ಆಯುಷ್ ಆಸ್ಪತ್ರೆ ವೈದ್ಯರ ಆರೈಕೆ- 2 ತಿಂಗಳ ಬಳಿಕ ಕೊರೊನಾದಿಂದ ಗುಣಮುಖರಾದ ಮಹಾರಾಷ್ಟ್ರದ ವ್ಯಕ್ತಿ- ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ ರೋಗಿಯ ಸಂಬಂಧಿಕರು

ವಿಜಯಪುರ: ಒಂದು ತಿಂಗಳುಗಳ ಕಾಲ ವೆಂಟಿಲೇಟ್ ಮೇಲೆ ಚಿಕಿತ್ಸೆ ಸೇರಿದಂತೆ ಸತತ ಎರಡು ತಿಂಗಳ ಚಿಕಿತ್ಸೆಯ ಬಳಿಕ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಗುಣಮುಖರಾಗಿ ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ವಿಜಯಪುರ ನಗರದ ಪ್ರತಿಷ್ಠಿತ ಆಯುಷ್ ಆಸ್ಪತ್ರೆಯ ವೈದ್ಯ ಡಾ. ನಿತೀನ ಅಗರವಾಲ ಉಸ್ತುವಾರಿಯಲ್ಲಿ ವೈದ್ಯರಾದ ಡಾ. ಸೀಮಾ, ಡಾ. ರಶ್ಮಿ ಬಿರಾದಾರ, ಡಾ. ಆರತಿ, ಸುನೀಲ ದೇವೂರ ಮತ್ತು ಸಿಬ್ಬಂದಿ ನೀಡಿದ ಚಿಕಿತ್ಸೆಯಿಂದಾಗಿ ಈ ವ್ಯಕ್ತಿ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ತಿಕ್ಕುಂಡಿ ಗ್ರಾಮದ ಪ್ರಕಾಶ ಗೊಬ್ಬಿ ಎಂಬುವರು ಎರಡು ತಿಂಗಳ ಹಿಂದೆ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯಿಂದಾಗಿ ಆಯುಷ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ವೈದ್ಯರ ಸೂಕ್ತ ಮತ್ತು ಸಮಯೋಚಿತ ಚಿಕಿತ್ಸೆಯಿಂದಾಗಿ ಸಂಪೂರ್ಣ ಗುಣಮುಖರಾಗಿ ಡಿಶ್ಚಾರ್ಜ್ ಆಗಿದ್ದಾರೆ.

ವಿಜಯಪುರದ ಪ್ರತಿಷ್ಠಿತ ಆಯುಷ್ ಆಸ್ಪತ್ರೆ.

ತಿಕ್ಕುಂಡಿಯ 48 ಪ್ರಕಾಶ ಗೊಬ್ಬಿ ವ್ಯಕ್ತಿ ಆಸ್ಪತ್ರೆಗೆ ಬಂದಾಗ ಕೊರೊನಾ ಸೋಂಕು ತೀವ್ರವಾಗಿದ್ದು, ಶ್ವಾಸಕೋಶದ ಶೇ. 50 ರಿಂದ 75 ಭಾಗಕ್ಕೆ ನ್ಯೂಮೋನಿಯಾ ವ್ಯಾಪಿಸಿತ್ತು. ಇಂಥ ಸಿಟಿ ಸ್ಕೋರ್ 20 ದಾಖಲಾಗಿತ್ತು. ಇಂಥ ಕಠಿಣ ಪರಿಸ್ಥಿತಿಯಲ್ಲಿ ಒಂದು ತಿಂಗಳ ಕಾಲ ವೆಂಟಿಲೇಟರ್ ಮೇಲೆ ಚಿಕಿತ್ಸೆ ನೀಡಲಾಯಿತು. ವೈದ್ಯರೂ ಕೂಡ ರೋಗಿಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದೇ ಹೇಳಿದ್ದರು. ಆದರೂ, ಡಾ. ನಿತೀನ ಅಗರವಾಲ ಮತ್ತು ಇತರ ವೈದ್ಯಕೀಯ ಸಿಬ್ಬಂದಿ ಉತ್ತಮ ಆರೈಕೆ ಮಾಡಿದ್ದರಿಂದಾಗಿ ತಮ್ಮ ಸಹೋದರ ಈಗ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿಗಿಂತಲೂ ಮುಂಚೆ ಇವರ ತೂಕ 85 ಕೆಜಿ ಇತ್ತು. ಗುಣಮುಖರಾಗುವ ವೇಳೆಗೆ ಸುಮಾರು 40 ಕೆಜಿ ತೂಕ ಕಡಿಮೆಯಾಗಿ 45 ಕೆಜಿಗೆ ಇಳಿಕೆಯಾಗಿತ್ತು. ಈಗ 62.20 ಕೆಜಿ ತೂಕ ಹೊಂದಿದ್ದಾರೆ.

