ಬಸವ ನಾಡಿನಲ್ಲಿದೆ ಸ್ವಾತಂತ್ರ್ಯ ಸಂಗ್ರಾಮದ ಕುರುಹು- ದೇಶಕ್ಕಾಗಿ ಹುತಾತ್ಮರಾದ ದೇಶಮುಖ ಕುಟುಂಬದ ಇತಿಹಾಸ ಹೇಳುತ್ತಿರುವ ಈ ಕೋಟೆ ಎಲ್ಲಿದೆ ಗೊತ್ತಾ?

ವಿಜಯಪುರ: ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಸ್ಧಳ ಶಸ್ತ್ರಾಸ್ತ್ರಗಳ ಸಂಗ್ರಹಗಾರವಾಗಿತ್ತು. ಆದಿಲ್ ಶಾಹಿಗಳ ಕಾಲದಿಂದಲೂ ಸೇನಾ ಕೇಂದ್ರವಾಗಿದ್ದ ಈ ಗ್ರಾಮದ ಮುಖಂಡರು ತಮ್ಮ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ತಿಳಿದಿದ್ದೇ ತಡ. ಬ್ರಿಟೀಷರು ದಾಳಿ ನಡೆಸಿ ಅವರನ್ನು ಗಲ್ಲಿಗೇರಿಸುವ ಮೂಲಕ ಸೇಡು ತೀರಿಸಿಕೊಂಡರು. ಅಲ್ಲದೇ, ಅವರ ಸಾಕ್ಷ್ಯಗಳನ್ನೂ ನಾಶ ಮಾಡಿದರು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉತ್ತರ ಕರ್ನಾಟಕದಲ್ಲಿ ಹುತಾತ್ಮರಾದ ಮೊದಲಿಗರಲ್ಲಿ ಈ ಕುಟುಂಬದವರೂ ಸೇರಿರುವುದು ವಿಶೇಷ.

ಐತಿಹಾಸಿಕ ಸ್ಮಾರಕಗಳಿಗೆ ಹೆಸರಾಗಿರುವ ಈ ಜಿಲ್ಲೆ ಇತಿಹಾಸದಲ್ಲಿಯೂ ನಾನಾ ಯುದ್ಧಗಳಿಗೂ ಖ್ಯಾತಿ ಪಡೆದಿದೆ. ಅಂದಿನ ಕಾಲದಲ್ಲಿ ಆದಿಲ್ ಶಾಹಿ ಬಾದಷಹರ ಆಳ್ವಿಕೆಗೆ ಒಳಪಟ್ಟಿದ್ದ ಈ ಜಿಲ್ಲೆ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿಯೂ ಮಹತ್ವದ ಕಾಣಿಕೆ ನೀಡಿದೆ. ಇಲ್ಲಿನ ದೇಶಮುಖರೊಬ್ಬರು ಅಂದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಉತ್ತರ ಕರ್ನಾಟಕದ ಹುತಾತ್ಮರಲ್ಲಿ ಪ್ರಮುಖರು.

ವಿಜಯಪುರ ನಗರದಲ್ಲಿರುವ ಹುತಾತ್ಮರ ವೃತ್ತ ಅಂದರೆ ಬಹುತೇಕರಿಗೆ ಗೊತ್ತಾಗುವುದಿಲ್ಲ. ಮೀನಾಕ್ಷಿ ಚೌಕ್ ಎಂದರೆ ಸಾಕು ಬಹುತೇಕರಿಗೆ ಅರ್ಥವಾಗುತ್ತದೆ. ಈ ವೃತ್ತದಲ್ಲಿ ನಿಲ್ಲಿಸಲಾಗಿರುವ ಸ್ಮಾರಕದಲ್ಲಿರುವ ಹೆಸರುಗಳನ್ನು ಯಾರವು ಎಂಬುದನ್ನು ತಿಳಿಯಬೇಕಾದರೆ ಅದರ ಸುತ್ತ ಇತಿಹಾಸ ತೆರೆದೆಕೊಳ್ಳುತ್ತದೆ. ಈ ಸ್ಮಾರಕದಲ್ಲಿರುವ ಬಸಲಿಂಗಪ್ಪ ಮತ್ತು ವೀರಸಂಗಪ್ಪ ದೇಶಮುಖ ದೇಶಕ್ಕಾಗಿ ಪ್ರಾಣ ತೆತ್ತವರಲ್ಲಿ ಪ್ರಮುಖರು.

