ಹುಬ್ಬಳ್ಳಿ: ನನಗೆ ಯಾರದರೂ ಚೂಟಿದರೆ ಕಪಾಳಕ್ಕೆ ಹೊಡೆಯುತ್ತೇನೆ. ನನ್ನ ವಿರೋಧ ಕಟ್ಟಿಕೊಂಡು ಬಿ ಎಸ್ ವೈ ಸ್ಥಾನ ಕಳೆದುಕೊಂಡಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನನಗೆ ಸಮಯ ಬಂದಾಗ ಏನೇನು ಆಗಬೇಕೋ ಅದು ಆಗುತ್ತೇನೆ ಎಂದು ತಿಳಿಸಿದ ಅವರು, ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮಂತ್ರಿ ಸ್ಥಾನಕ್ಕಾಗಿ ದೆಹಲಿಯಲ್ಲಿ ಲಾಬಿ ನಡೆಸುವುದು ಸರಿಯಲ್ಲ. ಇದೇ ವೇಳೆ, ನಾನು ಜೀರೋ ಇಂದ ಹೀರೋ ಆದವನು. ಹಿಂದೆ ಜೀರೋ ಆಗಿ ಈಗ ಮತ್ತೆ ಹೀರೋ ಆಗಿದ್ದೇನೆ ಎಂದು ಯತ್ನಾಳ ಹೇಳಿದರು.
ಸೂತ್ರಧಾರಿ ಆಟ ಆಡಿಸುತ್ತಿದ್ದಾರೆ
ಇದೇ ವೇಳೆ, ಖಾತೆ ಬಗ್ಗೆ ಅಸಮಾಧಾನ ವ್ಯಕ್ತವಾಗಿರುವುದರ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ಸೂತ್ರಧಾರರೊಬ್ಬರು ಮಗುವನ್ನು ಚೂಟಿ, ಅವರೇ ತೊಟ್ಟಿಲು ತೂಗುತ್ತಿದ್ದಾರೆ. ಈಗ ಸೂತ್ರಧಾರರ ಶಿಷ್ಯರೇ ಜಗಳ ತಗೆಯುತ್ತಿದ್ದಾರೆ. ಸುಮ್ಮನೆ ಜಾರಕಿಹೊಳಿ ಅವರನ್ನ ಸಿಗಸಿ ಕಥೆ ಮುಗಿಸಿ ಬಿಟ್ಟರು. ಜಗದೀಶ ಶೆಟ್ಟರ ಬಗ್ಗೆ ನನಗೆ ಅಪಾರ ಗೌರವ ಇದೆ. ಅವರ ತ್ಯಾಗಕ್ಕೆ ಅಭಿನಂದನೆ ಸಲ್ಲಿಸುವೆ. ಶೆಟ್ಟರ ಅವರ ತ್ಯಾಗದಿಂದ ಮತ್ತೊಬ್ಬರು ಮಂತ್ರಿಯಾಗಿದ್ದಾರೆ. ನಮ್ಮನ್ನ ಮಂತ್ರಿನೂ ಮಾಡಲಿಲ್ಲ. ಮಂತ್ರಿ ಮಾಡದಿದ್ದರೂ ದುಃಖ ಇಲ್ಲ ಎಂದು ಯತ್ನಾಳ ಹೇಳಿದರು.
ಶಾಸಕ ಅರವಿಂದ ಬೆಲ್ಲದ ಸಿಎಂ ಆಗುವ ಕನಸು ಕಂಡರು. ಬೆಲ್ಲದ ಹೆಗಲ ಮೇಲೆ ಯಾರೋ ಬಂದೂಕು ಇಟ್ಟರು. ಕೆಲವರು ಬದನಿ ಗೂಟನೂ ಇಡ್ತಾರೆ. ನನಗೆ ಚೂಟಿದರೆ ನಾನು ಅವರ ಕಪಾಳಕ್ಕೆ ಹೊಡೆಯುತ್ತಿದ್ದೆ. ನನಗೆ ಅನ್ಯಾಯ ಆಗಿಲ್ಲ. ಬಿ ಎಸ್ ವೈ ವಿರುದ್ದ ನಾನು ಮಾತನಾಡಿದಕ್ಕೆ ಮಂತ್ರಿ ಸ್ಥಾನ ಸಿಗಲಿಲ್ಲ ಅನ್ನಬೇಡಿ. ನನ್ನ ವಿರೋಧ ಕಟ್ಟಿಕೊಂಡಿದ್ದಕ್ಕೆ ಬಿ ಎಸ್ ವೈ ಸ್ಥಾನ ಕಳೆದುಕೊಂಡರು ಎಂದು ಅವರು ವಾಗ್ದಾಳಿ ನಡೆಸಿದರು.
