ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ 36ನೇ ಕರ್ನಾಟಕ ಎನ್ ಸಿ ಸಿ ಬಟಾಲಿಯನ್, ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಫಿಟ್ ಇಂಡಿಯಾ ಜಾಗೃತಿ ಓಟ ಮತ್ತು ಸೈಕಲ್ ಜಾಥಾ ನಡೆಯಿತು.
ಐತಿಹಾಸಿಕ ಗೋಳಗುಮಟ್ಟದಲ್ಲಿ ನಡೆದ ಕಾರ್ಯಕ್ರಮಕ್ಕೆ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಜಾವೀದ ಜಮಾದಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಯುವಕರು ಆರೋಗ್ಯ ಕಾಪಾಡಿಕೊಳ್ಳಲು ತಮ್ಮ ಜೀವನ ಶೈಲಿ ಬದಲಿಸಿಕೊಂಡು ಪ್ರತಿನಿತ್ಯ ವ್ಯಾಯಾಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಸದೃಢ ಮತ್ತ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಎನ್ ಸಿ ಸಿ ಕಮಾಡಿಂಗ್ ಆಫೀಸರ್ ಕನಲ್ ಅಭಿಜೀತ ವೇಳನಕರ ಮಾತನಾಡಿ, ದೈಹಿಕ ಮತ್ತು ಮಾನಸಿಕ ಸದೃಢತೆ ಇಂದು ಅತೀ ಮುಖ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್. ಜಿ. ಲೋಣಿ, ಮೇಜರ್ ಶೃತಿ ನಯ್ಯರ, ಸುಬೇದಾರ ಮೇಜರ್ ಮಹಾವೀರ ಸಿಂಗ್, ಕ್ರೀಡಾ ತರಬೇತಿದಾರರಾದ ಆರ್. ಕೆ. ದೇಶಪಾಂಡೆ, ಎ. ಎಚ್. ಸಗರ, ಯಲ್ಲಪ್ಪ ಜಂಪ್ಲೆ, ಇಕ್ಬಾಲ್ ಮೋಮಿನ, ಕಾಶಿನಾಥ ಗಾಗರೆ, ಅಲಿಸಾಬ ದಡೇದ, ಸಂತೋಷ ಅಗಸನಾಳ, ಇರ್ಫಾನ್ ಜಮಾದಾರ, ಚಂದ್ರು ತಾರಾನಾಳ ಮುಂತಾದವರು ಉಪಸ್ಥಿತರಿದ್ದರು.
ಐತಿಹಾಸಿಕ ಗೋಳಗುಮ್ಮಟ ಆವರಣದಿಂದ ಆರಂಭವಾದ ಫಿಟ್ ಇಂಡಿಯಾ 6 ಕಿ. ಮೀ. ಮ್ಯಾರಾಥಾನ್ ವಿಜಯಪುರ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ದೈಹಿಕ ಮಹತ್ವದ ಸಂದೇಶ ಸಾರುತ್ತ ಸೋಲಾಪುರ ರಸ್ತೆಯಲ್ಲಿರುವ 36 ಕರ್ನಾಟಕ ಎನ್ ಸಿ ಸಿ ಬಟಾಲಿಯನ್ ಗೆ ತೆರಳಿ ಮುಕ್ತಾಯವಾಯಿತು.
ಈ ಮ್ಯಾರಾಥಾನ್ ನಲ್ಲಿ ವಿಜೇತರಿಗೆ ಸ್ಪರ್ಧಾಳುಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.