ವಿಜಯಪುರ: ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ರಾಜ್ಯದ ನಾನಾ ಜಿಲ್ಲೆಗಳ ಮಹಾನಗರ ಪಾಲಿಕೆಗಳಿಗೆ ತಲಾ ರೂ. 125 ಕೋ. ದೊರಕಿಸಲು ಶ್ರಮಿಸಿರುವುದಾಗಿ ವಿಜಯಪುರ ನಗರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಪಾಟೀಲ ಯತ್ನಾಳ ತಿಳಿಸಿದ್ದಾರೆ.
ವಿಜಯಪುರ ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು ರೂ. 5.25 ಕೋ. ವೆಚ್ಚದಲ್ಲಿ ಸಂಚಾರಿ ವ್ಯವಸ್ಥೆ ಸುಧಾರಣೆಗೆ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಾಂಧಿ ವೃತ್ತದಲ್ಲಿನ ಗಾಂಧಿ ಪೊಲೀಸ್ ಠಾಣೆ ಆವರಣದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಗಾಂಧಿಚೌಕ್ ಆವರಣದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿರುವ ಈ ಕಾಮಗಾರಿಗೆ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯತ್ನಾಳ, ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯ ಈ ಅನುದಾನ ಸರಕಾರಕ್ಕೆ ಮರಳಿ ಹೋಗಿತ್ತು. ತಮ್ಮ ಸತತ ಪ್ರಯತ್ನದ ಫಲವಾಗಿ ವಿಜಯಪುರ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಗೂ ತಲಾ ರೂ. 125 ಕೋ. ರೂಪಾಯಿ ದೊರಕಿಸುವ ತಮ್ಮ ಪ್ರಯತ್ನದ ಫಲವಾಗಿದೆ ಎಂದು ಅವರು ಹೇಳಿದರು.
ಈ ಯೋಜನೆಯಡಿ ವಿಜಯಪುರ ನಗರದ 22 ಸ್ಥಳಗಳಲ್ಲಿ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಿಂದ ಕಾನೂನು ಉಲ್ಲಂಘನೆ ಪ್ರಕರಣಗಳು ನಿಯಂತ್ರಣವಾಗುವ ಜೊತೆಗೆ ಅಪರಾಧ ಪ್ರಮಾಣವನ್ನು ತಗ್ಗಿಸಬಹುದಾಗಿದೆ. ಅಲ್ಲದೇ, ಪೊಲೀಸ್ ಸಿಬ್ಬಂದಿಗಳ ಮೇಲಿನ ಒತ್ತಡ ಕಡಿಮೆಯಾಗಿ ಸಾರ್ವಜನಿಕರ ಭದ್ರತೆಗೂ ಸಹಕಾರಿಯಾಗಲಿದೆ ಎಂದು ಯತ್ನಾಳ ತಿಳಿಸಿದರು.
ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯು 2019-20 ರಿಂದ 2022-23ನೇ ವರ್ಷದ ವರೆಗೆ ನಾಲ್ಕು ವರ್ಷದ ಯೋಜನೆಯಾಗಿದೆ. ಈ ಯೋಜನೆಯಲ್ಲಿ ರೂ. 125 ಕೋ.ಿ ವಿಜಯಪುರ ಮಹಾನಗರ ಪಾಲಿಕೆಗೆ ಹಂಚಿಕೆಯಾಗಿದೆ. ಇದರಲ್ಲಿ ರೂ. 105 ಕೋ. ಹಣಕ್ಕೆ ಸರಕಾರದಿಂದ ಕ್ರಿಯಾ ಯೋಜನೆ ಅನುಮೋದನೆಯಾಗಿದೆ. ಇದರಲ್ಲಿ ಮಹಾನಗರ ಪಾಲಿಕೆಯು ನಾನಾ ಯೋಜನೆಗಳಿಗೆ ರೂ. 30 ಕೋ. ವಂತಿಗೆ ಪಾವತಿಸಬೇಕಾಗಿದೆ. ಪರಿಶಿಷ್ಠ ಜಾತಿ, ಗಿರಿಜನ ಉಪಯೋಜನೆಗಳಿಗೆ ಶೇ. 24.10 ಹಣವನ್ನು ಕಾಯ್ದಿರಿಸಲಾಗಿದ್ದು, ರೂ. 13.15 ಕೋ. ಯಲ್ಲಿ ಪೌರ ಕಾರ್ಮಿಕರ ಉಪಹಾರ ಭತ್ಯೆ, ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಗೆ ಹಾಗೂ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ಪರಿಶಿಷ್ಠ ಜಾತಿ, ಗಿರಿಜನ ಫಲಾನುಭವಿಗಳಿಗೆ ವಂತಿಗೆ ಹಣ ಭರಿಸಲು ಸಹಾಯ ಧನ ಮೀಸಲಿಡಲಾಗಿದೆ ಎಂದು ಯತ್ನಾಳ ತಿಳಿಸಿದರು.
