ವಿಜಯಪುರ: ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅಲಿಯಾಬಾದ ಗ್ರಾಮದ ರೈತ ಹರಿಬಾ ಮಾಳವೆ ಅವರ ಜಮೀನಿಗೆ ತೆರಳಿ ಮೊಬೈಲ್ ಆ್ಯಪ್ ಮೂಲಕ ಸ್ವಯಂ ಬೆಳೆ ಸಮೀಕ್ಷೆ ದಾಖಲಿಸಿಕೊಳ್ಳುವ ಮಾಹಿತಿಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಜಮೀನಿನ ಸರ್ವೇ ನಂಬರ್ ಅನ್ನು ಆಯ್ಕೆ ಮಾಡುವಾಗ ನೀವು ಆಯ್ಕೆ ಮಾಡಿದ ಗ್ರಾಮವು ಪೂರ್ವ ಮುಂಗಾರಿಗೆ ಆಯ್ಕೆ ಆಗಿಲ್ಲ ಎಂಬ ಮಾಹಿತಿ ಗೋಚರಿಸಿದರೆ ನಿಮ್ಮ ಗ್ರಾಮವು ಪೂರ್ವ ಮುಂಗಾರಿಗೆ ಆಯ್ಕೆ ಆಗಿಲ್ಲ ಎಂದು ಅರ್ಥ. ಸಾಮಾನ್ಯ ಮುಂಗಾರು ಹಂಗಾಮಿನಲ್ಲಿ ನೀವು ಬೆಳೆ ಸಮೀಕ್ಷೆ ಮಾಡಬಹುದು ಎಂಬುದನ್ನು ಅರಿಯಬೇಕು. ಪರಿಹಾರ (ಪ್ರಖೃತಿ ವಿಕೋಪ, ಕೋರೊನಾ) ಬೆಳೆ ವಿಮೆ, ಬೆಳೆ ಸಾಲ, ಬೆಂಬಲ ಬೆಲೆ ಮತ್ತು ಸರಕಾರದ ನಾನಾ ಇಲಾಖೆಯ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಮಾನದಂಡವಾಗಿರುತ್ತದೆ. ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ವಿವರವನ್ನು ಮೊಬೈಲ್ ಆ್ಯಪ್‍ನಲ್ಲಿ ನಿಗದಿತ ಸಮಯದಲ್ಲಿ ಅಪ್‍ಲೋಡ್ ಮಾಡಬೇಕು. ರೈತರ ಆಧಾರ ಸಂಖ್ಯೆ, ಪೂರ್ಣ ವಿಳಾಸ ಮತ್ತು ಮೊಬೈಲ್ ನಂಬರ್ ವಿವರನ್ನು ನಮೂದಿಸಿ ತಮ್ಮ ಜಮೀನಿನ ಸರ್ವೆ ನಂಬರ್ ನಲ್ಲಿ ಬಿತ್ತನೆ, ನಾಟಿ ಮಾಡಿದ ಬೆಳೆಯ ವಿವರ ಹಾಗೂ ವಿಸ್ತೀರ್ಣವನ್ನು ಹಿಸ್ಸಾವಾರು ದಾಖಲಿಸಬೇಕು ಎಂದು ತಿಳಿಸಿದರು.
ಪೂರ್ವ ಮುಂಗಾರು ರೈತರ ಬೆಳೆ ಸಮೀಕ್ಷೆ 2021 ಆ್ಯಪ್‍ನಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಬೇಕು. ಹಾಲಿ ಬೆಳೆಯ ಸಮೀಕ್ಷೆಯಿಂದ ರೈತರು ಬೆಳೆಯುವ ಗ್ರಾಮವಾರು ಬೆಳೆಗಳ ವಿವರವು ನಿಖರವಾಗಿದ್ದು, ಸರಕಾರಕ್ಕೆ ಇಲಾಖೆ ಯೋಜನೆಗಳ ರೂಪುರೇಷೆಗಳನ್ನು ತಯಾರಿಸಲು ಪ್ರಮುಖ ಮಾಹಿತಿ ಇದಾಗಿದೆ. ವಿಜಯಪುರ ಜಿಲ್ಲೆಯ ಎಲ್ಲ ಗ್ರಾಮಗಳ ಎಲ್ಲಾ ರೈತರು ಪ್ರಸಕ್ತ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದರು.
ಈ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿ ರಾಹುಲ ಸಿಂಧೆ, ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.