ವಿಜಯಪುರ: ಖ್ಯಾತ ನಟ ಸೋನು ಸೂದ್ ಯಾರಿಗೆ ತಾನೆ ಗೊತ್ತಿಲ್ಲ. ಇವರು ಕೊರೊನಾ ಮತ್ತು ಲಾಕಡೌನ್ ಆರಂಭವಾದಾಗಿನಿಂದ ತಮ್ಮ ತನು, ಮನ ಮತ್ತು ಧನದಿಂದ ಲಕ್ಷಾಂತರ ಜನರಿಗೆ ನಾನಾ ರೀತಿಯಲ್ಲಿ ನೆರವಾಗುವ ಮೂಲಕ ಮಾದರಿಯಾಗಿದ್ದಾರೆ.
ಇಂಥ ಖ್ಯಾತ ನಟ ಬಸವ ನಾಡು ವಿಜಯಪುರದ ವಿದ್ಯಾರ್ಥಿಯೊಬ್ಬರ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸುವ ಮೂಲಕ ಈ ವಿದ್ಯಾರ್ಥಿಯ ಬೆನ್ನು ತಟ್ಟಿದ್ದಾರೆ. ಆ ವಿದ್ಯಾರ್ಥಿಯ ಕಾರ್ಯವನ್ನು ಎಲ್ಲರೂ ಬೆಂಬಲಿಸುವಂತೆಯೂ ಸೋನು ಸೂದ್ ಮನವಿಯನ್ನೂ ಮಾಡಿದ್ದಾರೆ.
ಅಂದ ಹಾಗೆ ಆ ವಿದ್ಯಾರ್ಥಿ ಬೇರಾರೂ ಅಲ್ಲ. ತಮ್ಮ ಕಾಯಕದ ಮೂಲಕ ಬರದ ಭೂಮಿಯಲ್ಲಿ ಹಸಿರು ಕ್ರಾಂತಿಗೆ ಕಾರಣವಾಗಿರುವ ಆಧುನಿಕ ಭಗೀರಥ ಎಂ. ಬಿ. ಪಾಟೀಲ ಕಿರಿಯ ಪುತ್ರ ಧ್ರುವ ಪಾಟೀಲ. ಈ ವಿದ್ಯಾರ್ಥಿ ಈಗ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಹಾಸ್ಪಿಟ್ಯಾಲಿಟಿ ಮತ್ತು ಟೂರಿಸಂ ಮ್ಯಾನೇಜಮೆಂಟ್ ಕೋರ್ಸ್ ಓದುತ್ತಿದ್ದಾರೆ. ಇವರು ಪರಿಸರ ಮತ್ತು ಪ್ರಾಣಿಗಳ ಸಂರಕ್ಷಣೆಗಾಗಿ ಆರಂಭಿಸಿರುವ Society for Protecting Planet and Animals(SPPA) ಸಂಘಟನೆ ಈಗಾಗಲೇ ತನ್ನ ಪರಿಸರ ಮತ್ತು ಪ್ರಾಣಿಪರ ಸೇವೆಯ ಮೂಲಕ ಗಮನ ಸೆಳೆದಿದೆ.
ಈ ಸಂಘಟನೆ ಮತ್ತು ಧ್ರುವ ಪಾಟೀಲ ಅವರ ಕುರಿತು ತಮ್ಮ ಇನಸ್ಥಾಗ್ರಾಂ ನಲ್ಲಿ ಸೋನು ಸೂದ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಾವೂ ಕೂಡ SPPA ಕೈಗೊಂಡಿರುವ ಅಭಿಯಾನವನ್ನು ಬೆಂಬಲಿಸುತ್ತಿದ್ದು, ಎಲ್ಲರೂ ಇಂಥ ಪರಿಸರ ಪ್ರೇಮಿ ಸಂಘಟನೆಯ ಅಭಿಯಾನದಲ್ಲಿ ಪಾಲ್ಗೋಳ್ಳಬೇಕು ಎಂದು ಕರೆ ನೀಡಿದ್ದಾರೆ.
