ಆಲಮಟ್ಟಿ ಜಲಾಷಯದ ಎತ್ತರ ಹೆಚ್ಚಳ, ಸಂತ್ರಸ್ತರ ಪುನರ್ವಸತಿ, ಪುನರ್ ನಿರ್ನಾಣಕ್ಕೆ ಸರಕಾರ ಮುಂದಾಗಲಿ- ಎಂ. ಬಿ. ಪಾಟೀಲ

ವಿಜಯಪುರ: ಆಲಮಟ್ಟಿ ಜಲಾಷಯದ ಎತ್ತರ ಹೆಚ್ಚಳ ಮತ್ತು ಇದರಿಂದ ಸಂತ್ರಸ್ತರಾಗುವ ಜನರಿಗೆ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಸೌಲಭ್ಯಗಳನ್ನು ಒದಗಿಸಲು ಸರಕಾರ ಕೂಡಲೇ ಮುಂದಾಗಬೇಕು ಎಂದು ಮಾಜಿ ಸಚಿವ, ಶಾಸಕ ಎಂ. ಬಿ. ಪಾಟೀಲ ಆಗ್ರಹಿಸಿದ್ದಾರೆ‌.

ವಿಜಯಪುರ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ತಿಡಗುಂದಿ ಅಕ್ವಾಡೆಕ್ಟ್ ಮೂಲಕ ತುಂಬಿದ ಕೆರೆಗೆ ಬಾಗೀನ ಅರ್ಪಿಸಿ, ಗ್ರಾಮಸ್ಥರನ್ನು ಉದ್ದೇಶಿಸಿ ಅವರು ಮಾತನಾಡಿದರು.

2013ರಲ್ಲಿ ತಾವು ಸಚಿವನಾದಾಗ ಗೆಜೆಟ್ ಅಧಿಸೂಚನೆಗೆ ಕಾಯದೇ ಮುಂಚಿತವಾಗಿಯೇ ನೀರಾವರಿ ಯೋಜನೆಗಳ ಹೆಡ್‍ವರ್ಕ್ಸ್ ಕಾಲುವೆ ನೆಟವರ್ಕ್, ವಿದ್ಯುತ್ ಸ್ಥಾವರ ಸೇರಿದಂತೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇನೆ. ಇದರಿಂದ ಕುಡಿಯುವ ನೀರು ಪೂರೈಕೆ ಮತ್ತು ಜಿಲ್ಲಾದ್ಯಂತ ಅಂತರ್ಜಲ ಹೆಚ್ಚಿಸಲು ಕಾಲುವೆಗಳ ಮೂಲಕ ನೀರು ಹರಿಸಲಾಗಿತ್ತು. ಈಗ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಮಗಾರಿ ಮುಖ್ಯವಾಗಿದೆ. ಈ ಕೆಲಸ ಪೂರ್ಣಗೊಳಿಸಿದರೆ, ನ್ಯಾಯಾಧೀಕರಣದ ಅಂತಿಮ ಅಧಿಸೂಚನೆ ಪ್ರಕಟವಾದ ತಕ್ಷಣ ಆಣೆಕಟ್ಟು ಎತ್ತರಿಸಲು ಅನಕೂಲವಾಗುತ್ತದೆ ಎಂದು ಅವರು ತಿಳಿಸಿದರು.

ಈಗ ನಮ್ಮ ಜಿಲ್ಲೆಯವರೇ ಆದ ಗೋವಿಂದ ಕಾರಜೋಳ ನೀರಾವರಿ ಸಚಿವರಾಗಿದ್ದಾರೆ. ಈ ಹಿಂದೆ ಆಲಮಟ್ಟಿ ಜಲಾಷಯದ ಎತ್ತರ ಮತ್ತು ಸಂತ್ರಸ್ಥರ ಕುರಿತು ಸಾಕಷ್ಟು ಬಾರಿ ಧ್ವನಿ ಎತ್ತಿದ್ದಾರೆ. ಈಗ ಅವರೇ ಅಧಿಕಾರದಲ್ಲಿ ಇರುವುದರಿಂದ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲಿದ್ದಾರೆ ಎಂಬ ಭರವಸೆ ಇದೆ ಎಂದು ಮಾಜಿ ಸಚಿವರು ತಿಳಿಸಿದರು.

