ಕಾಗಿನೆಲೆ ಶ್ರೀಗಳನ್ನು ಭೇಟಿ ಮಾಡಿ ಸಂಗೋಳ್ಳಿ ರಾಯಣ್ಣನ ಜನ್ಮದಿನ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ ಸಿಎಂ-ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ ಶ್ರೀ ನಿರಂಜನಾನಂದ ಸ್ವಾಮೀಜಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿರುವ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಶಾಖಾ ಮಠಕ್ಕೆ ಭೇಟಿ ನೀಡಿ ಜಗದ್ಗುರು ಶ್ರೀ ನಿರಂಜನಾನಂದ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಕಾಗಿನೆಲೆ ಶ್ರೀ ನಿರಂಜನಾಂದ ಶ್ರೀಗಳಿಂದ ಆಶೀರ್ವಾದ ಪಡೆದ ಸಿಎಂ ಬಸವರಾಜ ಬೊಮ್ಮಾಯಿ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನವನ್ನು ಆ. 15 ರಂದು ರವಿವಾರ ಬೆಂಗಳೂರಿನಲ್ಲಿ ಸರಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮುಖ್ಯಮಂತ್ರಿಗಳು ಶ್ರೀಗಳಿಗೆ ಆಹ್ವಾನ ನೀಡಿದರು.

 

ಶ್ರೀಗಳ ಭೇಟಿಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಶ್ರೀಗಳ ಆಶೀರ್ವಾದಕ್ಕಾಗಿ ಬಂದಿದ್ದೆ. ನನಗೂ ಹಾಗೂ ಅವರಿಗೂ ಅವಿನಾಭವ ಸಂಬಂಧವಿದೆ. ಸಂಗೋಳ್ಳಿ ರಾಯಣ್ಣನವರ ಹುಟ್ಟುಹಬ್ಬ ಮತ್ತು ಅವರ ಹುತಾತ್ಮ ದಿನವನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡುವಂತೆ ಬೇಡಿಕೆ ಸಲ್ಲಿಸಿದ್ದರು. ಸಂಗೊಳ್ಳಿ ರಾಯಣ್ಣ ದಿಟ್ಟ ಹೋರಾಟಗಾರ. ಸಿಪಾಯಿ ದಂಗೆಯ 40 ವರ್ಷಗಳ ಮುಂಚೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದವರು. ಕಿತ್ತೂರು ಚನ್ನಮ್ಮಾಜಿ ಅವರಿಗೆ ಬಲಗೈ ಬಂಟನಾಗಿ ಬ್ರಿಟೀಷರಿಗೆ ಸಿಂಹಸ್ವಪ್ನನಾಗಿ ಅತ್ಯಂತ ಶೂರ ಮತ್ತು ವೀರತನದ ಹೋರಾಟ ಮಾಡಿದ ದಂತಕಥೆಯಿದೆ. ಆಗಷ್ಟ 15 ಅವರ ಜನ್ಮದಿನ. ಜನೇವರಿ 26 ಅವರ ಹುತಾತ್ಮ ದಿನ. ಈ ದಿನಗಳಂದು ಸರಕಾರಿ ಕಾರ್ಯಕ್ರಮಗಳನ್ನು ಆಚರಿಸುವಂತೆ ಬಹಳ ದಿನಗಳ ಬೇಡಿಕೆಯಿತ್ತು. ಪೂಜ್ಯರು ಈ ಕೆಲಸ ಮಾಡಲು ಸೂಚಿಸಿದ್ದರು. ಅದರಂತೆ ನಿನ್ನೆ ಈ ಕುರಿತು ಆದೇಶ ಹೊರಡಿಸಿದ್ದೇನೆ ಎಂದು ಹೇಳಿದರು. ಅಲ್ಲದೇ, ಈ ಸಂದರ್ಭದಲ್ಲಿ ಆದೇಶದ ಪ್ರತಿಯನ್ನು ಶ್ರೀಗಳಿಗೆ ನೀಡಿದರು.

ಕಾಗಿನೆಲೆ ಶ್ರೀ ನಿರಂಜನಾನಂದ ಶ್ರೀಗಳಿಗೆ ಆದೇಶದ ಪ್ರತಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಆ. 15 ರವಿವಾರದಿಂದಲೇ ಸಂಗೊಳ್ಳಿ ರಾಯಣ್ಣನ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ರೇಲ್ವೆ ಸ್ಟೇಷನ್ ಬಳಿ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ ಮಾಡಿ ಅಲ್ಲಿಯೇ ಅಧಿಕೃತವಾಗಿ ಸರಕಾರಿ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಸರಕಾರಿ ಕಾರ್ಯಕ್ರಮಗಳು ನಡೆಯಲಿವೆ. ಬೆಂಗಳೂರಿನ ಕಾರ್ಯಕ್ರಮಕ್ಕೆ ಪೂಜ್ಯರನ್ನು ಆಹ್ವಾನ ಮಾಡಲು ಬಂದಿದ್ದೇನೆ. ಅವರೂ ಕೂಡ ಬರಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಆದೇಶದ ಪ್ರತಿ ಪಡೆದು ಮಾತನಾಡಿದ ಶ್ರೀ ನಿರಂಜನಾನಂದ ಸ್ವಾಮೀಜಿ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ನಿರಂಜನಾನಂದ ಸ್ವಾಮೀಜಿ, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಜನ್ಮದಿನ ಮತ್ತು ಹುತಾತ್ಮ ದಿನಗಳಂದು ರಾಜಧಾನಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸಂಗೋಳ್ಳಿ ರಾಯಣ್ಣನ ಭಾವಚಿತ್ರ ಇಟ್ಟು ಕಾರ್ಯಕ್ರಮ ಆಯೋಜಿಸಬೇಕು ಎಂಬುದು ಸಮಾಜದ ಬೇಡಿಕೆಯಿತ್ತು. ಇದಕ್ಕಾಗಿ ಪಾದಯಾತ್ರೆ ಮಾಡುವ ಮೂಲಕ ಸರಕಾರಕ್ಕೆ ಮನವಿಯನ್ನೂ ಸಲ್ಲಿಸಲಾಗಿತ್ತು. ಈ ಮನವಿಗೆ ಸಿಎಂ ಬಸವರಾಜ ಬೊಮ್ಮಾಯಿ ಒಪ್ಪಿಗೆ ಸೂಚಿಸಿ ಎರಡೂ ದಿನಗಳಂದು ಸರಕಾರಿ ಕಾರ್ಯಕ್ರಮಗಳನ್ನು ಆಚರಿಸಲು ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಖಂಡ ಕರ್ನಾಟಕದ ಕುರುಬ ಸಮುದಾಯದ ಪರವಾಗಿ ಸರಕಾರ ಮತ್ತು ಮುಖ್ಯಮಂತ್ರಿಗಳಿಗೆ ಅಭಿನಂದನೆಗಳನ್ನು ಹೇಳುತ್ತೇನೆ. ಅದೇ ರೀತಿ ಬೆಂಗಳೂರಿನಲ್ಲಿ ನಡೆಯಲಿರುವ ಸರಕಾರಿ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಕೆ. ಎಸ್. ಈಶ್ವರಪ್ಪ, ಎಂ. ಟಿ. ಬಿ. ನಾಗರಾಜ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