ಬೆಂಗಳೂರು: ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರಲ್ಲಿ ಒಬ್ಬರಾದ ಅಂಕಿತಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಿದರು.
ಟೋಕಿಯೋ ಓಲಂಪಿಕ್ಸ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತೀಯರ ಮನಸ್ಸನ್ನು ಮಹಿಳಾ ತಂಡ ಗೆದ್ದಿದೆ. ಈ ತಂಡದ ತರಬೇತಿದಾರರಾದ ನಿಮಗೆ ತುಂಬು ಹೃದಯದ ಶುಭಾಶಯ ಕೋರುತ್ತೇನೆ. ಕನ್ನಡದ ಯುವತಿ ಭಾರತ ತಂಡದ ಕೋಚ್ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಸಿಎಂ ಹೇಳಿದರು.
ಅಂಕಿತ ಅವರು ಮಡಿಕೇರಿ ಮೂಲದವರು. ಇವರ ತರಬೇತಿಯಲ್ಲಿ ಪಳಗಿದ ದೇಶದ ಮಹಿಳಾ ಹಾಕಿ ತಂಡ ಬಲಿಷ್ಠವಾಗಿದೆ. ಕಳೆದ ಎರಡು ವರ್ಷಗಳಿಂದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಅಂಕಿತಾ ತರಬೇತಿ ನೀಡುತ್ತಿದ್ದಾರೆ. ಹಲವಾರು ವರ್ಷಗಳ ಬಳಿಕ ಓಲಂಪಿಕ್ಸ್ ನಲ್ಲಿ ಮಹಿಳಾ ತಂಡ ಸೆಮಿಫೈನಲ್ ಹಂತಕ್ಕೆ ತಲುಪಿ ಅಭೂತಪೂರ್ವ ಅಮೋಘ ಸಾಧನೆ ಮಾಡಿದೆ. ಭಾರತೀಯ ಮಹಿಳಾ ಹಾಕಿ ತಂಡದ ಮೂರು ಜನ ಕೋಚ್ ಗಳಲ್ಲಿ ಅಂಕಿತಾ ಕೂಡ ಒಬ್ಬರು. ಅವರು ಕನ್ನಡಿಗರು ಅಂಬುದು ಶ್ಲಾಘನೀಯ ಮತ್ತು ಹೆಮ್ಮೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.