ಇನ್ನು ಮುಂದೆ ಅನಾವಶ್ಯಕವಾಗಿ ಆಯುಧ ಲೈಸನ್ಸ್, ನವೀಕರಣಕ್ಕೆ ಕಡಿವಾಣ- ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ಅನಾವಶ್ಯಕವಾಗಿ ಗನ್ ಲೈಸನ್ಸ್ ಅಂದರೆ ಆಯುಧ ಅನುಮತಿ ಮಂಜೂರಾತಿ ಮತ್ತು ನವೀಕರಣ ಕುರಿತು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಸ್ಪಿ, ತಹಸೀಲ್ದಾರರು ಮತ್ತು ಪೊಲೀಸ್ ಇನ್ಸಪೆಕ್ಟರ್ ಗಳೊಂದಿಗೆ ಆಯುಧ ಲೈಸನ್ಸ್ ಮಂಜೂರಿಸುವ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ತೀರಾ ಅನಿವಾರ್ಯ ಪ್ರಕರಣಗಳಲ್ಲಿ ಮಾತ್ರ ಆಯುಧ ಲೈಸನ್ಸ್ ಮಂಜೂರಾತಿ ಮತ್ತು ಲೈಸನ್ಸ್ ನವೀಕರಣ ಮಾಡಲಾಗುವುದು ಎಂದು ತಿಳಿಸಿದರು.

ಹೊಸದಾಗಿ ಆಯುಧ ಲೈಸನ್ಸ್ ಮಂಜೂರಾತಿ, ಲೈಸನ್ಸ್ ನವೀಕರಣ, ಮರುನೋಂದಣಿ, ವರ್ಗಾವಣೆ ಹಾಗೂ ಮಾರಾಟ ಮತ್ತು ಹೆಚ್ಚುವರಿ ಆಯುಧ ಹೊಂದುವ ಕುರಿತಾದ ಪ್ರಕರಣಗಳನ್ನು ಪರಿಶೀಲಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಹುತೇಕ ಪ್ರಕರಣಗಳಲ್ಲಿ ಸಾರ್ವಜನಿಕರು ತಮಗೆ ತೀರ ಅವಶ್ಯಕತೆ ಇಲ್ಲದಿದ್ದರೂ, ಆತ್ಮರಕ್ಷಣೆ ಮತ್ತು ಬೆಳೆ ಸಂರಕ್ಷಣೆ ಹಾಗೂ ಇತರ ಕಾರಣಗಳನ್ನು ನೀಡಿ ಆಯುಧ ಲೈಸನ್ಸ್ ಪಡೆಯುತ್ತಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಇದರ ಅವಶ್ಯಕತೆ ಇಲ್ಲದಿರುವುದು ಮತ್ತು ಕೇವಲ ಘನತೆಗಾಗಿ ಹಾಗೂ ಸಾಮಾನ್ಯ ಜನರನ್ನು ಹೆದರಿಸುವ ಉದ್ದೇಶಕ್ಕಾಗಿ ಪರವಾನಿಗೆ ಪಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

ಘನತೆಗಾಗಿ ಅಥವಾ ಸಾರ್ವಜನಿಕ ಶಾಂತಿಭಂಗ ಉಂಟುಮಾಡುವ ದೃಷ್ಟಿಯಿಂದ ಆಯುಧ ಲೈಸನ್ಸ್ ಪಡೆಯುತ್ತಿರುವುದಕ್ಕೆ ಕಡಿವಾಣ ಹಾಕಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಈ ಸಂದರ್ಭದಲ್ಲಿ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಎಸ್ಪಿ ಆಯುಧ ಮಂಜೂರಾತಿಗಾಗಿ ಶಿಫಾರಸು ಮಾಡುವ ಪೂರ್ವದಲ್ಲಿ ಅರ್ಜಿದಾರರ ಪೂರ್ವ ಚರಿತ್ರೆ ಪರಿಶೀಲಿಸಿ, ತೀರ ಅವಶ್ಯವಿದ್ದರೆ ಸಂದರ್ಶನ ನಡೆಸಿ ಆಯುಧ ಪರವಾನಿಗೆಯ ಅವಶ್ಯಕತೆಯಿರುವ ವ್ಯಕ್ತಿಗೆ ಪರವಾನಿಗೆ ಹೊಂದಲು ಸೂಕ್ತ ಕಾರಣಗಳು ಇರುವುದನ್ನು ಮನಗಾಣಬೇಕು. ಅಲ್ಲದೇ, ಮಂಜೂರಾತಿಗಾಗಿ ಶಿಫಾರಸ್ಸು ಮಾಡಿದ ವರದಿ ಆಧರಿಸಿ ಜಿಲ್ಲಾಧಿಕಾರಿಗಳ ಸಂದರ್ಶನದ ಮೂಲಕ ಆಯುಧ ಲೈಸನ್ಸ್ ಅವಶ್ಯಕತೆ ಇರುವ ಬಗ್ಗೆ ಪ್ರಕರಣಗಳ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

 

Leave a Reply

ಹೊಸ ಪೋಸ್ಟ್‌