ಈ ಹಿಂದೆ ಬೇಸಿಗೆಯಲ್ಲಿ ಪ್ರತಿಯೊಂದು ಗ್ರಾಮದಲ್ಲಿಯೂ ಸಹ ಕುಡಿಯುವ ನೀರು ಹಾಗೂ ನೀರಾವರಿಗಾಗಿ ಬೊರವೆಲ್‍ ಕೊರೆಯಲು ಪ್ರತಿ ವರ್ಷ ರೂ.10 ಕೋ. ಖರ್ಚು ಮಾಡಲಾಗುತ್ತಿತ್ತು. ಈಗ ನೀರಾವರಿಯಾಗಿರುವ ಆ ಸಮಸ್ಯೆ ಇಲ್ಲ. ರೂ. 2 ರಿಂದ 3 ಲಕ್ಷ ಇದ್ದ ಪ್ರತಿ ಎಕರೆ ಜಮೀನಿನ ಬೆಲೆ ಈಗ ರೂ. 20 ರಿಂದ 30 ಲಕ್ಷಕ್ಕೆ ಏರಿಕೆಯಾಗಿದೆ. ಈಗ ರೈತರ ಬದುಕು ನೆಮ್ಮದಿಯಿಂದ ಕೂಡಿದೆ ಎಂದು ಎಂ. ಬಿ. ಪಾಟೀಲ ಹೇಳಿದರು.

ತುಂಬಿ ನಿಂತ ಕೆರೆಗೆ ಬಾಗೀನ ಅರ್ಪಿಸಲು ಇಡೀ ಗ್ರಾಮಕ್ಕೆ ಗ್ರಾಮವೇ ಶೃಂಗಾರಗೊಂಡು, ಗ್ರಾಮದಲ್ಲಿ ಹಬ್ಬದ ವಾತಾವರಣ ಉಂಟಾಗಿತ್ತು.

ಈ ಸಂದರ್ಭದಲ್ಲಿ ಬೊಮ್ಮನಳ್ಳಿ ಗವಿ ಮಠದ ಗುರುಶಾಂತ ಶಿವಾಚಾರ್ಯರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ನಾಗಠಾಣ ಶಾಸಕರಾದ ದೇವಾನಂದ ಚವ್ಹಾಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಬಂಜಾರ ವಿದ್ಯಾ ಸಂಸ್ಥೆ ಅಧ್ಯಕ್ಷ ಡಿ. ಎಲ್. ಚವ್ಹಾಣ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಾನಾಗೌಡ ಬಿರಾದಾರ, ವಿಜಯಪುರ ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರೇಮಾನಂದ ಬಿರಾದಾರ, ತಾ.ಪಂ.ಮಾಜಿ ಅಧ್ಯಕ್ಷ ಕಾಳು ಬೆಳ್ಳುಂಡಗಿ, ಮುಖಂಡರಾದ ರಾಮನಗೌಡ ಬಿರಾದಾರ, ಅಪ್ಪುಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಶಿವಗೊಂಡಪ್ಪ ಬಿರಾದಾರ, ಕಾಶೀರಾಯಗೌಡ ಪಾಟೀಲ, ಶ್ರೀಶೈಲ ಅಜನಾಳಕರ, ಸಿದ್ಧಾರಾಮ ದಾಸ್ಯಾಳ, ಶಾಂತುಗೌಡ ಬಿರಾದಾರ, ಶಂಕರ ಹುಣಸಗಿ, ಗ್ರಾ. ಪಂ. ಅಧ್ಯಕ್ಷೆ ನಿರ್ಮಲಾ ತಿಲ್ಯಾಳ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