ವಿಜಯಪುರ: ಪಂಚಮಿ ಬಂತೆಂದರೆ ಸಾಕು ಉತ್ತರ ಕರ್ನಾಟಕ ಅದರಲ್ಲೂ ಬಸವ ನಾಡು ವಿಜಯಪುರ ಜಿಲ್ಲೆಯ ಅನ್ನದಾತರಿಗೆ ತಮ್ಮ ಹಾಗೂ ತಮ್ಮ ಜೀವನದ ಅವಿಭಾಜ್ಯ ಅಂಗದಂತಿರುವ ಎತ್ತುಗಳ ಸಾಧನೆ ಮಾಡಲು ಸಕಾಲ ಎಂಬುದು ಬಲವಾದ ನಂಬಿಕೆ.
ಈ ಸಮಯದಲ್ಲಿ ಎತ್ತುಗಳ ಮೂಲಕ ಗ್ರಾಮೀಣ ಭಾಗದಲ್ಲಿ ರೈತರು ತರಹೇವಾರು ಸಾಧನೆ ಮಾಡುವ ಮೂಲಕ ತಮ್ಮ ಹಾಗೂ ತಮ್ಮ ಸಾಕು ಪ್ರಾಣಿಗಳ ಸಾಮರ್ಥ್ಯ ಪ್ರದರ್ಶನಕ್ಕೆ ಮುಂದಾಗುತ್ತಾರೆ. ದಿನವಿಡೀ ಶ್ರಮ ಪಡುವ ಮೂಲಕ ಸಾಧನೆಗೈಯ್ತುತಾರೆ.
ಇಂಥದ್ದೆ ಒಂದುು ಕಾಧನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಯಂಬತ್ನಾಳದ ರೈತ ಮತ್ತು ಆತನ ಜೋಡೆತ್ತುಗಳು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅದೂ ಕೂಡ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ಕಾರ್ಯ ಎಂಬುದೂ ಗಮನಾರ್ಹವಾಗಿದೆ.
ಯಂಬತ್ನಾಳ ಗ್ರಾಮದ ರೈತ ಅಮೋಘಿ ಮಲ್ಲಪ್ಪ ವಾಲಿಕಾರ ನಾಗರ ಪಂಚಮಿ ಮತ್ತು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರೈತ ಸತತ 11 ಗಂಟೆಗಳ ಕಾಲ ತೊಗರಿ ಹೊಲದಲ್ಲಿ ಹರಗುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ ಈ ರೈತ ಮತ್ತು ಆತನ ಜೋಡೆತ್ತುಗಳು ಬರೊಬ್ಬರಿ 44 ಎಕರೆ ತೊಗರಿ ಹೊಲವನ್ನು ಹರಗುವ ಅಂದರೆ ಮಣ್ಣನ್ನು ಹದವಾಗಿಸುವ ಮೂಲಕ ಗಮನ ಬಪ್ಪರೆ ಭಲೇ ಎನ್ನುವ ಸಾಧನೆ ಮಾಡಿದ್ದಾರೆ.
ಸತತವಾಗಿ ನಡೆದ ಈ ಕಾರ್ಯದಲ್ಲಿ ಈ ರೈತ ತನಗೆ ಸೇರಿದ 40 ಎಕರೆಯಲ್ಲಿ ಮೊದಲು ಹರಗಿದ್ದಾನೆ. ನಂತರ ತನ್ನ ಹೊಲದಲ್ಲಿಯ ಕೆಲಸ ಮುಗಿದ ಮೇಲೆ ಮತ್ತೋಬ್ಬ ರೈತರ ಹೊಲಕ್ಕೆ ಹೋಗಿ ಅಲ್ಲಿಯೂ ನಾಲ್ಕು ಎಕರೆಯಲ್ಲಿ ಹರಗುವ ಮೂಲಕ ಈ ಭಾಗದಲ್ಲಿ ವಿನೂತನ ಸಾಧನೆ ಮಾಡಿದ್ದಾರೆ.
ಕೃಷಿಕ ಈ ಸಾಧನೆ ಮಾಡುತ್ತಿದ್ದಾನೆ ಎಂಬುದನ್ನು ಅರಿತ ಯಂಬತ್ನಾಳ ಪಕ್ಕದ ಹಡಗಲಿ ಸೇರಿದಂತೆ ನಾನಾ ಗ್ರಾಮಗಳಿಂದ ರೈತರು ತಂಡೋಪತಂಡಗಳಲ್ಲಿ ಆಗಮಿಸಿದ್ದಾರೆ. ಹಲಗೆ ಬಾರಿಸುತ್ತ ಈ ರೈತನ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಅಲ್ಲದೇ, ರೈತ ಮತ್ತು ಆತನ ಜೋಡೆತ್ತುಗಳ ಸಾಧನೆಗಳನ್ನು ಕಣ್ತುಂಬಿಕೊಂಡು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅಷ್ಟೇ ಅಲ್ಲ, ಯಂಬತ್ನಾಳ ಗ್ರಾಮದ ಜನರೂ ಕೂಡ ತಮ್ಮೂರಿನ ಹೆಮ್ಮೆಯ ರೈತ ಮತ್ತು ಆತನ ಎತ್ತುಗಳಿಗೆ ಗುಲಾಲು ಹಚ್ಚಿ ಸಂಭ್ರಮಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರೈತ ಅಮೋಘಿ ಮಲ್ಲಪ್ಪ ವಾಲಿಕಾರ, ಕಳೆದ ವರ್ಷ 16 ಎಕರೆ ಭೂಮಿಯನ್ನು ಹರಗಿದ್ದೆ. ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಸಾಧನೆ ಮಾಡಬೇಕು ಎಂಬ ಸದುದ್ದೇಶದಿಂದ ಪ್ರಯತ್ನ ಮಾಡಿದ್ದೇನೆ. ಆದರೆ, ತಾನು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಸಾಧನೆಯನ್ನು ತನ್ನ ಜೋಡೆತ್ತುಗಳು ಮಾಡಿವೆ. ಈ ಜೋಡೆತ್ತುಗಳಿಗೆ ಬೆಳಿಗ್ಗೆಯಿಂದ ಉತ್ತಮ ಆಹಾರ ಹಾಕಿರುವುದಾಗಿ ರೈತ ತಿಳಿಸಿದ್ದಾನೆ.
ಈ ರೈತ ಸಾಧನೆಯ ಬಗ್ಗೆ ಗ್ರಾಮದ ರೈತರಾದ ಅಶೋಕ ಚೆನ್ನಪ್ಪ ಹಂಡಿ ಮತ್ತು ಅಮರನಾಥ ನರಸಪ್ಪ ಕುಮಟಗಿ ಸಂತಸ ವ್ಯಕ್ತಪಡಿಸಿದ್ದು, ಈ ರೈತ ತಮ್ಮೂರಿಗೆ ಕೀರ್ತಿ ತಂದಿದ್ದಾನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.