ಬೆಂಗಳೂರು: 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವರ್ಷವಿಡಿ ದೇಶಕ್ಕೆ ಮಾದರಿಯಾಗಿರುವ ಕನ್ನಡ ನಾಡು, ನುಡಿ, ಸಾಹಿತ್ಯ,ಆಡಳಿತವನ್ನು ಬಿಂಬಿಸುವ ಕೆಲಸ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 75ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಸೌಭಾಗ್ಯ ತಮಗೆ ಬಂದಿದೆ. ಈಗ 75 ವರ್ಷಗಳಲ್ಲಿ ನಾವು ನಡೆದುಕೊಂಡು ಬಂದಿರುವ ದಾರಿ ಮತ್ತು ಮುಂದಿನ ಹಾದಿಯ ಬಗ್ಗೆ ಸರಕಾರ ಚಿಂತನೆ ಮಾಡುತ್ತಿದೆ ಎಂದು ತಿಳಿಸಿದರು.
75 ವರ್ಷಗಳಲ್ಲಿ ಹಲವಾರು ಸವಾಲು ಸಂದರ್ಭಗಳಲ್ಲಿ ಕರ್ನಾಟಕ ದೇಶಕ್ಕೆ ಮಾದರಿಯಾಗಿದೆ. ನಮ್ಮ ಕನ್ನಡ ನಾಡು, ನುಡಿ, ಸಾಹಿತ್ಯ, ಆಡಳಿತ ಇಡೀ ದೇಶಕ್ಕೆ ಮಾದರಿಯಾಗಿದೆ. ಇದನ್ನು ಬಿಂಬಿಸುವ ಕೆಲಸ ಇಡೀ ವರ್ಷ ನಡೆಯಲಿದೆ ಎಂದು ಅವರು ತಿಳಿಸಿದರು.
ಕೊರೊನಾ 1 ಮತ್ತು 2ನೇ ಅಲೆಯ ಆಧಾರದ ಮೇಲೆ ಈಗ ಕೊರೊನಾ ಮೂರನೇ ಅಲೆಯನ್ನು ತಡೆಯಲು ಹಂತ ಹಂತವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರಕಾರ, ಐಸಿಎಂಆರ್, ಪ್ರಧಾನಿ ನರೇಂದ್ರ ಮೋದಿ ತಜ್ಞರು ಮಾರ್ಗದರ್ಶನ ಮಾಡಿದ್ದಾರೆ. ಈಗಿರುವ ಸ್ಥಿತಿಗತಿ ಮತ್ತು ನಿಯಂತ್ರಣ ಕುರಿತು ವೈಜ್ಞಾನಿಕವಾಗಿ ಚರ್ಚಿಸಿ ಕ್ರಮಗಳನ್ನು ಕೈಗೊಳ್ಳುತ್ತೇವೆ. ಜನರಿಗೆ, ಜನರ ಬದುಕಿಗೆ ಯಾವುದೇ ತೊಂದರೆಯಾಗಬಾರದು. ಆದರೆ, ಕೊರೊನಾ ಕೂಡ ಹರಡಬಾರದು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಕೊರೊನಾ ಮಾರ್ಗಸೂಚಿಯಂತೆ ಸ್ವಾತಂತ್ರ್ಯ ದಿನ ಆಚರಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.