ವಿಜಯಪುರ: ರಾಜ್ಯ ಸರkeರದ ನಾನಾ ಇಲಾಖೆಗಳ ಅಧಿಕಾರಿಗಳು ಮತ್ತು ಇತರ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳಲ್ಲಿ ಅಕ್ರಮ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ನಡೆಯುವುದನ್ನು ತಪ್ಪಿಸಬೇಕು. ಎಲ್ಲ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಸಿಗಬೇಕು ಎಂದು ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಹೇಳಿದ್ದಾರೆ.
ಕೆ ಪಿ ಎಸ್ ಸಿ.ಯನ್ನು ಭ್ರಷ್ಟ ಆಡಳಿತಗಾರರಿಂದ ಮುಕ್ತಗೊಳಿಸಲು ಆಗ್ರಹಿಸಿ ಹಾಗೂ ಅನರ್ಹ ಅಧ್ಯಕ್ಷರನ್ನು ವಜಾಗೊಳಿಸಲು ಒತ್ತಾಯಿಸಿ ವಿಜಯಪುರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.
ಈಗ ಕೆ ಪಿ ಎಸ್ ಸಿ ಅಧ್ಯಕ್ಷರ ನೇಮಕಾತಿಯಲ್ಲೇ ನಿಯಮ ಉಲ್ಲಂಘನೆ ಆಗಿದ್ದು, ಕೆ ಪಿ ಎಸ್ ಸಿ ಯ ಬಗ್ಗೆ ಇದ್ದ ಅಲ್ಪಸ್ವಲ್ಪ ನಂಬಿಕೆಯು ಕುಸಿದು ಹೋಗಿದೆ. ಈ ರೀತಿ ನಿಯಮ ಉಲ್ಲಂಘನೆ ಮಾಡಿ ನೇಮಿಸಿರುವುದು ಮತ್ತಷ್ಟು ಅಕ್ರಮಗಳು ನಡೆಯಲು ದಾರಿ ಮಾಡಿಕೊಟ್ಟಂತಾಗುತ್ತದೆ. ಈಗಾಗಲೇ 2011ರಲ್ಲಿ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕದಲ್ಲಿ ಆಗಿರುವ ಅಕ್ರಮ, ಎಫ್ ಡಿ ಸಿ ಮತ್ತು ಎಸ್ ಡಿ ಸಿ ಪ್ರಶ್ನೆ ಪತ್ರಿಕೆಗಳ ಸೋರಿಕೆ ಒಂದೇ ಪರೀಕ್ಷಾ ಕೇಂದ್ರದ 70 ಅಭ್ಯರ್ಥಿಗಳ ಆಯ್ಕೆ ಮುಂತಾದ ಅಕ್ರಮಗಳಿಂದಾಗಿ ಕೆ ಪಿ ಎಸ್ ಸಿ ಬಗ್ಗೆ ಜನರಿಗೆ ವಿಶ್ವಾಸವೇ ಇಲ್ಲದಂತಾಗಿದೆ. ಈಗ ಇದೂ ಒಂದು ಸೇರಿಕೊಂಡ ಪರಿಣಾಮವನ್ನು ನಿರುದ್ಯೋಗಿ ಯುವಜನರು ಅನುಭವಿಸಬೇಕಾಗಿದೆ ಎಂದು ಸಿದ್ದಲಿಂಗ ಬಾಗೇವಾಡಿ ಆರೋಪಿಸಿದರು.
ಉದ್ಯೋಗಾಕಾಂಕ್ಷಿಗಳಾದ ಸೋಮು ಮಡ್ಡಿ, ಶೋಭಾ, ಶರಣಗೌಡ ಬಾಡಗಿ, ರವಿ ಬಿರಾದಾರ, ರವಿ ಹೊಸಮನಿ, ಆದಿತ್ಯ ಬಿರಾದಾರ, ಶೃತಿ, ಲಾಯಪ್ಪ ಸುಣಗಾರ ಮಾತನಾಡಿ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಹಗಲು ರಾತ್ರಿ ಅಧ್ಯಯನ ನಡೆಸಿ ತರಬೇತಿ ಪಡೆದು ಉದ್ಯೋಗ ಪಡೆಯಲು ಹರಸಾಹಸ ಪಡುತ್ತಾರೆ. ಆದರೆ ಕೆ ಪಿ ಎಎಸ್ ಸಿ ಯಲ್ಲಿ ನಡೆಯುವ ಇಂಥ ಅಕ್ರಮಗಳಿಂದಾಗಿ ಪ್ರಾಮಾಣಿಕರು ಮತ್ತು ಪ್ರತಿಭಾವಂತರು ನೇಮಕಾತಿಯಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆ ಪಿ ಎಸ್ ಸಿ ಯನ್ನು ಸ್ವಚ್ಛಗೊಳಿಸಿ. ಈ ಕುರಿತು ಸಮಗ್ರ ತನಿಖೆ ನಡೆಸಿ ನಿಯಮ ಉಲ್ಲಂಘನೆ ಸಾಬೀತಾದರೆ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಬಳಿಕ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಪತ್ರ ಸಲ್ಲಿಸಿದರು.