ಇಂಗಳೇಶ್ವರದಲ್ಲಿ ಬಸವೇಶ್ವರರ ಅಶ್ವಾರೂಢ ಮೂರ್ತಿ ಸ್ಥಾಪನೆಗೆ ಗ್ರಾಮದ ನಾನಾ ಸಂಘಟನೆಗಳಿಂದ ಶಾಸಕ ಶಿವಾನಂದ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಕೆ

ವಿಜಯಪುರ: ವಿಶ್ವಗುರು ಬಸವಣ್ಣನವರ ಜನ್ಮಸ್ಥಳವಾದ ಇಂಗಳೇಶ್ವರ ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ 12ನೇ ಶತಮಾನದ ಸಮಾಜ ಸುಧಾರಕ ಅಣ್ಣ ಬಸವಣ್ಣನವರ ಅಶ್ವಾರೂಢ ಕಂಚಿನ ಪುತ್ಥಳಿಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿ ಇಂಗಳೇಶ್ವರ ಗ್ರಾಮದ ನಾನಾ ಸಂಘಟಣೆಗಳ ಮುಖಂಡರು ಹಾಗೂ ಆಟೋ ಚಾಲಕರ ಸಂಘ ಜಂಟಿಯಾಗಿ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿತು.

ವಿಜಯಪುರ ನಗರದಲ್ಲಿರುವ ಶಾಸಕರ ನಿವಾಸಕ್ಕೆ ತೆರಳಿದ ಸಂಘಟನೆಗಳ ಮುಖಂಡರು ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಇಂಗಳೇಶ್ವರ ಬಸ್ ನಿಲ್ದಾಣದ ಆವರಣದಲ್ಲಿರುವ ಈಗಿನ ಮೂರ್ತಿ ಸಿಮೆಂಟ್ ನಿಂದ ತಯಾರಿಸಲಾಗಿದೆ. ಕೆಲವು ದಿನಗಳಿಂದ ಮೂರ್ತಿಯಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಇದನ್ನು ಮುಂದುವರೆಸಿರುವುದು ಅವಮಾನಕರ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಮೂರ್ತಿಯ ಜಾಗದಲ್ಲಿ ಕೂಡಲೇ ಕಂಚಿನ ಪುತ್ಥಳಿ ಸ್ಥಾಪಿಸಬೇಕು. ಅಲ್ಲದೇ, ಅಲ್ಲದೇ, ಇಂಗಳೇಶ್ವರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶಿವಾನಂದ ಪಾಟೀಲ, ಶೀಘ್ರದಲ್ಲಿಯೇ ಬಸವೇಶ್ವರರ ಪುತ್ಥಳಿಯನ್ನು ನಿರ್ಮಿಸಲು ಮುಖ್ಯಮಂತ್ರಿಗಳ ಅನುದಾನದಲ್ಲಿ ಕನಿಷ್ಠ ರೂ. 30 ರಿಂದ 34 ಲಕ್ಷ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ಮೊದಲ ಹಂತದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮಂಜೂರಾತಿ ಮತ್ತು ವೈದ್ಯರು ಹಾಗೂ ಸಿಬ್ಬಂದಿ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಿದ್ರಾಮ ಅಂಗಡಗೇರಿ, ಬೀರಪ್ಪ ಉಕ್ಕಲಿ, ಪ್ರಕಾಶ ಅವಟಿ, ರೇವಣಸಿದ್ದ ನಾಟೀಕಾರ, ಚಂದ್ರಾಯ ಪತ್ರಿ, ಶಿವಾನಂದ ಪತ್ರಿ, ಸಿದ್ದು ಯರನಾಳ, ರೇವಣಸಿದ್ದ ಇಂಡಿ, ಶರಣು ಉಕ್ಕಲಿ, ಕಾಂತು ಶ್ಯಾಮಗೋಳ, ಸೈಪನ್ ಮುಲ್ಲಾ, ಶಂಕರ ಮುತ್ತತ್ತಿ, ಶರಣು ಬಾಗೇವಾಡಿ, ಹಣಮಂತ ನಾಟೀಕಾರ, ಅಶೋಕ ಬಾಗೆವಾಡಿ, ಕೈಲಾಸ ಕುಂಬಾರ, ದ್ಯಾವಪ್ಪ ಬಿಸನಾಳ, ಮಾಂತು ಡೋಣೂರ, ರಮೇಶ ದಿಂಡವಾರ, ಸಂಗಪ್ಪ ನಾಟೀಕಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