ಆಯುಷ್ ಆಸ್ಪತ್ರೆ ಮುಖ್ಯಸ್ಥ ಡಾ. ನಿತೀನ ಅಗರವಾಲ ಜೊತೆ ಪ್ರಕಾಶ ಗೊಬ್ಬಿ ಕುಟುಂಬ ಸದಸ್ಯರು.

ತಮ್ಮ ಅಣ್ಣ ಕೃಷಿ ಮಾಡುತ್ತಿದ್ದರು. ಆದರೆ, ಕೊರೊನಾ ಸೋಂಕು ಹೇಗೆ ಬಂತು ಗೊತ್ತಾಗಲಿಲ್ಲ. ಆರಂಭದಲ್ಲಿ ನಾಲ್ಕೈದು ದಿನ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಆದರೆ, ನಂತರ ಆಯುಷ್ ಆಸ್ಪತ್ರೆಗೆ ದಾಖಲು ಮಾಡಿದೆವು. ನಂತರ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ವೆಂಟಿಲೇಟರ್ ವ್ಯವಸ್ಥೆ ಅಳವಡಿಸಲಾಗಿತ್ತು. ಆಗ ನಾಲ್ಕೈದು ದಿನ ಪ್ರಕಾಶ ಗೊಬ್ಬಿ ಪ್ರಜ್ಞೆ ತಪ್ಪಿ ಕೋಮಾದಲ್ಲಿದ್ದರು. ತಾವೆಲ್ಲ ಅವರ ಬದುಕಿನ ಬಗ್ಗೆ ಆಸೆಯನ್ನೇ ಬಿಟ್ಟಿದ್ದೇವು. ಆದರೆ, ಆಸ್ಪತ್ರೆಯ ವೈದ್ಯರು ಶಕ್ತಿಮೀರಿ ಪ್ರಯತ್ನ ಮಾಡಿದ್ದರಿಂದ ತಮ್ಮ ಸಹೋದರನಿಗೆ ಪುನರ್ಜನ್ಮ ನೀಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಪ್ರಕಾಶ ಗೊಬ್ಬಿ ಸಹೋದರ ಮತ್ತು ಶಿಕ್ಷಕರಾಗಿರುವ ಸಿದ್ದು ಗೊಬ್ಬಿ ನ್ಯೂಸ್ 18 ಕನ್ನಡಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ರೋಗಿಗಳು ಕೊರೊನಾ ಸೋಂಕು ತಗುಲಿದ ನಂತರ ತಮ್ಮ ಹೆಸರು ಮತ್ತೀತರ ಮಾಹಿತಿ ನೀಡಲು ಹಿಂಜರಿಯುತ್ತಾರೆ. ಆದರೆ, ನಮಗೆ ಅದಾವುದರ ಭಯವೂ ಇಲ್ಲ. ವೈದ್ಯರ ಉತ್ತಮ ಚಿಕಿತ್ಸೆಯಿಂದ ತಮ್ಮ ಸಹೋದರ ಗುಣಮುಖರಾಗಿದ್ದು, ಕೊರೊನಾ ಸೋಂಕಿತರಾರೂ ಧೈರ್ಯ ಕಳೆದುಕೊಳ್ಳಬಾರದು ಎಂದು ಹೇಳಿದ್ದಾರೆ.

