ಇತರರಿಗೆ ಮಾದರಿಯಾದ ಮುಖ್ಯಮಂತ್ರಿ- ಅಂಗಾಂಗ ದಾನಕ್ಕೆ ಸಹಿ ಹಾಕಲು ಸಿಎಂ ಬಸವರಾಜ ಬೊಮ್ಮಾಯಿ ನಿರ್ಧಾರ

ಉಡುಪಿ: ವಿಶ್ವ ಅಂಗಾಂಗ ದಾನ ದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಮತ್ತು ಮಾದರಿ ನಿರ್ಧಾರ ಕೈಗೊಳ್ಳುವ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಉಡುಪಿಯಲ್ಲಿ ಕಂಟ್ರಿ ಹೊಟೇಲ್ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂದು ವಿಶ್ವ ಅಂಗಾಂಗ ದಾನ ದಿನ ಆಚರಿಸಲಾಗುತ್ತಿದೆ. ಅಂಗಾಂಗ ದಾನದಿಂದ ಬಹಳಷ್ಟು ಜನರ ಜೀವ ಉಳಿಸಬೇಕಾಗಿದೆ ಎಂದು ತಿಳಿಸಿದರು.

ಮಣ್ಣಲ್ಲಿ ಮಣ್ಣಾಗಿ ಹೋಗುವ ಜೀವ ಅಂಗಾಂಗ ದಾನದ ಮೂಲಕ ಜನರ ಜೀವ ಉಳಿಸಲು ಸಹಾಯವಾದರೆ ಯಾಕೆ ಮಾಡಬಾರದು ಎಂಬುದನ್ನು ಅರಿಯಬೇಕು. ಅಂಗಾಂಗ ದಾನ ಮಾಡುವ ಸಂಕಲ್ಪವನ್ನು ಮಾಡಲು ಜನರು‌ ಮುಂದೆ ಬರಬೇಕು ಎಂದು ಸಿಎಂ ಕರೆ ನೀಡಿದರು.

ಅಂಗಾಂಗ ದಾನ ಮಾಡುವುದರಿಂದ ಸಂಕಷ್ಟದಲ್ಲಿರುವ ಸಾವಿರಾರು ಜನರಿಗೆ ನೆರವಾಗಬಹುದಾಗಿದೆ. ಕಣ್ಣು, ಕಿಡ್ನಿ, ಹೃದಯಗಳು ಸೇರಿದಂತೆ ನಾನಾ ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ. ಎಲ್ಲರೂ ಇದಕ್ಕೆ ಸ್ಪಂದಿಸಬೇಕು.  ಇತ್ತೀಚಿನ ದಿನಗಳಲ್ಲಿ ಅಂಗಾಂಗ ಕೃಷಿ ಬಹಳಷ್ಟು ಯಶಸ್ವಿಯಾಗುತ್ತಿವೆ ಎಂದು ಅವರು ಹೇಳಿದರು.

ಇದೇ ವೇಳೆ ತಾವೂ ಕೂಡ ಅಂಗಾಂಗ ದಾನ ಮಾಡಲು ಸಹಿ ಹಾಕುತ್ತಿರುವುದಾಗಿ ತಿಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇತರರು ಕೂಡ ಅಂಗಾಂಗ ದಾನಕ್ಕೆ ಮುಂದಾಗುವಂತೆ ಕರೆ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