ಕೋಲಾರ: ಒಂದೇ ನಂಬರ್ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದ ನಾಲ್ಕು ಬಸ್ಸುಗಳನ್ನು ಕೋಲಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮುಳಬಾಗಿಲು ಮತ್ತು ಬೇತಮಂಗಲದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸಾರಿಗೆ ಇಲಾಖೆ ಅಧಿಕಾರಿಗಳಿ ಒಂದೇ ನಂಬರ್ ಬಳಸಿಕೊಂಡು ತೆರಿಗೆ ವಂಚಿಸಿ ಸಂಚರಿಸುತ್ತಿದ್ದ ನಾಲ್ಕು ಬಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರ್ ಟಿ ಓ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್, ಜಂಟಿ ಆಯುಕ್ತೆ ಓಂಕಾರೇಶ್ವರಿ ನೇತೃತ್ವದಲ್ಲಿ ಕೋಲಾರ ಪ್ರಾದೇಶಿಕ ಸಾರಿಗೆ ಕಚೇರಿಯ ಮೋಟಾರು ವಾಹನ ನಿರೀಕ್ಷಕರಾದ ತಿಪ್ಪೇಸ್ವಾಮಿ ಸಿ, ಸುರೇಶ ಜಿ. ಎನ್, ಸುಧೀರ್ ಬಾಬು ಟಿ ಅವರನ್ನು ಒಳಗೊಂಡ ತಂಡ ಸುಮಾರು ರೂ. 10 ಲಕ್ಷ ತೆರಿಗೆ ವಂಚಿಸಿದ್ದ ಬಸ್ಸುಗಳನ್ನು ವಶಪಡಿಸಿಕೊಂಡಿದ್ದಾರೆ.
KA -06/ 4815 ನಂಬರಿನ ಎರಡು ಬಸ್ಸುಗಳು, KL-05/ Q 2140 ನಂಬರಿನ ಎರಡು ಬಸ್ಸುಗಳು ರಾಜ್ಯಕ್ಕೆ ನೀಡಬೇಕಾದ ತೆರಿಗೆಯನ್ನು ನೀಡದೆ, ನಕಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಂಡು ಸಂಚರಿಸುತ್ತಿದ್ದವು.
ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಆರ್ ಟಿ ಓ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.