https://www.instagram.com/p/CSmWPJdK17M/?utm_medium=copy_link
ಧ್ರುವ ಪಾಟೀಲ ಕೇವಲ 8 ವರ್ಷದ ಬಾಲಕರಾಗಿದ್ದಾಗ ಈ ಸಂಘಟನೆ ಆರಂಭಿಸಿದ್ದು ಅವರ ಪರಿಸರ ಮತ್ತು ಪ್ರಾಣಿ ಪ್ರೀತಿಗೆ ಸಾಕ್ಷಿಯಾಗಿದೆ. ಈಗಾಗಲೇ ಈ ಸಂಘಟನೆ 50 ಸಾವಿರ ಪ್ರಾಣಿಗಳಿಗೆ ನೆರವಾಗಿದ್ದು, ಒಂದು ಕೋಟಿ ಗಿಡಗಳನ್ನು ಬೆಳೆಸಿದೆ. 2022 ರಿಂದ SPPA ಅಭಿಯಾನ ಆರಂಭಿಸುತ್ತಿದ್ದು ಎಲ್ಲರೂ ಈ ಅಭಿಯಾನ ಬೆಂಬಲಿಸಿ ಭೂಮಿಯನ್ನು ಸಂರಕ್ಷಿಸೋಣ ಎಂದು ಮನವಿ ಮಾಡಿದ್ದಾರೆ.
ಸೋನು ಸೂದ ಮೆಚ್ಚುಗೆಗೆ ದ್ರುವ ಪಾಟೀಲ ಸಂತಸ
ಈ ಮಧ್ಯೆ, ವನ್ಯಜೀವಿ ಛಾಯಾಗ್ರಾಹಕರೂ ಆಗಿರುವ ಧ್ರುವ ಪಾಟೀಲ ಖ್ಯಾತ ನಟ ಸೋನು ಸೂದ ತಮ್ಮ ಹಾಗೂ ತಾವು ಸ್ಥಾಪಿಸಿರುವ ಸಂಘಟನೆಯ ಬಗ್ಗೆ ತೋರಿರುವ ಶ್ಲಾಘನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ತಾವು ಪರಿಸರ ಸಂರಕ್ಷಣೆಯಲ್ಲಿ ಮತ್ತಷ್ಟು ಹೆಚ್ಚಿನ ಕೆಲಸ ಮಾಡಲು ಪ್ರೋತ್ಸಾಹ ಸಿಕ್ಕಂತಾಗಿದೆ ಎಂದು ಬಸವ ನಾಡಿಗೆ ತಿಳಿಸಿದ್ದಾರೆ.
ಈ ನಡುವೆ ಖ್ಯಾತ ನಟ ಸೋನು ಸೂದ್ ಈ ಕುರಿತು ಇನಸ್ಥಾಗ್ರಾಂ ಮಾಡಿರುವ ಪೋಸ್ಟ್ ಗೆ ಕೇವಲ 40 ನಿಮಿಷದಲ್ಲಿ 123000ಕ್ಕೂ ಹೆಚ್ಚು ಜನರ ಮೆಚ್ಚುಗೆ 600ಕ್ಕೂ ಹೆಚ್ಚು ಜನರಿಂದ ಪ್ರಶಂಸೆ ವ್ಯಕ್ತವಾಗಿರುವುದು ಧ್ರುವ ಪಾಟೀಲ ಅವರ ಉತ್ಸಾಹವನ್ನು ನೂರ್ಮಡಿಯಾಗುವಂತೆ ಮಾಡಿದೆ.
ತಂದೆ ರಾಜಕೀಯದಲ್ಲಿದ್ದರೂ ತಮ್ಮಲ್ಲಿರುವ ಪರಿಸರ ಪ್ರೀತಿ ಮತ್ತು ಪ್ರತಿಭೆಯಿಂದಾಗಿ ಧ್ರುವ ಪಾಟೀಲ ಈಗ ಸ್ಟಾರ್ ಆಗಿ ಹೊರಹೊಮ್ಮುತ್ತಿರುವುದು ಬಸವ ನಾಡಿನ ಜನರಿಗೂ ಸಂತಸ ತಂದಿದೆ.