ಬೆಂಗಳೂರು: ವಿದ್ಯುತ್ ಕ್ಷೇತ್ರದಲ್ಲಿ ಸಾವಲಂಬಿಯಾಗುವುದರ ಜೊತೆಗೆ ದೂರದೃಷ್ಟಿ ಇಟ್ಟುಕೊಂಡು ಸಮರ್ಥವಾಗಿ ವಿದ್ಯುತ್ ನಿರ್ವಹಣೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಇಂಧನ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತಬಾಡಿದ ಅವರು, ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.
ವಿದ್ಯುತ್ ಉತ್ಪಾದನೆ ಮತ್ತು ನಿರ್ವಹಣೆಯನ್ನು ಇನ್ನೂ ಬಹಳ ವ್ಯವಸ್ಥಿತವಾಗಿ ಮಾಡಬೇಕು. ಮಾರುಕಟ್ಟೆ ಸ್ಥಿತಿಗತಿಯನ್ನು ಆಧರಿಸಿ ಹೆಚ್ಚಿನ ದರಕ್ಕೆ ವಿದ್ಯುತ್ತನ್ನು ಮಾರಾಟ ಮಾಡುವಂತಾಗಬೇಕು. ಕರ್ನಾಟಕ ವಿದ್ಯುತ್ ನಿಗಮದಿಂದ ಅತ್ಯಂತ ದಕ್ಷತೆಯಿಂದ ವಿದ್ಯುತ್ ಉತ್ಪಾದನೆಯಾಗಬೇಕು. ಜಲ ಮತ್ತು ವಿದ್ಯುತ್ ಘಟಕಗಳು ಅತಿ ಹೆಚ್ಚು ಕಾರ್ಯ ಕ್ಷಮತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದ 15 ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ 7 ಗಂಟೆಗಳ ವಿದ್ಯುತ್ ಪೂರೈಕೆಯಾಗುತ್ತಿದ್ದು, ಉಳಿದ ಜಿಲ್ಲೆಗಳಲ್ಲಿ 5 ಗಂಟೆಯೂ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಈ ಅಸಮಾನತೆಯನ್ನು ಹೋಗಲಾಡಿಸಲು ನೀಲನಕ್ಷೆ ಸಿದ್ಧಪಡಿಸಿ ಕಾಲಮಿತಿಯಲ್ಲಿ ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸುವಂತೆ ಅವರು ಸೂಚನೆ ನೀಡಿದರು.
ವಿದ್ಯುತ್ ಸೋರಿಕೆಯನ್ನು ತಡೆಗಟ್ಟಬೇಕು. ಒಟ್ಟಾರೆ ಇಂಧನ ವ್ಯವಸ್ಥೆಯ ಸುಧಾರಣೆಗೆ ಒತ್ತು ನೀಡಬೇಕು. ರಾಜ್ಯದಲ್ಲಿ ನವೀಕೃತ ಮೂಲಗಳ ಸ್ಥಾಪಿತ ಸಾಮರ್ಥ್ಯ 15184.13 ಮೆ. ವ್ಯಾಟ್ ಗಳಿದ್ದು ದೇಶದಲ್ಲಿಯೇ ಕರ್ನಾಟಕ ಮುಂಚೂಣಿಯಲ್ಲಿದೆ. ಭವಿಷ್ಯದ ದೃಷ್ಟಿಯಿಂದ ನವೀಕೃತ ಇಂಧನಕ್ಕೆ ಆದ್ಯತೆ ನೀಡುವಂತೆ ಅವರು ಸಲಹೆ ನೀಡಿದರು.
ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಿಸಲಾಗಿರುವ ಬೋರ್ ವೆಲ್ ಗಳಿಗೆ ಯಾವುದೇ ರೀತಿ ತಡ ಮಾಡದೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಕೊರೊನಾ ಸಂದರ್ಭದಲ್ಲಿ ವಿಶೇಷವಾಗಿ ಆಸ್ಪತ್ರೆಗಳಿಗೆ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಿಎಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು
ಗಂಗಾ ಕಲ್ಯಾಣ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಎಲ್ಲಾ ಅಭಿವೃದ್ಧಿ ನಿಗಮಗಳು ಸೇರಿದಂತೆ ಒಟ್ಟು 18569 ಕೊಳವೆ ಬಾವಿಗಳ ವಿದ್ಯುದೀಕರಣಗೊಳಿಸುವ ಗುರಿ ಇದೆ. ಇದಕ್ಕಾಗಿ ಪ್ರತಿ ಪಂಪ್ ಸೆಟ್ ವಿದ್ಯುದೀಕರಣಕ್ಕೆ ಬಿಡುಗಡೆ ಮಾಡುವ ರೂ. 50 ಸಾವಿರ ವೆಚ್ಚವನ್ನು ರೂ. 1.29 ಲಕ್ಷಕ್ಕೆ ಹೆಚ್ಚಿಸುವ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಯಲ್ಲಿ ತಿಳಿಸಿದರು.
ಈ ಸಭೆಯಲ್ಲಿ ಇಂಧನ ಸಚಿವ ಸುನೀಲ್ ಕುಮಾರ್, ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ. ಎಸ್. ಎನ್. ಪ್ರಸಾದ, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ, ಕೆ. ಪಿ. ಟಿ. ಸಿ. ಎಲ್. ವ್ಯವಸ್ಥಾಪಕ ನಿರ್ದೇಶಕಿ ಡಾ. ಎನ್. ಮಂಜುಳಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.