ಪಂಚಮಸಾಲಿ ಅಷ್ಟೇ ಅಲ್ಲ, ಧ್ವನಿ ಇಲ್ಲದ ಆದಿ ಬಣಜಿಗ, ಕೂಡು ಒಕ್ಕಲಿಗರನ್ನೂ 2ಎಗೆ ಸೇರಿಸಬೇಕು- ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು- ಯತ್ನಾಳ

ವಿಜಯಪುರ: ಕೇವಲ ಲಿಂಗಾಯಿತ ಪಂಚಮಸಾಲಿ ಮಾತ್ರವಲ್ಲ, ಧ್ವನಿ ಇಲ್ಲದ ಲಿಂಗಾಯಿತ ಉಪಪಂಗಡಗಳಾದ ಆದಿ ಬಣಜಿಗ, ಕೂಡು ಒಕ್ಕಲಿಗರನ್ನೂ 2ಎ ಮೀಸಲಾತಿ ಪಟ್ಟಿಗೆ ಸೇರಿಸಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2 ಮೀಸಲು ನೀಡುವ ಹೋರಾಟದ ಕುರಿತು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಈಗಾಗಲೇ ಮಾತನಾಡಿದ್ದಾರೆ. ನಾವು ಪಂಚಮಸಾಲಿ ಸಮಾಜ ಅಷ್ಟೇ ಅಲ್ಲ. ಅದಿ ಬಣಜಿಗ, ಕೂಡು ಒಕ್ಕಲಿಗ ಸೇರಿದಂತೆ ಲಿಂಗಾಯಿತ ಎಲ್ಲ ಉಪಪಂಗಡಗಳಿಗೂ 2ಎ ಮೀಸಲಾತಿ ನೀಡಬೇಕು. ಅಲ್ಲದೇ, ಕುರುಬ ಸಮಾಜ ಹಾಗೂ ವಾಲ್ಮೀಕಿ ಸಮಾಜ, ಮಡಿವಾಳ ಸಮಾಜಗಳ ಬೇಡಿಕೆ ಹೋರಾಟವನ್ನೂ ಬೆಂಬಲಿಸಿದ್ದೇವೆ. ನಿನ್ನೆ ಹುಬ್ಬಳ್ಳಿಯ ಖಾಸಗಿ ಹೊಟೇಲಿನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಮೀಸಲಾತಿ ನೀಡುವ ಅಧಿಕಾರವನ್ನು ಪ್ರಧಾನಿ ನರೇಂದ್ರ ಮೋದಿ ಈಗ ರಾಜ್ಯ ಸರಕಾರಗಳಿಗೆ ನೀಡಿದ್ದಾರೆ. ಪ್ರಧಾನಿಗಳ ಈ ಐತಿಹಾಸಿಕ ತಿದ್ದುಪಡಿಗೆ ಸ್ವಾಗತ ಮಾಡುತ್ತೇನೆ. ಮೀಸಲಾತಿ ವಿಚಾರವಾಗಿ ನಾನು ಸಿಎಂ ಬೊಮ್ಮಾಯಿ ಅವರಿಗೆ ಒತ್ತಾಯ ಮಾಡುತ್ತೇನೆ. ಈಗಾ ಯಾವುದೇ ನೆಪ‌ ಹೇಳಲು ಬರುವುದಿಲ್ಲ. ಆದಷ್ಟು ಬೇಗ ಪಂಚಮಸಾಲಿ ಸಮಾಜ, ಆದಿ ಬಣಜಿಗ, ಕೂಡು‌ಒಕ್ಕಲಿಗ ಸಮಾಜಗಳಿಗೆ 2ಎ ಮೀಸಲಾತಿ ನೀಡಬೇಕು. ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಎಸ್ಸಿ ಸಮಾಜದ ಮೀಸಲಾತಿಯನ್ನು ಮೂರು ಪ್ರತಿಶತದಿಂದ 7.5 ಪ್ರತಿಶತಕ್ಕೆ ಏರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಎಂದು ಯತ್ನಾಳ ಒತ್ತಾಯಿಸಿದರು.

