ತಪ್ಪು ಮಾಡಿದ ಸಿಬ್ಬಂದಿಗೆ ತಕ್ಕ ಪಾಠ ಕಲಿಸಿದ ಎಸ್ಪಿ ಆನಂದ ಕುಮಾರ- ನಿರ್ಲಕ್ಷ್ಯ ತೋರುವ ಸಿಬ್ಬಂದಿಗೆ ನಡುಕ ತಂದ ಎಸ್ಪಿ ಆದೇಶ

ವಿಜಯಪುರ: ಮಾಡಬಾರದ ಕೆಲಸವನ್ನು ಮಾಡಿದ ಐದು ಜನ ಪೊಲೀಸ್ ಸಿಬ್ಬಂದಿ ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ಅಮಾನತು ಮಾಡುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ.

ಈ ಕುರಿತು ಆದೇಶ ಹೊರಡಿಸಿರುವ ಅವರು, ಬಸವನ ಬಾಗೇವಾಡಿ ಪೊಲೀಸ್ ಠಾಣೆಯ ಮೂರು ಜನ ಮತ್ತು ನಿಡಗುಂದಿ ಪೊಲೀಸ್ ಠಾಣೆಯ ಇಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಈ ಆದೇಶದಲ್ಲಿ ಸಿಬ್ಬಂದಿ ಕರ್ತವ್ಯಲೋಪವನ್ನು ಎಸ್ಪಿ ಪ್ರಸ್ತಾಪಿಸಿ ಅಮಾನತಿಗೆ ಕಾರಣವನ್ನೂ ನೀಡಿದ್ದಾರೆ.

ಬಸವನ ಬಾಗೇವಾಡಿ ಪೊಲೀಸ್ ಠಾಣೆ ಮೂರು ಜನ ಸಿಬ್ಬಂದಿ ಅಮಾನತು

ಬಸವನ ಬಾಗೇವಾಡಿ ಪೊಲೀಸ್ ಠಾಣೆಯ ಪೇದೆಗಳಾದ ಐ. ಎಂ. ಮಕಾಂದಾರ, ಆರ್. ಎಲ್. ರಾಠೋಡ ಮತ್ತು ಎಂ. ಎಂ. ವಡವಡಗಿ ಅಮಾನತಾದ ಸಿಬ್ಬಂದಿಯಾಗಿದ್ದಾರೆ.

 

ಆ. 8 ರಂದು ಮ. 2.30ರ ಸುಮಾರಿಗೆ ಉಪ್ಪಲದಿನ್ನಿ-ಹಂಗರಗಿ ರಸ್ತೆಯಲ್ಲಿ ಚಾಲಕ ನೀಲಕಂಠ ಸಂಗನಗೌಡ ಮತ್ತು ಬನ್ನೆಟ್ಟಿ ಗ್ರಾಮದ ಏವೂರ ಅಶ್ವಥ ಬಸನಗೌಡ ಹಂದ್ರಾಳ ಸೇರಿಕೊಂಡು ನಂಬರ್ ಪ್ಲೇಟ್ ಇಲ್ಲದ ಬುಲೇರೋ ವಾಹನದಲ್ಲಿ ರೂ. 48125 ಮೌಲ್ಯದ ಸ್ಪೋಟಕ ಜಿಲೆಟಿನ್ ಮತ್ತು ಅವುಗಳ ಕನೆಕ್ಟರ್ ಗಳನ್ನು ಯಾವುದೇ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳದೇ ತೆಗೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭಫದಲ್ಲಿ ಇವರ ವಾಹನ ದ್ವಿಚಕ್ರ ಢಿಕ್ಕಿ ಹೊಡೆದು ಹೊಡೆದು ರಸ್ತೆ ಅಪಘಾತ ಸಂಭವಿಸಿತ್ತು. ಈ ಘಟನೆ ನಡೆದ ಸಂದರ್ಭದಲ್ಲಿಯೇ ವಿಜಯಪುರ ಜಿಲ್ಲಾ ಕೊರೊನಾ ಮತ್ತು ಪ್ರವಾಹ ನಿಯಂತ್ರಣ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಎಸ್ಪಿ ಎಚ್. ಡಿ. ಆನಂದ ಕುಮಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದರು. ಅವರು ಬೇಟಿ ನೀಡುತ್ತಿದ್ದ ಸ್ಥಳಗಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯೇ ಈ ಘಟನೆ ನಡೆದಿದ್ದರೂ ಅಪಘಾತ ವಿಚಾರವನ್ನು ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ಅಥವಾ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ. ಅಲ್ಲದೇ, ಯಾವುದೇ ಮಹಜರು ನಡೆಸದೇ ಸ್ಪೋಟಕ ಸಾಮಗ್ರಿಗಳನ್ನು ನುರಿತ ವ್ಯಕ್ತಿಗಳ ಸಹಾಯವಿಲ್ಲದೇ ಪೊಲೀಸರ ಮೂಲಕ ಸ್ಥಳಾಂತರ ಮಾಡಿದ್ದರು.

