ವಿಜಯಪುರ: ಇದು ಇಡೀ ಬಸವ ನಾಡಿಗೆ ಹೆಮ್ಮೆಯ ಸಮಯ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಈ ಹಿಂದುಳಿದ ಜಿಲ್ಲೆಯ ಅದೂ ಕೂಡ ಗ್ರಾಮೀಣ ಭಾಗದ ಒಂದೇ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಎಇ ಗಮನ ಸೆಳೆದಿದ್ದಾರೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮೈಲೇಶ್ವರ ಗ್ರಾಮದ ಬ್ರೀಲಿಯಂಟ್ ಸ್ಕೂಲ್ ನ ನಾಲ್ಕು ಜನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಬಸವ ನಾಡಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆ ಪಾಲಕರ, ಶಿಕ್ಷಣ ಸಂಸ್ಥೆಯವರ ಹರ್ಷ ನೂರ್ಮಡಿಯಾಗಲು ಕಾರಣವಾಗಿದೆ.
ಈ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಒಟ್ಟು ಎಂಟು ಜನ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಅವರಲ್ಲಿ ನಾಲ್ಕು ಜನ ಮೈಲೇಶ್ವರ ಶಾಲೆಯ ವಿದ್ಯಾರ್ಥಿಗಳಾಗಿರುವುದು ಗಮನಾರ್ಹವಾಗಿದೆ.
ಶೈಕ್ಷಣಿಕವಾಗಿ ಶಾಲೆಯಲ್ಲಿ ಪಾಠ ಭೋಧನೆಗಳು ನಡೆಯದಿದ್ದರೂ ಆನ್‌ಲೈನ್ ನಲ್ಲಿಯೇ ಉತ್ತಮ ಶಿಕ್ಷಣ ಪಡೆದುಕೊಂಡು ಈ ಸಾಧನೆಗೈದ ತಾಳಿಕೋಟೆಯ ಮೈಲೇಶ್ವರ ಕ್ರಾಸ್‌ನಲ್ಲಿರುವ ಬ್ರೀಲಿಯಂಟ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಆಕರ್ಶ ಸಂಜಯ ಹಣಮಂತ್ರಾಯ ಕರೆಕಲ್ಲ, ಸಿಂಚನಾ ರುದ್ರಯ್ಯ ದಮ್ಮೂರಮಠ, ಗುರುರಾಜ ಬಿರಾದಾರ, ನಯಿಮ್ ಜುಮನಾಳ ಸಾಧನೆ ಜನಮೆಚ್ಚುಗೆಗೆ ಕಾರಣವಾಗಿದೆ. ಈ ನಾಲ್ಕು ಜನ ವಿದ್ಯಾರ್ಥಿಗಳು ರಾಜ್ಯಕ್ಜೆ ಟಾಫ್‌ರ್ ಗಳಾಗಿರುವುದು ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ.
ಈ ವಿದ್ಯಾರ್ಥಿಗಳ ಸಾಧನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು, ಪೋಷಕರೂ ಕೂಡ ಮಕ್ಕಳಿಗೆ ಸಿಹಿ ತಿನ್ನಿಸುವದರೊಂದಿಗೆ ಸಂಭ್ರಮಿಸಿದರು.
ಈ ಸಮಯದಲ್ಲಿ ಬ್ರೀಲಿಯಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾನಾಗೌಡ ನಡುವಿನಮನಿ, ಕಾರ್ಯದರ್ಶಿ ಎಂ. ಬಿ. ಮಡಿವಾಳರ, ಉಪಾಧ್ಯಕ್ಷ ಆರ್. ಬಿ. ನಡುವಿನಮನಿ, ನಿರ್ದೇಶಕರಾದ ಎಸ್. ಎಚ್. ಪಾಟೀಲ, ಎಲ್. ಎಂ. ಬಿರಾದಾರ, ಎನ್. ಎಸ್. ಗಡಗಿ, ಮುಖ್ಯ ಶಿಕ್ಷಕ ವಿನಾಯಕ ಪಟಗಾರ, ಎ. ಎನ್. ಆನೇಸೂರ, ಪಾಲಕರಾದ ರುದ್ರಯ್ಯ ದಮ್ಮೂರಮಠ, ಸುವರ್ಣಾ ದಮ್ಮೂರಮಠ, ಹಣಮಂತ್ರಾಯ ಕರೆಕಲ್ಲ, ಗೀರಿಜಾ ಕರೇಕಲ್ಲ, ಮೊದಲಾದವರು ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾನಾಗೌಡ ನಡುವಿನಮನಿ ಕೊರೊನಾ ಸಂದಿಗ್ದ ಸಮಯದಲ್ಲಿಯೂ ಶಾಲೆಯ ಶಿಕ್ಷಕರು ಆನ್‌ಲೈನ್ ಮೂಲಕ ನೀಡಿದ ಉತ್ತಮ ಪಾಠ ಭೋದನೆ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆಯಾಗಿದೆ. ಈ ವಿದ್ಯಾರ್ಥಿಗಳು ತಮ್ಮ ಸಾಧನೆಯ ಮೂಲಕ ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಆಕರ್ಶಸಂಜಯ ಹಣಮಂತ್ರಾಯ ಕರೆಕಲ್ಲ, ಸಿಂಚನಾ ರುದ್ರಯ್ಯ ದಮ್ಮೂರಮಠ, ಗುರುರಾಜ ಬಿರಾದಾರ ಮತ್ತು ನಯಿಮ್ ಜುಮನಾಳ, ಕೊರೊನಾ ಹಿನ್ನೆಲೆ ಶಾಲೆಗಳು ಬಂದ್ ಆಗಿದ್ದರೂ ಕೂಡ ನಮ್ಮ ಬ್ರೀಲಿಯಂಟ್ ಶಾಲೆಯ ಶಿಕ್ಷಕರು ಆನ್‌ಲೈನ್‌ನಲ್ಲಿ ಪಾಠ ನೀಡಿದ್ದಾರೆ. ಉತ್ತಮವಾಗಿ ಶಿಕ್ಷಣವನ್ನು ಕಲಿಸಿದ್ದಾರೆ. ಪ್ರತಿವಾರ ಟೆಸ್ಟ್ ಜೊತೆಗೆ ನಮಗೆ ತಿಳಿಯದ ವಿಷಯವನ್ನು ಪದೇ ಪದೇ ಕೇಳಿದರೂ ಬೇಸರಪಟ್ಟುಕೊಳ್ಳದೇ ತಿಳಿಹೇಳುವಂತಹ ಕೆಲಸ ಮಾಡಿದರು. ಅಲ್ಲದೇ, ಮನೆಯಲ್ಲಿ ನಮ್ಮ ತಂದೆ, ತಾಯಿ ಆನ್‌ಲೈನ್ ಪಾಠದ ವಿಷಯ ಕುರಿತು ಮರು ಚರ್ಚೆ ಮಾಡುತ್ತಿದ್ದರು ಇದರಿಂದ ಉತ್ತಮ ಅಂಕ ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ಸಂತಸ ಹಂಚಿಕೊಂಡಿದ್ದಾರೆ.