ಅಷ್ಟೇ ಅಲ್ಲ, ಮಡಿವಾಳ ಸಮಾಜ, ಹಡಪದ ಸಮಾಜ, ಗಂಗಾಮತಸ್ಥ, ತಳವಾರ, ಕೋಳಿ ಸಮಾಜಗಳನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು. ಈ‌ ನಿಟ್ಟಿನಲ್ಲಿ ಸಿಎಂ‌ ಅವರು ಕ್ರಮ ತೆಗೆದುಕೊಳ್ಳದಿದ್ದರೆ ಅನಿವಾರ್ಯವಾಗಿ ಹೋರಾಟ ನಡೆಸುತ್ತೇವೆ. ಈ ಹೋರಾಟಕ್ಕೆ ಯಾರಾದರೂ ಬರಲಿ ಬಿಡಲಿ. ನಮ್ಮ ಹೋರಾಟ ನಡೆಯುತ್ತದೆ. ಆಯಾ ಸಮುದಾಯದ ನಾಯಕರು ಶಾಸಕರು ಬರದಿದ್ದರೆ ಮುಂದಿನ ಚುನಾವಣೆಯಲ್ಲಿ ಜನರು ಅವರಿಗೆ ಪಾಠ ಕಲಿಸುತ್ತಾರೆ ಎಂದು ಯತ್ನಾಳ ಎಚ್ಚರಿಕೆ ನೀಡಿದರು.

ಗಣೇಶೋತ್ಸವಕ್ಕೆ ನಿರ್ಬಂಧ ವಿಚಾರ

ಇದೇ ವೇಳೆ ಗಣೇಶ ಚತುರ್ಥಿ ಆಚರಣೆಗೆ ನಿರ್ಬಂಧ ವಿಧಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದು ಕೇವಲ ಹಿಂದೂಗಳ ಆಚರಣೆಗೆ ಸೀಮಿತವಾಗಿರದೇ ಮೋಹರಂ ಸೇರಿದಂತೆ ಮುಂಬರುವ ಎಲ್ಲ ಹಬ್ಬಗಳಿಗೂ ಅನ್ವಯವಾಗಬೇಕು ಎಂದು ತಿಳಿಸಿದರು.

ಕೋವಿಡ್ ಮೂರನೇಯ ಅಲೆ ಆತಂಕದ ಹಿನ್ನೆಲೆಯಲ್ಲಿ ಸರಕಾರ ಗಣೇಶ ಹಬ್ಬಕ್ಕೆ ನಿರ್ಬಂಧನಗಳನ್ನು ವಿಧಿಸಿದೆ. ಜನರ ರಕ್ಷಣೆಗಾಗಿ ನಿರ್ಭಂಧ ವಿಧಿಸಿದ್ದರ ಬಗ್ಗೆ ನಮಗೆ ಆಕ್ಷೇಪವಿಲ್ಲ. ಅದನ್ನು ಎಲ್ಲರೂ ಪಾಲಿಸುತ್ತೇವೆ. ಆದರೆ ಕೋವಿಡ್ ನೆಪದಲ್ಲಿ ಕೇವಲ ಹಿಂದೂಗಳ ಹಬ್ಬಕ್ಕೆ ನಿರ್ಬಂಧ ವಿಧಿಸಿದರೆ ನಡಯುವುದಿಲ್ಲ. ಮೋಹರಂ‌‌‌ ಸೇರಿದಂತೆ ಮುಂಬರುವ ಎಲ್ಲ ಹಬ್ಬಗಳಿಗೂ ನಿರ್ಭಂದಗಳು ಅನ್ವಯವಾಗಬೇಕು. ಬಿಜೆಪಿ ಸರಕಾರ ಮತ್ತು ಬೊಮ್ಮಾಯಿ ಸರಕಾರದಲ್ಲಿ‌ ಇದೆಲ್ಲ‌ ನಡೆಯಲ್ಲ ಎಂದುಕೊಂಡಿದ್ದೇನೆ. ಅವರಿಗೊಂದು ಕಾನೂನು, ನಮಗೊಂದು ಕಾನೂನು ನಡಿಯಲ್ಲ ಎಂದು ಭಾವಿಸಿದ್ದೇನೆ. ಕೇವಲ ಹಿಂದೂಗಳಿಗೆ ಮಾತ್ರ ನಿರ್ಭಂದ ಹಾಕಿದರೆ ಅದನ್ನು ಉಲ್ಲಂಘನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಿಎಂ ಬಸವರಾಜ ಬೊಮ್ಮಾಯಿ- ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಭೇಟಿ ವಿಚಾರ

ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರನ್ನು ಭೇಟಿಯಾಗಿರುವ ಬಗ್ಗೆ ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಆಕ್ಷೇಪಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ಇದರಿಂದ ಪ್ರೀತಂಗೌಡರಿಗೆ ಕಸವಿಸಿಯಾಗೋದು ಸಹಜ. ಅವರು ಜೆಡಿಎಸ್ ವಿರುದ್ಧ ಹೋರಾಟ ಮಾಡಿ ಗೆದ್ದವರು ಎಂದು ಹೇಳಿದರು.

ದೇವೆಗೌಡರ ಭೇಟಿ ಬಗ್ಗೆ ನನಗೆ ಆಕ್ಷೇಪವಿಲ್ಲ ಇಲ್ಲ. ಮಾಜಿ ಪ್ರಧಾನಿಯವ್ರನ್ನ ಭೇಟಿ ಮಾಡೋದು ತಪ್ಪೇನಲ್ಲ. ಬರೀ ದೇವೆಗೌಡರನ್ನಷ್ಟೇ ಭೇಟಿಯಾಗಿದ್ದು ಸರಿಯಲ್ಲ. ಬೊಮ್ಮಾಯಿಯವರು ಗೌರವಯುತವಾಗಿ ಎಲ್ಲ ಮಾಜಿ ಸಿಎಂಗಳ ಮನೆಗೆ ಹೋಗಿ ಬಂದಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ದೇವೆಗೌಡರ ಮನೆಗಷ್ಟೇ ಹೋಗಿದ್ದರಿಂದ ಸಮಸ್ಯೆ ಉದ್ಭವಿಸಿದೆ ಎಂದು ಯತ್ನಾಳ ಹೇಳಿದರು.

ಈ ಭೇಟಿಯ ಹಿಂದೆ ರಾಜಕೀಯ ತಂತ್ರಗಾರಿಕೆ ಇದೆಯಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಬೊಮ್ಮಾಯಿಗೆ ಸರ್ಕಾರ ನಡೆಸಲು ಆಶ್ರಯ ಬೇಕಿದೆ ಎಂದು ತಿಳಿಸಿದರು.

ಪರೋಕ್ಷವಾಗಿ ಮಾಜಿ ಸಿಎಂ ಬಿಎಸ್ವೈ ವಿರುದ್ಧ ಯತ್ನಾಳ್ ಆಕ್ರೋಶ ಹೊರ ಹಾಕಿದ ಯತ್ನಾಳ, ಮಲಗಿದ್ದ ಮಗುವನ್ನ ಚಿವುಟಿ ಅಳುವಂತೆ ಮಾಡತ್ತಾರೆ. ಯಾಕೇ ಆನಂದು ಯಾಕೆ ಅಳ್ತೀಯಾ? ಯಾಕೇ ರೇಣುಕೂ ಯಾಕೇ ಅಳ್ತೀಯಾ? ಯಾಕೇ ಪ್ರೀತಂ ಯಾಕೇ ಅಳ್ತೀಯಾ ಎಂದು ಚಿವುಟಿ ಕೇಳ್ತಾರೆ. ಬೊಮ್ಮಾಯಿ ಬೈದ್ರು ಅಂದಾಗ, ಅವ್ರು ಯಾಕೇ ಬೈದ್ರಿ ಅಂತಾ ಮತ್ತೆ ಬೊಮ್ಮಾಯಿಗೆ ಕೇಳಿ ಚಿವುಟುತ್ತಾರೆ ಎಂದು ಲೇವಡಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚಂದ್ರ ಚೌಧರಿ ಮತ್ತೀತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