ವಿಜಯಪುರ: ಇದು ಕೊರೊನಾ ಸಂದರ್ಭದಲ್ಲಿ ಫಲಾಪೇಕ್ಷೆಯಿಲ್ಲದೇ ಜನಸೇವೆಗೆ ಪ್ರಾಧಾನ್ಯತೆ ನೀಡಿ ಸರಕಾರ ನಿಗದಿ ಪಡಿಸಿದ್ದಕ್ಕಿಂತ ಕಡಿಮೆ ಬೆಲೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ಕಾರ್ಯಕ್ಕೆ ಅಂಗವಿಕಲರ ಸಂಸ್ಥೆಯೊಂದು ನೀಡಿದ ಸ್ಪೂರ್ತಿಯ ಕೊಡುಗೆ.
ಫಲಾವೇಕ್ಷೆಯಿಲ್ಲದ ಕೆಲಸವನ್ನು ದೇವರು ಕೂಡ ಮೆಚ್ಚುತ್ತಾನೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕೊರೊನಾ ಸಂದರ್ಭದಲ್ಲಿ ವಿಜಯಪುರದ ಪ್ರತಿಷ್ಛಿತ ಬಿ ಎಲ್ ಡಿ ಇ ಆಸ್ಪತ್ರೆ ಸರಕಾರ ನಿಗದಿ ಪಡಿಸಿದ್ದಕ್ಕಿಂತ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ ನೀಡುವ ಮೂಲಕ ರಾಜ್ಯಾದ್ಯಂತ ಮನೆಮಾತಾಗಿದ್ದಷ್ಟೇ ಅಲ್ಲ, ದೇಶಾದ್ಯಂತ ಇತರ ಖಾಸಗಿ ಆಸ್ಪತ್ರೆಗಳಿಗೆ ಮಾದರಿಯಾಗಿತ್ತು. ಈಗ ಈ ಆಸ್ಪತ್ರೆ ಜನಪರ ಸೇವೆಯನ್ನು ಮನಗಂಡ ಸಮರ್ಥನಂ ಅಂಗವಿಕಲರ ಸಂಸ್ಥೆ ರೂ. 12 ಲಕ್ಷ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ನೀಡುವ ಮೂಲಕ ಗಮನ ಸೆಳೆದಿದೆ.
ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮರ್ಥನಂ ಅಂಕವಿಕಲರ ಸಂಸ್ಥೆ ಮ್ಯಾನೇಜಿಂಗ್ ಟ್ರಸ್ಟಿ ಮಹಾಂತೇಶ ಕಿವುಡಸಣ್ಣವರ ಖುದ್ದಾಗಿ ವಿಜಯಪುರಕ್ಕೆ ಆಗಮಿಸಿ ಗಣ್ಯರ ಸಮ್ಮುಖದಲ್ಲಿ ನಾನಾ ಸಲಕರಣೆಗಳನ್ನು ಹಸ್ತಾಂತರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಗದಗ-ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಈ ಸಲಕರಣೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ, ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಕೇವಲ ಭೌತಿಕವಾಗಿ ಸದೃಢರಾಗಿದ್ದರೆ ಮಾತ್ರ ಸಾಧನೆ ಮಾಡಬಹುದು ಎಂಬುದ ತಪ್ಪು ಕಲ್ಪನೆ. ಮಾನಸಿಕವಾಗಿ ದೃಢ ನಿಲುವು ಹೊಂದಿದರೆ ಏನು ಬೇಕಾದರೂ ಸಾಧಿಸಬಹುದು ಎಂದು ಎಂದು ಹೇಳಿದರು.
ಸಂಸ್ಕಾರಗಳು ಮನುಷ್ಯನನ್ನು ರೂಪಿಸುತ್ತವೆ. ದೃಢ ಸಂಕಲ್ಪದಿಂದ ಗುರಿ ಸಾಧನೆ ಸಾಧ್ಯ ಎಂಬುದನ್ನು ಸಮರ್ಥನಂ ಅಂಗವಿಕಲರ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಮಹಾಂತೇಶ ಜಿ. ಕಿವುಡಸಣ್ಣವರ ಮಾಡಿ ತೋರಿಸಿದ್ದಾರೆ. ಅಂಧರಾಗಿದ್ದರೂ ಇವರು ಮಾಡಿರುವ ಸಾಧನೆ ಇತರರ ಕಣ್ಣು ತೆರೆಸುವಂತಿದೆ. ಅಂಗವಿಕಲರಾದವರನ್ನು ಸ್ವಾವಲಂಬಿಯನ್ನಾಗಿ ಮಾಡಿ ತೆರಿಗೆದಾರರನ್ನಾಗಿ ರೂಪಿಸುವ ಅವರ ಕನಸು ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ತಿಳಿಸಿದರು.
ಮಕ್ಕಳಲ್ಲಿ ಪೋಷಕರು ಮತ್ತು ಶಿಷ್ಯರ ಸಾಧನೆಯಲ್ಲಿ ಗುರುಗಳು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳುತ್ತಾರೆ. ಮಹಾಂತೇಶ ಜಿ. ಕಿವುಡಸಣ್ಣವರ ತಮ್ಮ ಶಿಷ್ಯ ಎಂದು ಹೇಳಿಕೊಳ್ಳಲು ಎಲ್ಲಿಲ್ಲದ ಹೆಮ್ಮೆಯಿದೆ ಎಂದು ಅವರು ತಿಳಿಸಿದರು.