ಇವರು ವಾಸವಿದ್ದದ್ದು ಬಸವನಾಡು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೊಟ್ನಾಳ ಗ್ರಾಮದಲ್ಲಿ. ಆ ಗ್ರಾಮ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಜಾಹಗೀರವಾಗಿತ್ತು. ಇಲ್ಲಿರುವ ಕೋಟೆಯನ್ನು ನೋಡಿದರೆ ಅಂದಿನ ಕಾಲದ ಗತವೈಭವವನ್ನು ನೆನಪಿಸುತ್ತದೆ. ಅಂದು ಶಸ್ತ್ರಾಸ್ತ್ರ ಸಂಗ್ರಹ ಕೇಂದ್ರವಾಗಿದ್ದ ಈ ಕೋಟೆಯೊಳಗೆ ಇದೇ ದೇಶಮುಖ ಕುಟುಂಬಸ್ಥರು ವಾಸವಿದ್ದರು. ಈಗಲೂ ಈ ಕೋಟೆ ಗತಕಾಲದ ವೈಭವವನ್ನು ಸಾರುತ್ತಿದೆ.

 

ಇವರು ವಾಸಿಸುವ ವಾಡೆಗೆ ಸುತ್ತಮುತ್ತ ಕೋಟೆಯನ್ನು ನಿರ್ಮಿಸಲಾಗಿದ್ದು, ಅದರೊಳಗೆ ಒಂದು ತೆರೆದ ಭಾವಿಯಿದೆ. ಈ ಕುಟುಂಬಕ್ಕೆ ಬೇಕಾದ ಕೃಷಿ ಭೂಮಿ ಕೂಡ ಈ ವಾಡೆಯಲ್ಲಿರುವುದು ಗಮನಾರ್ಹ. ಪೂಜಿಲು ಕೋಟೆಶ್ವರ ದೇವಸ್ಥಾನ ಸೇರಿ ಒಟ್ಟು ನಾಲ್ಕು ಎಕರೆ ಪ್ರದೇಶದಲ್ಲಿ ಪ್ರತ್ಯೇಕವಾದ ಕೋಟೆ ಗೋಡೆಯನ್ನು ಇಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಐದು ನಗಾರಿ ಅಂದರೆ ಕಾವಲು ಗೋಪುರಗಳಿದ್ದು, ನಾಲ್ಕು ಕಂದಕಗಳು ಮತ್ತು ಎರಡು ಅಗನೆಗಳಿವೆ.

ಈ ಕೋಟೆಯನ್ನು ಭೇದಿಸಬೇಕೆಂದರೆ ಅತ್ಯಾಧುನಿಕ ಯುದ್ಧೋಪಕರಣಗಳ ಅವಷ್ಯಕತೆಯಿತ್ತು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ವೀರಸಂಗಪ್ಪ ಮತ್ತು ಬಸಲಿಂಗಪ್ಪ ಅಂದಿನ ಸುರಪುರ ಸಂಸ್ಥಾನದ ರಾಜಾ ವೆಂಕಟಪ್ಪ ನಾಯಕ ಅವರ ಕರೆಗೆ ಓಗೊಟ್ಟು ಬ್ರಿಟೀಷರ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದರು. ಇದನ್ನು ಅರಿತ ಬ್ರಿಟೀಷರು ಕೋಟೆಯ ಮೇಲೆ ಧಾಳಿ ನಡೆಸಿ ತಂದೆ ಮಕ್ಕಳಿಬ್ಬರನ್ನೂ ಬಂಧಿಸಿ ಗಲ್ಲಿಗೇರಿಸಿದರು.

