ಅಧಿಕಾರಿಗಳ ಉತ್ಸಾಹ, ಜನಪ್ರತಿನಿಧಿಗಳ ಸಹಕಾರ- ಗುಮ್ಮಟ ನಗರಿಯಲ್ಲಿರದ ಆ ಒಂದು ವ್ಯವಸ್ಥೆ ಲಿಂಬೆ ನಾಡಿಗೆ ಬಂತು

ವಿಜಯಪುರ: ಅಧಿಕಾರಿಗಳ ಉತ್ಸಾಹ, ಜನಪ್ರತಿನಿಧಿಗಳ ಸಹಕಾರವಿದ್ದರೆ ಜನರಿಗೆ ಹೇಗೆ ಉಪಕಾರವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಈ ವ್ಯವಸ್ಥೆ. ಇದು ಹಿಂದುಳಿದ ಜಿಲ್ಲೆಯ ಹಿಂದುಳಿದ ತಾಲೂಕು ಕೇಂದ್ರದಲ್ಲಿ ಜಾರಿಗೆ ತರಲಾಗಿರುವ ಮುಂದುವರೆದ ತಂತ್ರಜ್ಞಾನದ ಸದ್ಬಳಕೆಗೆ ತಾಜಾ ಉದಾಹರಣೆ ಎಂಬಂತಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಬಸವ ನಾಡು ವಿಜಯಪುರ ಜಿಲ್ಲೆಯ ಲಿಂಬೆ ನಾಡು ಇಂಡಿ ಪುರಸಭೆಯಲ್ಲಿ ಈಗ ಜನರಿಗೋಸ್ಕರ ಅನುಕೂಲವಾಗುವ ವ್ಯವಸ್ಥೆಯೊಂದನ್ನು ಜಾರಿಗೆ ತರಲಾಗಿದೆ.

ಇಂಡಿ‌ ಪುರಸಭೆಯಲ್ಲಿ ಕರ ಪಾವತಿಸುತ್ತಿರುವ ಸಾರ್ವಜನಿಕರು.

ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ತಮ್ಮ ತಾಲೂಕು ಜಿಲ್ಲಾ ಕೇಂದ್ರವಾಗುವ ನಿಟ್ಟಿನಲ್ಲಿ ಆಗಬೇಕಾಗಿರುವ ಕೆಲಸಗಳ ಕಡೆ ಗಮನ ಹರಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾರ್ಗದರ್ಶನದಲ್ಲಿ ಇಂಡಿ ಉಪವಿಭಾಗಾಧಿಕಾರಿ ರಾಹುಲ ಶಿಂಧೆ, ಇಂಡಿ ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ ಈ ಹೊಸ ವ್ಯವಸ್ಥೆ ಸಾಕಾರವಾಗಲು ಕಾರಣರಾಗಿದ್ದಾರೆ.

ಇಂಡಿ ಪುರಸಭೆಯಲ್ಲಿ ಈಗ ಸಾರ್ವಜನಿಕರು ಆನಲೈನ್ ಮೂಲಕ  ನೀರಿನ ಕರ ಮತ್ತು ಕೌಂಟರ್ ಮೂಲಕ ಮನೆ ಕರ, ಕಟ್ಟಡಗಳ ಪರವಾನಿಗೆ ಸೇರಿದಂತೆ ನಾನಾ ತೆರಿಗೆಗಳನ್ನು ಪಾವತಿಸಬಹುದಾಗಿದೆ. ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ಮತ್ತು ಖುದ್ದಾಗಿ ಪುರಸಭೆಗೆ ಬಂದು ಕೂಡ ನೀರಿನ ಕರ ಪಾವತಿಸಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಇಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್ ಕೌಂಟರ್ ತೆರೆದಿದೆ.

ಇಂಡಿ ಪುರಸಭೆಯಲ್ಲಿ ಲಭ್ಯವಿರುವ ಆನಲೈನ್ ಸೌಲಭ್ಯದ ಮಾಹಿತಿ ಪಲಕ.

ಈ ಮೂಲಕ ವಿಜಯಪುರ ಜಿಲ್ಲೆ ಇಂಡಿ ಪುರಸಭೆ ತೆರಿಗೆ ಪಾವತಿ ವ್ಯವಸ್ಥೆ ರಾಜ್ಯಾದ್ಯಂತ ಗಮನ ಸೆಳೆದಿದೆ. ಮೈಸೂರಿನ ಇನ್ನೊರಿಯಂ ಸಾಪ್ಟವೇರ್ ಈ ವ್ಯವಸ್ಥೆಗೆ ಕೈ ಜೋಡಿಸಿದೆ.

ವಿಜಯಪುರ ಜಲಮಂಡಳಿಯಲ್ಲಿರದ ವ್ಯವಸ್ಥೆ ಇಂಡಿ ಪುರಸಭೆಯಲ್ಲಿ ಲಭ್ಯ

ಇಲ್ಲಿ ಇನ್ನೋಂದು ಗಮನಾರ್ಹ ಅಂಶವೆಂದರೆ ವಿಜಯಪುರ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ್ದರೂ ಇಲ್ಲಿ ಜಲಮಂಡಳಿಯಲ್ಲಿ ಹಣ ಪಾವತಿಸಲು ಆನಲೈನ್ ವ್ಯವಸ್ಥೆ ಇನ್ನೂ ಮರಿಚಿಕೆಯಾಗಿದೆ.

ಆದರೆ, ಭೀಮಾ ತೀರದ ತಾಲೂಕಾದ ಇಂಡಿಯಲ್ಲಿ ಕುಡಿಯುವ ನೀರಿನ ಕರವನ್ನೂ ಕೂಡ ಆನಲೈನ್ ಮೂಲಕ ಪಾವತಿಸುವ ವ್ಯವಸ್ಥೆ ಮಾಡಿರುವುದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಂಘಟಿತ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.

Leave a Reply

ಹೊಸ ಪೋಸ್ಟ್‌