ಮಾಜಿ ಸಚಿವ ಎಂ. ಬಿ. ಪಾಟೀಲ ಅವರು ಓರ್ವ ದೂರದೃಷ್ಠಿ ಹೊಂದಿರುವ ಜನಾನುರಾಗಿ ಶಾಸಕರು. ಕೊರೊನಾ ಸಂಕಷ್ಟ ಸಮಯದಲ್ಲಿ ತಮ್ಮ ಆಸ್ಪತ್ರೆಯಲ್ಲಿ ಕಡಿಮೆ ದರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಪ್ರಶಂಸಿದರು.
ಸ್ವತಃ ದೃಷ್ಠಿ ಇಲ್ಲದಿದ್ದರೂ ತಮ್ಮ ಸಾಧನೆ ಮೂಲಕ ಗಮನ ಸೆಳೆದಿರುವ ಮಹಾಂತೇಶ ಸಣ್ಣಕಿವುಡಣ್ಮವರ ಮಾತನಾಡಿ, ಅಂಗವಿಕಲರೂ ಕೂಡ ಸ್ವಾವಲಂಬಿಯಾಗಲಿ. ಅವರೂ ಕೂಡ ದೇಶದ ಅಭಿವೃದ್ಧಿಗೆ ತೆರಿಗೆ ಕಟ್ಟುವಷ್ಟು ಸಮರ್ಥರಾಗಲಿ ಎಂಬ ಉದ್ದೇಶದಿಂದ ತಾವು ಸಮರ್ಥನಂ ಅಂಗವಿಕಲರ ಸಂಸ್ಥೆ ಆರಂಭಿಸಿದ್ದು, ಈಗಾಗಲೇ ಕಳೆದ 16 ತಿಂಗಳಲ್ಲಿ ರೂ. 45 ಕೋ. ಮೌಲ್ಯದ ನಾನಾ ವೈದ್ಯಕೀಯ ಪರಿಕರಣಗಳನ್ನು ರಾಜ್ಯದ ನಾನಾ ಆಸ್ಪತ್ರೆಗಳು ಮತ್ತು ಕೊರೊನಾ ವಾರಿಯರ್ಸ್ ಗಳಿಗೆ ನೀಡಲಾಗಿದೆ. ಅಲ್ಲದೇ, ಈಗ ಬಿ ಎಲ್ ಡಿ ಇ ಆಸ್ಪತ್ರೆಗೆ Amtec ಸಂಸ್ಥೆಯ ಸಹಯೋಗದಲ್ಲಿ ರೂ. 12 ಲಕ್ಷ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ನೀಡುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ ಎಲ್ ಡಿ ಆಸ್ಪತ್ರೆಯ ಪ್ರಾಂಶುಪಾಲ ಡಾ. ಅರವಿಂದ ಕುಲಕರ್ಣಿ, ಸ್ವತಃ ಅಂಧರಾಗಿದ್ದರೂ ಮಹಾಂತೇಶ ಕಿವುಡಸಣ್ಣವರ ಉಳಿದವರು ಕಣ್ಣು ತೆರೆಯುವ ಸಾಧನೆ ಮಾಡಿದ್ದಾರೆ. ಅವರ ಸಲಹೆ ಮತ್ತು ಸಹಕಾರದಿಂದ ಆಸ್ಪತ್ರೆಯಲ್ಲಿಯೂ ಅಂಗವಿಕಲರಿಗಾಗಿ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಬಿ ಎಲ್ ಡಿ ಈ ಆಸ್ಪತ್ರೆಯ ವೈದ್ಯಕೀಯ ಸುಪರಿಂಟೆಂಡೆಂಟ್ ಡಾ. ರಾಜೇಶ ಹೊನ್ನುಟಗಿ ಕೂಡ ಮಹಾಂತೇಶ ಸಣ್ಣಕಿವುಡಣ್ಣವರ ಅವರ ಸಾಧನೆ ಮತ್ತು ಕೊಡುಗೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸಮರ್ಥನಂ ಸಂಸ್ಥೆ ವತಿಯಿಂದ 8 ಐಸಿಯು ಬೆಡ್, 500 ಎನ್-95 ಮಾಸ್ಕ್, 5000 ತ್ರಿಪ್ಲೈ ಮಾಸ್ಕ್, 10 ಸಾವಿರ ಹ್ಯಾಂಡ್ ಗ್ಲೌಸ್, 40 ಪಲ್ಸ್ ಆಕ್ಸಿಮೀಟರ್, 10 ಸಾವಿರ ರೀಯೂಸೆಬಲ್ ಮಾಸ್ಕ್, 300 ಜನ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಮತ್ತು ಸುರಕ್ಷತೆ ಕಿಟ್ ಗಳನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀ ರಾಘವೇಂದ್ರ ವಿ. ಕುಲಕರ್ಣಿ ಅವರು ಸಂಸ್ಥೆಯ ಮಹಾಂತೇಶ ಕಿವುಡಸಣ್ಣವರ ಅವರಿಗೆ ಪ್ರಶಂಸಾಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ರಾಜೇಶ ಹೊನ್ನುಟಗಿ, ರಜಿಸ್ಟ್ರಾರ್ ಜೆ. ಜೆ. ಅಂಬೇಕರ, ಬಸವರಾಜ ಕಣ್ಣಿ, ಬಿರಾದಾರ, ಡಾ. ಸಂತೋಷ ಬಿ. ಡಾ. ಸಂತೋಷ ಬಿ. ಟಿ. ಅರುಣ, ಡಾ. ಸ್ನೇಹಾ ಮುಖರ್ಜಿ, ಡಾ. ವಿಕ್ಟೋರಿಯಾ, ಡಾ. ಏಕನಾಥ ಜಾಧವ, ಸಮಾಜ ಸೇವಕ ಸೋಮಯ್ಯ ಗಣಾಚಾರಿ ಮುಂತಾದವರು ಉಪಸ್ಥಿತರಿದ್ದರು.