆ ದಿನ ಆಚರಿಸಿ ಪ್ರತಿಭಟನೆ ನಡೆಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯಿ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಸರಕಾರಿ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡುತ್ತಿಲ್ಲ. ಕೆಲವು ಹುದ್ದೆಗಳಿಗೆ ವರ್ಷಾನುಗಟ್ಟಲೇ ನೇಮಕಾತಿ ಪ್ರಕ್ರಿಯೆ ನಡೆಸುವ ಕೆಪಿಎಸ್ಸಿಯಲ್ಲಿ ವ್ಯಾಪಕ ಬ್ರಷ್ಟಾಚಾರ ನಡೆದಿದೆ. ಆದ್ದರಿಂದ ಸರಕಾರ ಈ ನಿಟ್ಟಿನಲ್ಲಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

2018-19ರ ವರ್ಷದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಬೆಂಗಳೂರಿನ ಪೀಣ್ಯ ಕೈಗಾರಿಕಾವಲಯ ಒಂದರಲ್ಲೆ 12 ಸಾವಿರಕ್ಕೂ ಹೆಚ್ಚು ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚಿ ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಲಾಕಡೌನ್ ನಿಂದಾಗಿಯೂ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇದು ಸಾಲದೆಂಬಂತೆ ಸರಕಾರಗಳ ಆರ್ಥಿಕ ನೀತಿಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನಜೀವನವನ್ನು ಹೈರಾಣಾಗಿಸಿದೆ. ಇಡೀ ದೇಶದಲ್ಲಿ ನಿರುದ್ಯೋಗದಿಂದಾಗಿ ಬೇಸತ್ತು ಖಿನ್ನತೆಗೆ ಒಳಗಾಗಿ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿ ಕರ್ನಾಟಕಕ್ಕೆ ಮೊದಲನೇ ಸ್ಥಾನ. ಆದರೂ, ರಾಜ್ಯ ಸರಕಾರ ನಾನಾ ಇಲಾಖೆಗಳಲ್ಲಿ ಖಾಲಿ ಇರುವ ಮೂರು ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಶಿಕ್ಷಣ, ಆರೋಗ್ಯ, ವಸತಿ, ಇಂಧನ ಸೇರಿದಂತೆ ಮೂಲಭೂತ ವಲಯಗಳಲ್ಲಿ ಅವಶ್ಯಕ ಸಂಖ್ಯೆಯಲ್ಲಿ ನೇಮಕಾತಿಗಳು ನಡೆದಿಲ್ಲ. ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಸಿದ್ದಲಿಂಗ ಬಾಗೇವಾಡಿ ಆಗ್ರಹಿಸಿದರು.

ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯ ಜಿಲ್ಲಾ ನಾಯಕ ಎಸ್. ಎಸ್. ಗೌಡರ ಮಾತನಾಡಿಸ ಆರೋಗ್ಯ ಕ್ಷೇತ್ರದಲ್ಲಿ ಬಿಎಸ್ಸಿ, ನರ್ಸಿಂಗ್, ಪ್ಯಾರಾಮೆಡಿಕಲ್, ಫಾರ್ಮಸಿ, ಕೋರ್ಸ್ ಮುಗಿಸಿ, ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಪುಡಿಗಾಸಿಗೆ ದುಡಿಯುತ್ತಿದ್ದಾರೆ. ಆದರೆ, ಹೃದಯಹೀನ ಸರಕಾರ ಖಾಲೆ ಹುದ್ದೆಗಳ ಭರ್ತಿಯಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರತಿಭಟನೆಯಲ್ಲಿ ಮಾಳು, ಆಕಾಶ ರಾಮತೀರ್ಥ, ಅಶೋಕ ಬೂದಿಹಾಳ, ಯುವರಾಜ ಪಂಮರ, ಮಹೇಶ ಚಡಚಣ, ಚಂದ್ರು, ಅಶೋಕ ರಾಠೋಡ, ಯಮನೂರಿ ನಾಲತವಾಡ, ಶ್ರೀಕಾಂತ ಕೊಂಡಗೂಳಿ ಸೇರಿದಂತೆ ಹಲವಾರು ಯುವಕರು ಭಾಗವಹಿಸಿದ್ದರು.

ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.

Leave a Reply

ಹೊಸ ಪೋಸ್ಟ್‌