ಹುಬ್ಬಳ್ಳಿ: ರಾಜ್ಯ ಸರಕಾರ ಈ ಹಿಂದೆ ನೀಡಿದ ಭರವಸೆಯಂತೆ ಸೆ. 15 ರೊಳಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಅ. 1 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ನಡೆಸಲು ಹುಬ್ಬಳ್ಳಿಯ ಖಾಸಗಿ ಹೋಟೆಲಿನಲ್ಲಿ ನಡೆದ ಪಂಚಮಸಾಲಿ 2ಎ ಹೋರಾಟಕ್ಕೆ ಸಂಬಂಧಿಸಿ ದುಂಡು ಮೇಜಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಸುದ್ದಿಗೋಷ್ಛಿಯಲ್ಲಿ ಮಾತನಾಡಿದ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಈ ದುಂಡು ಮೇಜಿನ ಸಭೆಯಲ್ಲಿ ಐದು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ರಾಜ್ಯ ಸರಕಾರ ಸೆ. 15 ರೊಳಗಾಗಿ ಮೀಸಲಾತಿ ನೀಡುವುದಾಗಿ ಹೇಳಿತ್ತು. ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ತರಲು ಆ. 26 ರಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಿಂದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಕೈಗೊಳ್ಳಲಾಗುವುದು. ಕೊಟ್ಟ ಮಾತಿಗೆ ತಪ್ಪಿದರೆ ಅ. 1 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಆರಂಭಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ, ಕುರುಬ, ವಾಲ್ಮೀಕಿ, ಮಡಿವಾಳ, ಗಂಗಾಮತ ಮತ್ತು ಇತರ ಸಮುದಾಯಗಳ ಬೇಡಿಕೆಯನ್ನೂ ಸರಕಾರ ಈಡೇರಿಸಬೇಕು. ಪಂಚಮಸಾಲಿ ಮೀಸಲಾತಿ ಕುರಿತ ಸಂಧಾನದ ಮಾತುಕತೆ ನಡೆಸಲು ಸಚಿವ ಸಿ. ಸಿ. ಪಾಟೀಲ ಅವರಿಗೆ ಜವಾಬ್ದಾರಿ ನೀಡುವುದೂ ಸೇರಿದಂತೆ ಐದು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಮತ್ತು ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡದಿದ್ದರೆ ಮಾಡು ಇಲ್ಲವೆ ಮಡಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಸರಕಾರ ಸೆ. 14 ರೊಳಗೆ ಮೀಸಲಾತಿ ನೀಡಿ ನುಡಿದಂತೆ ನಡೆಯಬೇಕು ಎಂದು ಆಗ್ರಹಿಸಿದರು.
ಈಈಗ ಉತ್ತರ ಕರ್ನಾಟಕದವರಾದ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಅವರ ಮೇಲೆ ವಿಶ್ವಾಸವಿದೆ. ಒಂದು ವೇಳೆ ಅವರು ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು. ನಮ್ಮ ಹೋರಾಟ ಯಾರನ್ನೋ ಸಿಎಂ ಮಾಡೋದು ಅಥವಾ ಮಂತ್ರಿ ಮಾಡುವುದಕ್ಕಾಗಿ ಅಲ್ಲ. 2ಎ ಮೀಸಲಾತಿ ಪಡೆಯೋದೊಂದೇ ಗುರಿಯಾಗಿದೆ. ಅದಕ್ಕಾಗಿ ಎಂತಹ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಭಾಗಿಯಾಗದೇ ಸ್ವಾಮೀಜಿ ಆಶೀರ್ವಾದ ಪಡೆದು ತೆರಳಿದ ಸಚಿವ