ಆಯುಷ್ ಆಸ್ಪತ್ರೆಯ ಮುಖ್ಯಸ್ಥ ಡಾ. ನಿತೀನ ಅಗರವಾಲ ಜೊತೆ ಪ್ರಕಾಶ ಗೊಬ್ಬಿ ಕುಟುಂಬ ಸದಸ್ಯರು.

ಅಷ್ಟೇ ಅಲ್ಲ, ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದ ಎರಡು ತಿಂಗಳ ನಂತರ ಮತ್ತೆ ಆಯುಷ್ ಆಸ್ಪತ್ರೆಗೆ ಆಗಮಿಸಿದ ಪ್ರಕಾಶ ಗೊಬ್ಬಿ ಅವರ ಸಂಬಂಧಿಕರಾದ ರಾಜಶೇಖರ ಸಗರ, ಪ್ರಸನ್ನಕುಮಾರ ಸಗರ, ರಾಕೇಶ ಘಾಳಿ, ಸಿದ್ಧು ಗೊಬ್ಬಿ, ಅಭಿಷೇಕ ಗೊಬ್ಬಿ ಮುಂತಾದವರು ಚಿಕಿತ್ಸೆ ನೀಡಿದ ಆಸ್ಪತ್ರೆಯ ಮುಖ್ಯಸ್ಥ ಡಾ. ನಿತೀನ ಅಗರವಾಲ ಮತ್ತು ಡಾ. ರಶ್ಮಿ ಬಿರಾದಾರ ಸೇರಿದಂತೆ ಇತರ ವೈದ್ಯರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಕುರಿತು ಬಸವ ನಾಡು ಜೊತೆ ಮಾತನಾಡಿದ ಆಯುಷ್ ಆಸ್ಪತ್ರೆ ಮುಖ್ಯಸ್ಥ ಡಾ. ನಿತೀನ ಅಗರವಾಲ, ಪ್ರಕಾಶ ಗೊಬ್ಬಿ ಅವರನ್ನು ತಮ್ಮ ಆಸ್ಪತ್ರೆಗೆ ದಾಖಲು ಮಾಡಿದಾಗ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಅವರ ಆರೋಗ್ಯ ಹದಗೆಟ್ಟಿತ್ತು. ನಂತರ ಚಿಕಿತ್ಸೆಗೆ ಅಗತ್ಯವಾದ ಎಲ್ಲ ವೈದ್ಯಕೀಯ ಪರೀಕ್ಷೆಯನ್ನು ಮಾಡಿ ಅಗತ್ಯಕ್ಕೆ ತಕ್ಕ ಚಿಕಿತ್ಸೆ ನೀಡಲಾಯಿತು. ಈಗ ಅವರು ಸಂಪೂರ್ಣ ಗುಣಮುಖರಾಗಿ ಡಿಶ್ಚಾರ್ಜ್ ಆಗಿದ್ದಾರೆ. ಅಲ್ಲದೇ, ಅವರ ತಮ್ಮ ಊರಿನಿಂದ ಎರಡು ತಿಂಗಳ ನಂತರ ಬಂದು ತಮ್ಮನ್ನು ಹಾಗೂ ತಮ್ಮ ಆಸ್ಪತ್ರೆಯ ಸಿಬ್ಬಂದಿಯನ್ನು ಸತ್ಕರಿಸಿರುವುದು ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.

ಇದಕ್ಕೆ ಹೇಳೋದು. ವೈದ್ಯೋ ನಾರಾಯಣ ಹರಿ ಅಂತ.

Leave a Reply

ಹೊಸ ಪೋಸ್ಟ್‌