ವಿಜಯೇಂದ್ರ ಸರಕಾರದಲ್ಲಿ ಇನ್ನೂ ಸ್ವಲ್ಪ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕಾವೇರಿಯಲ್ಲಿನ ಕೆಲ ದೃಶ್ಯಗಳ ಬಗ್ಗೆ ನನಗೆ ಮಾಹಿತಿ ಇದೆ. ಇನ್ನೊಂದು ವಾರ ತಡೆದುಕೊಳ್ಳಿ ಎಲ್ಲವನ್ನೂ ಹೇಳುವೆ ಎಂದು ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ನಾನು ಕಾಡಿ ಬೇಡಿ ಮಂತ್ರಿ ಆಗುವುದಿಲ್ಲ. ವಿಜಯಪುರದಲ್ಲಿ ಟೈರ ಸುಟ್ಟು ಮಂತ್ರಿ ಆಗುವ ಅವಶ್ಯಕತೆ ನನಗಿಲ್ಲ. ಸಚಿವ ಸ್ಥಾನಕ್ಕಾಗಿ ಕೆಳ ಮಟ್ಟದ ರಾಜಕಾರಣ ಮಾಡುವುದಿಲ್ಲ. ನಾನು ಮಂತ್ರಿ ಏಕೆ ಆಗಲಿಲ್ಲ ಎಂಬುದು ಇಡೀ ಜಗತ್ತಿಗೆ ಗೋತ್ತಿದೆ. ಮುಖ್ಯಮಂತ್ರಿ ಬದಲಾವಣೆ ಆಗಬೇಕೆಂಬೋದು ನಮ್ಮ ಬೇಡಿಕೆ ಇತ್ತು. ಹೈಕಮಾಂಡ ಈಗಾಗಲೇ ಬದಲಾವಣೆ ಮಾಡಿದೆ ಎಂದು ಯತ್ನಾಳ ತಿಳಿಸಿದರು.
ಬೊಮ್ಮಾಯಿ ಅವರಿಗೆ ಮೂರ್ನಾಲ್ಕು ತಿಂಗಳು ಸಮಯ ನೀಡಬೇಕು
ಇದೇ ವೇಳೆ ನೂತನ ಸಿಎಂ ಬಸವರಾಜ ಬೊಮ್ಮಾಯಿ ಪರ ಮೆದುವಾಗಿ ಮಾತನಾಡಿದ ಯತ್ನಾಳ, ಬೊಮ್ಮಯಿ ಅವರಿಗೆ ಮೂರ್ನಾಲ್ಕು ತಿಂಗಳು ಸಮಯ ಕೋಡೋಬೇಕು. ಅವರು ಯಡಿಯೂರಪ್ಪನವರ ನೆರಳಿನಿಂದ ಹೊರಗಡೆ ಬರುತ್ತಾರೆ. ಸಿಎಂ ಅವರು ಬಹಳ ಜಾಣರಿದ್ದಾರೆ, ಯಡಿಯೂರಪ್ಪ ಅವರ ರಬ್ಬರ್ ಸ್ಯ್ಟಾಂಪ್ ಆಗುವುದಿಲ್ಲ. ಮುಖ್ಯಮಂತ್ರಿಗಳು ಹಿಂದೂ ವಿರೋಧಿಗಳಾದರೆ ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಯತ್ನಾಳ ಎಚ್ಚರಿಕೆ ನೀಡಿದರು.
ಮುಂದಿನ ಚುನಾವಣೆ ನೇತೃತ್ವವನ್ನು ಹೈಕಮಾಂಡ್ ನಿರ್ಧರಿಸುತ್ತೆ
ಈ ಮಧ್ಯೆ, ಮುಂದಿನ ಚುನಾವಣೆ ಯಾರ ನೇತೃತ್ವದಲ್ಲಿ ಹೋಗಬೇಕು ಎಂಬುದನ್ನು ಕಾಲ ನಿರ್ಣಯ ಮಾಡುತ್ತದೆ. ಪಕ್ಷದ ಹೈಕಮಾಂಡ್ ಯಾರ ನೇತೃತ್ವ ಕೊಡುತ್ತೆ, ಅವರ ಸಮ್ಮುಖದಲ್ಲಿ ನಾವು ಚುನಾವಣೆಗೆ ಹೋಗುತ್ತೇವೆ. ಈ ಹಿಂದಿನ ಮೂರು ಜನ ಡಿಸಿಎೞ ಗಳು ಮುಂದಿನ ಚುನಾವಣೆ ತಮ್ಮ ನೇತೃತ್ವದಲ್ಲಿ ನಡೆಯುತ್ತದೆ ಎಂದು ಹೇಳಿದ್ದರು. ಅವರನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಖಾಲಿ ಮಾಡಿದರು. ಏನು ಮಾಡುವುದು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಯತ್ನಾಳ ಮಾರ್ಮಿಕವಾಗಿ ಪ್ರಶ್ನಿಸಿದರು.