ಇದೇ ವೇಲೆ ಹುಬ್ಬಳ್ಳಿಯಲ್ಲಿ ಖಾಸಗಿ ಹೊಟೇಲಿನಲ್ಲಿ ಸಭೆ ನಡೆಯುತ್ತಿರುವ ಕುರಿತು ಮಾಹಿತಿ ಪಡೆದ ಪಂಚಮಸಾಲಿ ಸಮುದಾಯವದೇರ ಆದ ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ, ಕೂಡಲ ಸಂಗಮ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು. ಆದರೆ, ಸಭೆಯಲ್ಲಿ ಭಾಗಿಯಾಗದೇ ನಿರ್ಗಮಿಸಿದರು. ಸಚಿವ ಸಿ. ಸಿ. ಪಾಟೀಲ ದುಂಡು ಮೇಜಿನ ಸಭೆಯನ್ನು ಉದ್ಘಾಟಿಸಬೇಕಿತ್ತಾದರೂ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದು ನಿರ್ಗಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸಿ. ಸಿ. ಪಾಟೀಲ, ಸಚಿವನಾದ ಬಳಿಕ ಮೊದಲ ಸಲ ಸ್ವಾಮಿಜಿಗಳನ್ನು ಬೇಟಿಯಾಗಲು ಬಂದಿದ್ದೇನೆ. ಸ್ವಾಮೀಜಿಗಳು ಹುಬ್ಬಳ್ಳಿಯಲ್ಲಿರುವುದು ತಿಳಿದು ಬಂದಿದ್ದೆನೆ. ಇವತ್ತು ಮೀಸಲಾತಿಗಾಗಿ ನಡೆಯುತ್ತಿರುವ ಸಭೆಯಲ್ಲಿ ನಾನು ಭಾಗವಹಿಸುತ್ತಿಲ್ಲ. ಸರಕಾರಕ್ಕೆ ಈ ಹೋರಾಟದ ಬಗ್ಗೆ ಮಾಹಿತಿ ಇದೆ. ಸರಕಾರ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಮುಂದಡಿ ಇಡಲಿದೆ ಎಂದು ತಿಳಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ಪಟ್ಟಿನಿಂದ ಸಮಾಜಕ್ಕೆ ಸಿಎಂ ಸ್ಥಾನ ಸಿಗಲಿಲ್ಲ
ಈ ಮಧ್ಯೆ, ಪಂಚಮಸಾಲಿ ಸಮುದಾಯದವರಿಗೆ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಪಟ್ಟಿನಿಂದಾಗಿ ಸಿಎಂ ಸ್ಥಾನ ಸಿಗಲಿಲ್ಲ. ಇದಕ್ಕೆ ಸೂಕ್ತ ಸಂದರ್ಭದಲ್ಲಿ ಸೂಕ್ತ ಉತ್ತರ ಕೊಡುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಸದ್ಯಕ್ಕೆ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುವುದು ನಮ್ಮ ಗುರಿಯಾಗಿದೆ. ಬೇರೆಯವರು ಬೇಕಾದರೆ ಇನ್ನೂ 10 ಪೀಠ ಮಾಡಿಕೊಳ್ಳಲಿ. ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರು ಪೀಠ ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ. ಅರವಿಂದ ಬೆಲ್ಲದ ಅಥವಾ ಬಸನಗೌಡ ಪಾಟೀಲ ಯತ್ನಾಲ ಅವರನ್ನು ಸಿಎಂ ಮಾಡಲು ನಮ್ಮ ಹೋರಾಟ ನಡೆಯುತ್ತಿಲ್ಲ ಎಂದು ಸ್ವಾಮೀಜಿ ಸ್ಪಷ್ಚಪಡಿಸಿದರು.
ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯವಾಗಿರುವುದು ಎಲ್ಲರಿಗೂ ಗೊತ್ತಿದ್ದು, ಸೂಕ್ತ ಸಂದರ್ಭದಲ್ಲಿ ಜನ ಉತ್ತರ ಕೊಡುತ್ತಾರೆ. ನಮ್ಮವರು ಸಿಎಂ ಆಗಬೇಕಿತ್ತು. ಆದರೆ ಬಿ ಎಸ್ ವೈ ಹಠದಿಂದ ನಮ್ಮ ಸಮಾಜಕ್ಕೆ ಸಿಎಂ ಸ್ಥಾನ ಕೈ ತಪ್ಪಿತು. ಇದಕ್ಕೆ ಸೂಕ್ತ ಸಂದರ್ಭದಲ್ಲಿ ಉತ್ತರ ಕೊಡುತ್ತೇವೆ. ಸಿಎಂ ಬಸವರಾಜ ಬೋಮ್ಮಾಯಿ ಮೀಸಲಾತಿ ನೀಡುತ್ತಾರೆ ಎಂಬ ವಿಶ್ವಾಸವಿದೆ. ಅವರು ಗೃಹ ಸಚಿವರಾಗಿಗ ಕೂಡ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದರು. ಈಗಲೂ ನಮ್ಮ ಹೋರಾಟಕ್ಕೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಈ ಸಭೆಯಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತಿತರರ ಉಪಸ್ಥಿತಿರಿದ್ದರು. ರಾಜ್ಯದ ನಾನಾ ಜಿಲ್ಲೆಗಳ ಪ್ರತಿನಿಧಿಗಳು ಪಾಲ್ಗೋಂಡಿದ್ದರು.