ವಿಜಯಪುರ: ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ವಿಜಯಪುರ ಜಿಲ್ಲೆಗೆ ಬಂದ ಬಸವರಾಜ ಬೊಮ್ಮಾಯಿ ಎಸ್ಪಿ ವಿರುದ್ಧ ಗರಂ ಆದ ಘಟನೆ ನಡೆಯಿತು. ಅಲ್ಲದೇ, ಇದೇ ಸಂದರ್ಭದಲ್ಲಿ ಬೆಳಗಾವಿ ಉತ್ತರ ವಲಯ ಐಜಿಗೂ ಸಿಎಂ ಕಿವಿಮಾತು ಹೇಳುವ ಮೂಲಕ ಖಡಕ್ ಸಂದೇಶ ರವಾನಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರರಕ್ಕೆ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಲಮಟ್ಟಿಗೆ ಆಗಮಿಸಿದ್ದರು. ವಿಶೇಷ ಹೆಲಿಕಾಪ್ಟರ್ ಮೂಲಕ ಆಲಮಟ್ಟಿ ಹೆಲಿಪ್ಯಾಡಿಗೆ ಬಂದ ಮುಖ್ಯಮಂತ್ರಿಗಳು ಅಲ್ಲಿ ಮಾಡಲಾಗಿದ್ದ ವ್ಯವಸ್ಥೆಯನ್ನು ಕಂಡು ದಂಗಾದರು. ಹಲವು ಶಿಷ್ಟಾಚಾರಗಳನ್ನು ಈಗಾಗಲೇ ಕೈ ಬಿಟ್ಟಿರುವ ಸಿಎಂ ಪೊಲೀಸ್ ಇಲಾಖೆಗೂ ಹಲವಾರು ಸೂಚನೆಗಳನ್ನು ನೀಡಿದ್ದಾರೆ. ಆದರೂ, ಆಲಮಟ್ಟಿಯಲ್ಲಿ ಮುಖ್ಯಮಂತ್ರಿಗಳಿಗೆ ಗೌರವ ವಂದನೆ ನೀಡಲು ಸಿದ್ಧತೆ ಮಾಡಲಾಗಿತ್ತು.
ಇದರಿಂದ ಸಿಟ್ಟಾದ ಸಿಎಂ ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ಅವರನ್ನು ತರಾಟೆ ತೆಗೆದುಕೊಂಡರು. ದಿಸ್ ಇಸ್ ನಾಟ್ ಡನ್, ಐ ಆ್ಯಮ್ ಸಾರಿ. ಸತೀಶ್ ಯು ಶುಡ್ ಇನ್ಫಾರ್ಮ್ ಆಲ್ ಯುವರ್ ಜೂನಿಯರ್ಸ್. ವೆನ್ ದೇರ್ ಇಸ್ ಕ್ಲಿಯರ್ ಇನ್ಸಸ್ಟ್ರಕ್ಷನ್. ಯೂ ವಾಂಟ್ ಟು ಮೀಟ್ ವಯೋಲೇಟ್ ದ್ಯಾಟ್ ಎಂದು ಉತ್ತರ ವಲಯ ಐಜಿಪಿ ಎನ್. ಸತೀಶ ಕುಮಾರ ಅವರನ್ನು ಖಾರವಾಗಿಯೇ ಪ್ರಶ್ನಿಸಿದರು.
ಆಗ ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ, ಐ ಆ್ಯಮ್ ಸಾರಿ.. ಸಾರಿ… ಎಂದು ವಿಜಯಪುರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಕ್ಷಮೆ ಕೇಳಿದರು.
ಈ ಮುಂಚೆಯೇ ಪೊಲೀಸ್ ಗೌರವ ವಂದನೆಯಂಥ ಪದ್ಧತಿ ಬೇಡ ಎಂದು ಸಿಎಂ ಸೂಚನೆ ನೀಡಿ ಗಮನ ಸೆಳೆದಿದ್ದಾರೆ. ಸೂಚನೆ ಬಳಿಕವೂ ಇಂದು ಪೊಲೀಸ್ ಗೌರವ ವಂದನೆ ಕಾರ್ಯಕ್ರಮ ಆಯೋಜಿಸದ್ದಕ್ಕೆ ಬಸವರಾಜ ಬೊಮ್ಮಾಯಿ ಕೋಪಗೊಂಡರು. ಆದರೂ, ಅನಿವಾರ್ಯವಾಗಿ ಸಿಎಂ ಗೌರವ ವಂದನೆ ಸ್ವೀಕರಿಸಿದರು.