ವಿಜಯಪುರ: ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಧ್ವಜಾರೋಹಣಕ್ಕೆ ಆಗಮಿಸಿದ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ನೇತೃತ್ವದಲ್ಲಿ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ತೊರವಿಯಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಆಗಮಿಸಿದ ಶಶಿಕಲಾ ಜೊಲ್ಲೆ ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳಿದ್ದು ಅವರಿಗೆ ಧ್ವಜಾರೋಹಣ ಮಾಡಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಇದರಿಂದ ಒಂದು ಕ್ಷಣ ಗಲಿಬಿಲಿಗೊಂಡ ಸಚಿವರು ಧ್ವಜಾರೋಹಣಕ್ಕೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೋಂಡು. ಈ ಮಧ್ಯೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರತಿಭಟನಾ ನಿರತ ಮಹಿಳೆಯರನ್ನು ವಶಕ್ಕೆ ಪಡೆದರು. ನಂತರ ಅವರನ್ನು ಪೊಲೀಸ್ ವಾಹನದಲ್ಲಿ ಕಾರ್ಯಕ್ರಮ ಸ್ಥಳದಿಂದ ಕರೆದೊಯ್ದರು.
ಸಂಸದ ರಮೇಶ ಜಿಗಜಿಣಗಿ ಮುನಿಸು
ಈ ಮಧ್ಯೆ, ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದ ವಿಜಯಪುರ ಬಿಜೆಪಿ ಸಂಸದ ರಮೇಶ ಜಡಿಗಜಿಣಗಿ ಧ್ವಜಾರೋಹಣದ ಬಳಿಕ ಗಣ್ಯರಿಗೆ ಮೀಸಲಾಗಿದ್ದ ಕುರ್ಚಿಯಲ್ಲಿ ಆಸೀನರಾಗಿದ್ದರು. ಧ್ವಜಾರೋಹಣ ಮತ್ತು ನಾನಾ ಪದಾತಿ ದಳಗಳನ್ನು ಸಚಿವರು ವೀಕ್ಷಣೆ ಮಾಡಿದ ಬಳಿಕ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಸೇರಿದಂತೆ ಗಣ್ಯರು ಸಾಧಕರನ್ನು ಸನ್ಮಾನಿಸಲು ತೆರಳಿದರು. ಆದರೆ, ಸಂಸದ ರಮೇಶ ಜಿಗಜಿಣಗಿ ಮಾತ್ರ ಅಲ್ಲಿಯೇ ಕುಳಿತಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ವಿಠ್ಠಲ ನಡುವಿನಕೆರಿ ಮತ್ತು ಇತರರು ಕಾರ್ಯಕ್ರಮ ನಿರೂಪಕರು ಸಂಸದರ ರಮೇಶ ಜಿಗಜಿಣಗಿ ಅವರ ಹೆಸರನ್ನು ಹೇಳಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವಿಷಯ ತಿಳಿದ ಸಚಿವೆ ಶಶಿಕಲಾ ಜೊಲ್ಲೆ ಸ್ಥಳಕ್ಕೆ ದೌಡಾಯಿಸಿ ಸಂಸದರನ್ನು ಆಹ್ವಾನಿಸಿದರು. ಆಗ, ಸಂಸದರು ಸಿಟ್ಟಾಗಿ ಸಂಸದರೆಂದರೆ ಕಿಮ್ಮತ್ತಿಲ್ವಾ ಎಂದು ಆಕ್ರೋಶ ಹೊರ ಹಾಕಿದರು. ಆದರೂ, ಕಾರ್ಯಕ್ರಮ ಮತ್ತು ಸಚಿವರಿಗೆ ಗೌರವ ನೀಡಿ ಸಾಧಕರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು.
ಘೇರಾವು, ಸಂಸದರ ಮುನಿಸಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವೆ ಶಶಿಕಲಾ ಜೊ ಲ್ಲೆ
ತಮಗೆ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿರುವ ಕುರಿತು ತಮ್ಮ ಭಾಷಣದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ ಅಕ್ಕಮಹಾದೇವಿ ವಚನ ಹೇಳುವ ಮೂಲಕ ತಾವು ಯಾವುದೇ ಭ್ರಷ್ಟಾಚಾರದಲ್ಲಿ ತೊಡಗಿಲ್ಲ. ತಮ್ಮ ಹಿತಶತ್ರುಗಳು ಮತ್ತು ವಿರೋಧಿಗಳು ತಮ್ಮ ಏಳಿಗೆಯನ್ನು ಸಹಿಸದೇ ವ್ಯವಸ್ಥಿತವಾಗಿ ಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ರಮೇಶ ಜಿಗಜಿಣಗಿ ಮುನಿಸಿನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಂಸದರನ್ನು ಸಾಧಕರಿಗೆ ಸನ್ಮಾನ ಮಾಡಲು ನಾನೇ ಖುದ್ದಾಗಿ ಆಹ್ವಾನಿಸಿದ್ದೇನೆ. ಆದರೆ, ಕೊರೊನಾ ಕಾರಣದಿಂದ ಜನಜಂಗುಳಿಯಲ್ಲಿ ಬರುವುದಿಲ್ಲ ಎಂದು ಹೇಳಿದ್ದರಿಂದ ನಾನು ಕಾರ್ಯಕ್ರಮದಲ್ಲಿ ಪಾಲ್ಗೋಂಡೆ. ಸಂಸದರಿಗೆ ತಮ್ಮ ಮೇಲೆ ಯಾವುದೇ ಸಿಟ್ಟಿಲ್ಲ. ಸಂಸದರು ಚಿಕ್ಕೋಡಿಯ ಸಂಸದರಾಗಿದ್ದಾಗಿನಿಂದ ತಾವು ಅವರ ವ್ಯಕ್ತಿತ್ವನ್ನು ಬಲ್ಲವರಾಗಿರುವುದಾಗಿ ತಿಳಿಸಿದರು.