ವಿಜಯಪುರ: ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಸವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಯಲು ಕೆಟ್ಟ ಜಾತಿ ವ್ಯವಸ್ಥೆ ಕಾರಣವಾಗಿದೆ. ಆ ವ್ಯವಸ್ಥೆಯ ವಿರುದ್ಧ ಸ್ವಾಮೀಜಿಗಳು ಒಂದಾಗಿ ಒಗ್ಗಟ್ಟು ಪ್ರದರ್ಶಿಸಿದ ಪರಿಣಾಮ ಬಿಜೆಪಿ ಹೈಕಮಾಂಡ ತನ್ನ ನಿರ್ಣಯ ಬದಲಿಸಿತು. ಈ ಬಗ್ಗೆ ಹೆಮ್ಮೆಯಿದೆ ಎಂದು ಬಾಳೆಹೊಸೂರು ಶ್ರೀ ದಿಂಗಾಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಕುಂಟೋಜಿ ಸಂಸ್ಥಾನ ಹಿರೇಮಠದಲ್ಲಿ ಮಠದ ಮುಖ್ಯಸ್ಥ ಶ್ರೀ ಚನ್ನವೀರ ದೇವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕೊರೊನಾ ಆಪದ್ಭಾಂಧವರಿಗೆ ಪ್ರಶಸ್ತಿ ಪ್ರದಾನ, ಧರ್ಮ ಸಮನ್ವಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಡಿಯೂರಪ್ಪ ರಾಜ್ಯಾದ್ಯಂತ ಸಂಚರಿಸಿ ಬಿಜೆಪಿ ಕಟ್ಟಲು, ತಮ್ಮ ಆಯುಷ್ಯವನ್ನು ಸವೆಸಿದ್ದಾರೆ. ಇವರಿಗೆ ಅಧಿಕಾರ ನಡೆಸಲು ಕೆಲವರು ಅಡ್ಡಿ ಪಡಿಸಿದರು. ಬೇರೆ ಕೆಲಸದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋಗಿದ್ದ ತಮಗೆ ಈ ವಿಷಯ ಗೊತ್ತಾಗಿ ಅದರ ಹಿನ್ನೆಲೆ ಪರಿಶೀಲಿಸಿದಾಗ ಈ ವಿಚಾರ ಗೊತ್ತಾಯಿತು. ಇದರ ಹಿನ್ನೆಲೆ ಅವಲೋಕಿಸಿದಾಗ ಕೆಟ್ಟ ಜಾತಿ ವ್ಯವಸ್ಥೆ ತೊಂದರೆ ಕೊಡುತ್ತಿರುವುದು ತಿಳಿಯಿತು. ನಮ್ಮ ಈ ನಾಡು ಮತ್ತು ಸಂಸ್ಕೃತಿಯನ್ನು ಜಾತಿ ಎನ್ನುವ ಶತ್ರು ನಾಶ ಮಾಡಬಾರದು ಎಂಬ ಸದುದ್ದೇಶದಿಂದ ಸ್ವಾಮೀಜಿಗಳು ಯಡಿಯೂರಪ್ಪ ನಿಲ್ಲಬೇಕಾಯಿತು ಎಂದು ದಿಂಗಾಲೇಶ್ವರ ಶ್ರೀಗಳು ತಿಳಿಸಿದರು.
ನಮ್ಮ ಒಗ್ಗಟ್ಟಿನ ಪಲವಾಗಿ ಬಿಜೆಪಿ ಹೈಕಮಾಂಡ್ ಸೋತಿದೆ ಎಂದು ನಾವು ಹೇಳುವುದಿಲ್ಲ. ಆದರೆ, ಯಡಿಯೂರಪ್ಪ ಅವರಿಗೆ ಗೌರವ ಕೊಟ್ಟಿದೆ ಎಂಬ ಸಮಾಧಾನವಿದೆ. ಆದರೂ ಅವರಿಗೆ ಆಡಳಿತ ನಡೆಸಲು ಅವಕಾಶ ಕೊಡಲಿಲ್ಲ ಎನ್ನುವ ನೋವೂ ಇದೆ ಎಂದು ಶ್ರೀಗಳು ತಿಳಿಸಿದರು.
ಸ್ವಾಮೀಜಿಗಳಿಗೆ ರಾಜಕೀಯ ಉಸಾಬರಿ ಏಕೆ ಎಂದು ಅನೇಕರು ನಮ್ಮನ್ನು ಟೀಕಿಸಿದರು. ಸ್ವಾಮೀಜಿಗಳೆಂದರೆ ಕೇವಲ ಕಾವಿ ಹಾಕಿಕೊಂಡು ಊಟ ಮಾಡಿ ಮಠದಲ್ಲಿ ಮಲಗುವುದಲ್ಲ. ನಾಡಿನಲ್ಲಿ ನ್ಯಾಯ, ನೀತಿ, ಸಂಸ್ಕೃತಿಯ ಉಳಿವಿಗಾಗಿ, ಅನ್ಯಾಯ, ಅಸಂಸ್ಕೃತಿ, ದಾರಿದ್ರ್ಯ, ದುಷ್ಟ ಶಕ್ತಿ ವಿರುದ್ಧ ಹೋರಾಡವುದು ಅನ್ಯಾಯದ ವಿರುದ್ದ ಸೋಲನ್ನ ಒಪ್ಪಿಕೊಳ್ಳಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಅದನ್ನು ನಾವು ಮಾಡಿದ್ದೇವೆ ಎಂದು ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಕೊರೊನಾದಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡಿದ ಡಾ. ಮಹಮ್ಮದ ನಾಯ್ಕೋಡಿ, ಡಾ. ರಾಘವೇಂದ್ರ ಮುರಾಳ, ಸಿದ್ದಲಿಂಗ ದೇವರು, ಅಶೋಕ ನಾಡಗೌಡ ಇವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಎದ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ನಾಲತವಾಡದ ಸಂಜನಾ ಹಿರೇಮಠ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು, ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ಇಟಗಿ ಮೇಲಗದ್ದುಗೆ ಭೂ ಕೈಲಾಸ ಮಠದ ಗುರುಶಾಂತವೀರ ಶಿವಾಚಾರ್ಯರು ಸೇರಿ ಹಲವರು ಉಪಸ್ಥಿತರಿದ್ದರು.