ತಜ್ಞರ ಅಭಿಪ್ರಾಯ ಕೇಳಿದ್ದರೆ ಇಂದು ಈ ಭಾಗಕ್ಕೆ ನೀರು ಬರುತ್ತಿರಲಿಲ್ಲ- ಶಾಸಕ ಎಂ. ಬಿ. ಪಾಟೀಲ

ವಿಜಯಪುರ: ಆಲಮಟ್ಟಿ ಜಲಾಷಯದ ಎತ್ತರವನ್ನು 524.256 ಮೀ. ಹೆಚ್ಚಿಸಿದಾಗ ಮಾತ್ರ ಮಾತ್ರ ನಮ್ಮ ಭಾಗಕ್ಕೆ ನೀರು ಹರಿಸಲು ಸಾಧ್ಯ ಎಂಬ ತಜ್ಞರ ಆಭಿಪ್ರಾಯವನ್ನು ತಾವು ಒಪ್ಪಿದ್ದರೆ ಇಂದು ನಮ್ಮ ಭಾಗ ನೀರಾವರಿಗೆ ಒಳಪಡುತ್ತಿರಲಿಲ್ಲ ಎಂದು ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆ ತಿಡಗುಂದಿ ಅಕ್ವಾಡಕ್ಟ್ ಮೂಲಕ ಡೊಮನಾಳ ಕೆರೆಗೆ ನೀರು ಹರಿಸಲಾಗಿದ್ದು, ಈಗ ಕೆರೆ ತುಂಬಿದೆ. ಈ ಹಿನ್ನೆಲೆಯಲ್ಲಿ ಡೋಮನಾಳ ಗ್ರಾಮಸ್ಥರು ಏರ್ಪಡಿಸಿದ್ದ ಗಂಗಾಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಾಜಿ ಸಚಿವ ಎಂ. ಬಿ. ಪಾಟೀಲ ಡೋಮನಾಳ ಕೆರೆಗೆ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದರು.

ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಈ ಭಾಗದಲ್ಲಿ ನೀರಾವರಿ ಯೋಜನೆಗಳನ್ನು ಮಾಡುವ ಸಾಹಸಕ್ಕೆ ಮುಂದಾಗದಿದ್ದರೇ, ಈ ಭಾಗ ಬರಗಾಲಕ್ಕೆ ತುತ್ತಾದ ಪ್ರದೇಶ ಎಂಬ ಹಣೆಪಟ್ಟಿಯಿಂದ ಹೊರ ಬರಲು ಸಾಧ್ಯವಾಗುತ್ತಿರಲಿಲ್ಲ. 20 ವರ್ಷಗಳು ಕಳೆದರೂ ಈ ಭಾಗದಲ್ಲಿ ಯಾವ ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿರಲಿಲ್ಲ. ನನ್ನ ಅವಧಿ ನಂತರವೂ ಹಲವು ಗ್ರಾಮಗಳಿಗೆ ನೀರು ದೊರೆಯುವಂತೆ ಮಾಡಿದ್ದೇನೆ. ಈ ಬಗ್ಗೆ ನನಗೆ ಆತ್ಮತೃಪ್ತಿ ಇದೆ ಎಂದು ಅವರು ತಿಳಿಸಿದರು.

ಇಂಡಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಮುಂದಾಗಿದ್ದೇ ನಾನು. ಆದರೆ, ಇಲ್ಲಿ ಕೆಲಸ ಮಾಡಿದರೂ ಕೆಲವರು ಸಹಿಸುವುದಿಲ್ಲ. ನಮ್ಮ ಜನ 12ನೇ ಶತಮಾನದಲ್ಲಿ ಮಹಾತ್ಮ ಬಸವೇಶ್ವರರನ್ನೇ ಬಿಡಲಿಲ್ಲ. ಇನ್ನು ನಮ್ಮಂಥವರು ಯಾವ ಲೆಕ್ಕ? ಎಂದು ಎಂ. ಬಿ. ಪಾಟೀಲ ಪ್ರಶ್ನಿಸಿದರು.

ಕನ್ನೂರ ಗುರುಮಠದ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮಿಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ, ಮಾಜಿ ಶಾಸಕ ವಿಠ್ಠಲ ಕಟಕದೊಂಡ, ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ತಾ. ಪಂ. ಮಾಜಿ ಅಧ್ಯಕ್ಷ ಕಾಳು ಬೆಳ್ಳುಂಡಗಿ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ನಾನಾಗೌಡ ಬಿರಾದಾರ, ಬಂಜಾರಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ. ಎಲ್. ಚವ್ಹಾಣ, ವಿಜಯಪುರ ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರೇಮಾನಂದ ಬಿರಾದಾರ, ರೈತ ಮುಖಂಡರಾದ ರಾಮನಗೌಡ ಬಿರಾದಾರ, ಸಿದ್ದನಗೌಡ ಪಾಟೀಲ, ಸುರೇಶಗೌಡ ಪಾಟೀಲ, ಶಿವಗೊಂಡಪ್ಪ ಬಿರಾದಾರ, ಅಶೋಕ ಬೆಳ್ಳುಂಡಗಿ, ಪಾರುಗೌಡ ಪಾಟೀಲ, ಕಾಶೀರಾಯಗೌಡ ಪಾಟೀಲ, ಶ್ರೀಶೈಲ ಹದನಾಳಕರ, ಅಪ್ಪುಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