 

ಈ ಘಟನೆಯ ಕುರಿತು ಅದೇ ದಿನ ರಾತ್ರಿ 7.53ಕ್ಕೆ ಬೆಳಗಾವಿ ಉತ್ತರ ವಲಯ ಐಜಿಪಿ ಅವರು ಅಪಘಾತ ನಡೆದ ಸ್ಳಳದ ಫೋಟೋಗಳನ್ನು ವಿಜಯಪುರ ಎಸ್ಪಿ ಅವರ ವಾಟ್ಸಾಪ್ ಗೆ ಕಳುಹಿಸಿದ್ದರು. ಈ ಪ್ರಕರಣದ ಬಗ್ಗೆ ಮಾಹಿತಿ ಇರದ ಎಸ್ಪಿ ಅವರಿಗೆ ಈ ಪ್ರಸಂಗ ಮುಜುಗರ ತಂದಿದೆ.

ಈ ಘಟನೆ ನಡೆದ ಸಮಯದಲ್ಲಿ ಉಪ್ಪಲದಿನ್ನಿ ಬೀಟ್ ಸಿಬ್ಬಂದಿ ಐ. ಎಂ. ಮಕಾಂದಾರ ಮತ್ತು ಹಂಗರಗಿ ಬೀಟ್ ಸಿಬ್ಬಂದಿ ಆರ್. ಎಲ್. ರಾಠೋಡ ಅಪಘಾತ ಘಟನಾ ಸ್ಥಳದ ಸಂರಕ್ಷಣೆ ಮಾಡಿಲ್ಲ. ಅಲ್ಲದೇ, ಘಟನಾ ಸ್ಥಳದಲ್ಲಿ ಸಾರ್ವಜನಿಕರು ಓಡಾಡಲು ಅವಕಾಶ ನೀಡಿದ್ದರು. ಅಲ್ಲದೇ, ಈ ವಿಚಾರವನ್ನು ಕೇವಲ ಸಿಪಿಐಗೆ ಮಾತ್ರ ತಿಳಿಸಿದ್ದರು. ಇದೇ ಸಂದರ್ಭದಲ್ಲಿ ಬಸವನ ಬಾಗೇವಾಡಿ ಪೊಲೀಸ್ ಠಾಣೆಯ ಎಸ್ ಎಚ್ ಓ ಎಂ. ಎಂ. ಯಾಲಗಿ ಘಟನೆ ನಡೆದ ದಿನ ಮಧ್ಯಾಹ್ನ 2 ರಿಂದಿ ರಾತ್ರಿ 8 ಗಂಟೆಯವರೆಗೂ ಕರ್ತವ್ಯದಲ್ಲಿದ್ದರು. ಅಪಘಾತದ ಕುರಿತು ಬಸವನ ಬಾಗೇವಾಡಿ ಸರಕಾರಿ ಆಸ್ಪತ್ರೆಯಿಂದ ವೈದ್ಯಕೀಯ ವರದಿ ಬಂದಿದ್ದರೂ ಕೂಡಲೇ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಇದು ಕರ್ತವ್ಯ ಲೋಪವಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಇಲಾಖೆ ವಿಚಾರಣೆ ಬಾಕಿ ಇರಿಸಿ ವಿಜಯಪುರ ಎಸ್ಪಿ ಎಚ್. ಡಿ. ಆನಂದಕುಮಾರ ಮೂರು ಜನರ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ನಿಡಗುಂದಿ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿ ಅಮಾನತು

ಇದೇ ವೇಳೆ ನಿಡಗುಂದಿ ಪೊಲೀಸ್ ಠಾಣೆಯ ಪೇದೆಗಳಾದ ಎಸ್. ಸಿ. ರೆಡ್ಡಿ ಮತ್ತು ಐ. ಜಿ. ಹೊಸಗೌಡರ ಅವರನ್ನೂ ಕೂಡ ಕರ್ವತವ್ಯಲೋಪ ಆರೋಪ ಹಿನ್ನೆಲೆಯಲ್ಲಿ ಎಸ್ಪಿ ಎಚ್. ಡಿ. ಆನಂದ ಕುಮಾರ ಅಮಾನತು ಮಾಡಿದ್ದಾರೆ.

 

ನಿಡಗುಂದಿ ಪಟ್ಟಣದ ಕಮದಾಳ ಪ್ಲಾಟ್ ಮುದ್ದೇಶ್ವರ ಗುಡಿ ಪಕ್ಕದಲ್ಲಿ ಜೂಜಾಟ ನಡೆಸುತ್ತಿದ್ದ 12 ಜನರನ್ನು ಪೊಲೀಸರು ಬಂಧಿಸಿದ್ದರು. ಈ ಜೂಜಾಟದ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ವಿಜಯಪುರ ಎಸ್ಪಿ ಎಚ್. ಡಿ. ಆನಂದಕುಮಾರ ವಿಜಯಪುರದಿಂದಲೇ ಓರ್ವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕಳುಹಿಸಿ ಧಾಳಿ ನಡೆಸಲು ಸೂಚಿಸಿದ್ದರು. ಸ್ಥಳೀಯ ಪೊಲೀಸರು ಜೂಜಾಟ ತಡೆಯುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸರನ್ನು ಎಸ್ಪಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

 

ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ಅವರ ಈ ಕ್ರಮ ಸಬ್ ಕುಚ್ ಚಲ್ತಾ ಹೈ ಎಂಬ ಮನೋಭಾವನೆ ಹೊಂದಿರುವ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಲ್ಲಿ ಈಗ ನಡುಕ ಹುಟ್ಟಿಸಿದೆ.

Leave a Reply

ಹೊಸ ಪೋಸ್ಟ್‌