ಆದಿಲ್ ಶಾಹಿಗಳ ಕಾಲದಿಂದ ಬ್ರಿಟೀಷರ ಕಾಲದವರೆಗೂ ಮದ್ದುಗುಂಡುಗಳ ಸಂಗ್ರಹಗಾರವಾಗಿದ್ದ ಈ ವಾಡೆಯಲ್ಲಿ ಇಂದಿಗೂ ದೇಶಮುಖ ವಂಶದ ಕುಡಿ ಬಸವರಾಜ ಅಪ್ಪಾಸಾಹೇಬ ದೇಶಮುಖ ಅವರು ಪಾಳುಬಿದ್ದಿರುವ ಈ ಕೋಟೆ ಮತ್ತು ವಾಡೆಯಲ್ಲಿಯೇ ಇರುವ ಎರಡು ಕೋಣೆಗಳನ್ನೇ ದುರಸ್ಥಿ ಮಾಡಿಕೊಂಡು ತಮ್ಮ ಪತ್ನಿ ಮತ್ತು ಪುತ್ರನೊಂದಿಗೆ ವಾಸಿಸುತ್ತಿದ್ದಾರೆ.

ಇಲ್ಲಿರುವ ರಹಸ್ಯ ಕೋಣೆಗಳು ಇಂದಿಗೂ ಗತಕಾಲದ ಸೇನಾ ಚಟುವಟಿಕೆಗಳ ಇತಿಹಾಸ ಬಿಚ್ಚಿಡುತ್ತವೆ. ಅವುಗಳೊಳಗೆ ಪ್ರವೇಶ ಮಾಡುವುದೆಂದರೆ ಹರಸಾಹಸವನ್ನೇ ಮಾಡಬೇಕಿದೆ. ಬ್ರಿಟೀಷರ ವಿರುದ್ಧ ಹೋರಾಟ ನಡೆಸಿ ಉತ್ತರ ಕರ್ನಾಟಕದಲ್ಲಿ ಹುತಾತ್ಮರಾದವರಲ್ಲಿ ಪ್ರುಮಖರಾಗಿರುವ ವೀರಸಂಗಪ್ಪ ಮತ್ತು ಬಸಲಿಂಗಪ್ಪ ದೇಶಮುಖ ಅವರಿಗೆ ಸೇರಿದ ದಾಖಲೆಗಳನ್ನು ಬ್ರಿಟೀಷರು ಅಂದೇ ನಾಶಪಡಿಸಿದ್ದಾರೆ.

ಅಂದಿನ ಸ್ವಾತಂತ್ರ್ಯ ಹೋರಾಟದ ಪ್ರತೀಕವಾಗಿರುವ ಈ ಕೋಟೆ ಗೋಡೆ ಮಾತ್ರ ಇಂದಿಗೂ ಪಾಳು ಬಿದ್ದಿದೆ. ಸರಕಾರಗಳು ಇದನ್ನು ದೇಶಮುಖ ಕುಟುಂಬಸ್ಥರಲ್ಲಿ ಅಸಮಾಧಾನ ಮೂಡಿಸಿದೆ ಎನ್ನುತ್ತಾರೆ ಬಸವರಾಜ ಅಪ್ಪಾಸಾಹೇಬ ದೇಶಮುಖ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವಿರಾರು ಜನ ಹೋರಾಟ ನಡೆಸಿ ಪ್ರಾಣ ತೆತ್ತರೂ ಕೊಟ್ನಾಳದ ಈ ದೇಶಮುಖರ ಇತಿಹಾಸ ಮಾತ್ರ ಎಲೆಮರೆಯ ಕಾಯಿಯಂತೆಯೇ ಇದೆ.

ವಿಜಯಪುರ ನಗರದ ಮಧ್ಯಭಾಗದಲ್ಲಿರುವ ಹುತಾತ್ಮರ ಸ್ಮಾರಕದಲ್ಲಿ ಇವರ ಹೆಸರಿದೆ. ಆದರೆ, ಅದು ಮೀನಾಕ್ಷಿ ಚೌಕ್ ಎಂದೇ ಪ್ರಚಲಿತದಲ್ಲಿದೆ. ಮಾತ್ರವಲ್ಲ ಆರೊಬ್ಬರು ಇವರ ಹೆಸರನ್ನು ಅಜರಾಮರವಾಗಿಸಲು ಪ್ರಯತ್ನಿಸದಿರುವುದು ವಿಪರ್ಯಾಸವಾಗಿದೆ ಎನ್ನುತ್ತಾರೆ ದೇಶಮುಖ ಕುಟುಂಬದ ಸ್ನೇಹಿತರಲ್ಲೊಬ್ಬರಾದ ಮುನ್ನೇಸಾ ಲಾಲಸಾ ಮನಗೂಳಿ.

One Response

Leave a Reply

ಹೊಸ ಪೋಸ್ಟ್‌