ಅಲ್ಲದೇ, ಇತರೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ. 61.75 ಕೋ. ವೆಚ್ಚದ 11 ಪ್ಯಾಕೇಜ್ ಕಾಮಗಾರಿಗಳ ಕ್ರಿಯಾಯೋಜನೆ ಅನುಮೋದನೆ ಸಿಕ್ಕಿದೆ. ಇದರಲ್ಲಿ 9 ಪ್ಯಾಕೇಜ್‌ಗಳು ರಸ್ತೆ, ಒಳಚರಂಡಿ ವ್ಯವಸ್ಥೆ ಕಾಮಗಾರಿಗಳನ್ನು ಒಳಗೊಂಡಿದಿದ್ದರೆ, ಒಂದು ಪ್ಯಾಕೇಜ್ ತ್ಯಾಜ್ಯ ನೀರು ಸಂಸ್ಕರಣೆ ಘಟಕ (ಎಸ್ ಐ ಪಿ) ನಿರ್ಮಿಸುವುದು, ಮತ್ತು ಒಂದು ಪ್ಯಾಕೇಜ್ ಸಂಚಾರಿ ವ್ಯವಸ್ಥೆ ಸುಧಾರಣೆ ಕಾಮಗಾರಿಯನ್ನು ಒಳಗೊಂಡಿದೆ. ಒಟ್ಟು 11 ಪ್ಯಾಕೇಜ್‌ಗಳಲ್ಲಿ ಈಗಾಗಲೇ 9 ಪ್ಯಾಕೇಜ್‌ಗಳಿಗೆ ಟೆಂಡರ್ ಕರೆಯಲಾಗಿದೆ. ಈ 9 ಪ್ಯಾಕೇಜ್‌ಗಳಲ್ಲಿ 2 ಪ್ಯಾಕೇಜ್‌ಗಳ ಕಾಮಗಾರಿ ಪ್ರಗತಿಯಲ್ಲಿವೆ. ಒಂದು ಪ್ಯಾಕೇಜ್ ಕಾಮಗಾರಿಗೆ ಆದೇಶ ನೀಡಲಾಗಿದೆ. ಉಳಿದ 6 ಪ್ಯಾಕೇಜ್ ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ಇವುಗಳಿಗೆ ಕೂಡಲೇ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಅವರು ತಿಳಿಸಿದರು.
ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಿ ವಿಜಯಪುರ ನಗರದಲ್ಲಿನ ಹಲವು ರಸ್ತೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಅವಶ್ಯವಿರುವ ಎಲ್ಲ ಮುಖ್ಯ ಹಾಗೂ ಆಂತರಿಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ನಾನಾ ಯೋಜನೆಯಲ್ಲಿ ಸೇರಿಸಲಾಗುವುದು. ಈ ಸಂಚಾರಿ ವ್ಯವಸ್ಥೆ ಸುಧಾರಣೆ ಕಾಮಗಾರಿಯು ಒಟ್ಟು 22 ಸ್ಥಳಗಳಲ್ಲಿ ಹಾಗೂ ನಗರದ ಆಗಮನ ಮತ್ತು ನಿರ್ಗಮನಗಳಲ್ಲಿ ಸಿಸಿಟಿವಿ. ಕ್ಯಾಮೆರಾಗಳನ್ನು ಅಳವಡಿಕೆಯನ್ನು ಒಳಗೊಂಡಿದೆ. ಸಂಚಾರಿ ವ್ಯವಸ್ಥೆ ಸುಧಾರಣೆ ಕಾಮಗಾರಿಯಿಂದ ವಿಜಯಪುರ ನಗರದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುತ್ತದೆ. ಈ ಕಾಮಗಾರಿಯಲ್ಲಿ 3 ಬಗೆಯ ಕ್ಯಾಮೆರಾಗಳನ್ನು ಬಳಸಲಾಗುವುದು, ಅದರಲ್ಲಿ PTZ ಕ್ಯಾಮೆರಾ 360 ಡಿಗ್ರಿಯಲ್ಲಿ ಚಿತ್ರಣಗಳನ್ನು ಸೆರೆ ಹಿಡಿಯಬಲ್ಲದು. ANPR ಕ್ಯಾಮೆರಾ ವಾಹನದ ನಂಬರ್ ಗಳನ್ನು ಸೆರೆ ಹಿಡಿಯಬಲ್ಲದು ಇದರಿಂದ ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಗುರುತಿಸಿ ದಂಡ ಮತ್ತು ಶಿಕ್ಷೆ ವಿಧಿಸಲು ಸಹಾಯವಾಗುತ್ತದೆ. Bullet Camera ಕ್ಯಾಮೆರಾಗಳು ಅಳವಡಿಸಿದ ದಿಕ್ಕಿನಲ್ಲಿ ಸ್ಪಷ್ಟವಾದ ಚಿತ್ರಣಗಳನ್ನು ನೀಡುವುದರಿಂದ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷಿಸಲು ಸಹಾಯಕವಾಗುತ್ತದೆ ಎಂದು ಅವರು ತಿಳಿಸಿದರು.
ಈ ಕ್ಯಾಮರಾಗಳ ಚಿತ್ರಣಗಳನ್ನು ವೈಯರಲೆಸ್ ತಂತ್ರಜ್ಞಾನದ ಮೂಲಕ ವಿಜಯಪುರ ನಗರದ ಗಾಂಧಿಚೌಕ್ ಸರ್ಕಲ್ ಪೊಲೀಸ್ ಠಾಣೆಯ 3ನೇ ಮಹಡಿಯಲ್ಲಿ ನಿರ್ಮಿಸಲಾಗುವ ಕಂಟ್ರೋಲ್ ರೂಮ್‌ನಲ್ಲಿರುವ ವಿಡಿಯೋ ಕಾಲ್ ಮೂಲಕ ಮೂಲಕ ವೀಕ್ಷಿಸಬಹುದಾಗಿದೆ. ಈ ಕಾಮಗಾರಿಯ ಬಿಲ್ ಮೊತ್ತವನ್ನು ಸಾಮಗ್ರಿಗಳನ್ನು ಪೂರೈಸಿದ ನಂತರ 3ನೇ ವ್ಯಕ್ತಿ ತಪಾಸಣೆ ವರದಿ ಆಧರಿಸಿ ಪಾವತಿಸಲಾಗುವುದು ಎಂದು ಯತ್ನಾಳ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಎಸ್ಪಿ ಎಚ್. ಡಿ. ಆನಂದ ಕುಮಾರ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಮಹಾನಗರ ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕಿ, ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೋಳಸಂಗಿ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.