ವಿಜಯಪುರದಲ್ಲಿ ಬೃಹತ್ ಉದ್ದಿಮೆಗಳನ್ನು ಸ್ಥಾಪಿಸಲು ಜಪಾನ ಮುಂದಾಗಲಿ- ಜಪಾನ್ ಡೆಪ್ಯೂಟಿ ಕೌನ್ಸಿಲ್ ಜನರಲ್ ಮೂಲಕ ಆಹ್ವಾನ ನೀಡಿದ ಮಾಜಿ ಸಚಿವ ಎಂ. ಬಿ. ಪಾಟೀಲ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕೆಗೆ ಬೇಕಾಗುವ ಎಲ್ಲ ಸೌಲಭ್ಯಗಳೂ ಲಭ್ಯವಿದ್ದು, ಜಪಾನ ಬೃಹತ್ ಉದ್ದಿಮೆಗಳನ್ನು ವಿಜಯಪುರದಲ್ಲಿ ಸ್ಥಾಪಿಸಲು ಮುಂದಾಗಬೇಕು ಎಂದು ಜಪಾನ್ ರಾಯಭಾರಿ ಮೂಲಕ ಮಾಜಿ ಸಚಿವ ಎಂ. ಬಿ. ಪಾಟೀಲ ಮನವಿ ಮಾಡಿದ್ದಾರೆ.

ಎರಡು ದಿನಗಳ ವಿಜಯಪುರ ಪ್ರವಾಸದಲ್ಲಿರುವ ಬೆಂಗಳೂರಿನಲ್ಲಿರುವ ಜಪಾನ್ ಕೌನ್ಸಿಲೇಟ್ ಡೆಪ್ಟೂಯಿ ಕೌನ್ಸಿಲ್ ಜನರಲ್ ಕತ್ಸುಮಸಾ ಮರಾವೂ, ಬಿ ಎಲ್ ಡಿ ಇ ಸಂಸ್ಥೆಯ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಲಾಸ್ ರೂಂ ಕಾಂಪ್ಸೆಕ್ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಎಂ. ಬಿ. ಪಾಟೀಲ ಅವರು, ಇಂದು ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ನೀರಿದೆ. ವಿದ್ಯುತ್ ಉತ್ಪಾದನೆಯಾಗುತ್ತಿದೆ. ಉದ್ದಿಮೆ ಸ್ಥಾಪಿಸಲು ಬೇಕಾಗುವ ಭೂಮಿ ಕೂಡ ಇದೆ. ಉದ್ಯಮ ಸ್ಥಾಪಿಸಲು ಎಲ್ಲ ರಾಷ್ಟ್ರಗಳು ಬೆಂಗಳೂರು ನಗರವನ್ನು ಆಯ್ಕೆ ಮಾಡುತ್ತವೆ. ದಯವಿಟ್ಟು ನಿಮ್ಮ ಜಪಾನ ದೇಶದ ಟೊಯೊಟೊದಂತಹ ಬೃಹತ್ ಉದ್ಯಮಗಳನ್ನು ವಿಜಯಪುರಕ್ಕೆ ತೆಗೆದುಕೊಂಡು ಬನ್ನಿ. ಇಲ್ಲಿನ ಸೌಕರ್ಯಗಳನ್ನು ಬಳಸಿಕೊಳ್ಳಿ. ನಮ್ಮ ಜನರಿಗೂ ಉದ್ಯೋಗ ನೀಡಿ ಎಂದು ಎಂ. ಬಿ. ಪಾಟೀಲ ಮನವಿ ಮಾಡಿದರು.


ಭಾರತ ಬಹುಸಂಸ್ಕೃತಿಯ ನಾಡು. ನೀವು ನೂರು ದೇವರನ್ನು ಹೊಂದಿದ್ದರೆ, ನಾವು ಮೂರು ಕೋಟಿ ದೇವರನ್ನು ಹೊಂದಿರುವ ದೈವಿ ನಾಡಿನವರು. ಎಲ್ಲ ಅನಾನುಕೂಲತೆಗಳ ನಡುವೆಯೂ ಭಾರತೀಯರು ಶ್ರಮ ಜೀವಿಗಳು. ಶೇ. 70 ಜನರು ಕೃಷಿಕರಾಗಿದ್ದು, ನಂತರದಲ್ಲಿ ಕಾರ್ಮಿಕರು, ಮಧ್ಯಮ ವರ್ಗದವರು ಬಳಿಕ ಉನ್ನತ ವರ್ಗ ಇದೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

ಕಾರ್ಯಕ್ರಮ ಉದ್ಗಾಟಿಸಿದ ಕತ್ಸುಮಸಾ ಮರಾವೂ ಜಪಾನ್ ಮತ್ತು ಅಲ್ಲಿನ ಸಂಸ್ಕೃತಿ ಕುರಿತು ಮಾತನಾಡಿ, ಜಪಾನ್ ಮತ್ತು ಭಾರತದ ಮಧ್ಯೆ ಅಧ್ಯಾತ್ಮ, ಕಲೆ, ಆಹಾರ, ಸಂಸ್ಕೃತಿ ಸೇರಿದಂತೆ ಭಾರತ ಮತ್ತು ಜಪಾನ ಹಲವಾರು ವಿಷಯಗಳಲ್ಲಿ ಸಾಮ್ಯತೆಯಿದೆ. ಭಾರತದಿಂದ ಬಳುವಳಿಯಾಗಿ ಬಂದ ಬೌದ್ಧ ಧರ್ಮದ ಅನುಯಾಯಿಗಳಾದ ನಾವು ಹಲವು ರೀತಿಗಳಲ್ಲಿ ಭಾರತದೊಂದಿಗೆ ಸಾಮ್ಯತೆ ಹೊಂದಿದ್ದೇವೆ. 6ನೇ ಶತಮಾನದಲ್ಲಿ ಬೌದ್ಧ ಧರ್ಮದ ಆಗಮನದಿಂದ ಧಾರ್ಮಿಕತೆಯಲ್ಲಿ ನಾವು ದೇವತೆಗಳನ್ನು ಪೂಜಿಸುತ್ತೇವೆ. ನೂರಕ್ಕೂ ಹೆಚ್ಚು ದೇವರುಗಳನ್ನು ನಮ್ಮ ದೇಶದಲ್ಲಿ ಹಲವಾರು ದೇವಾಲಯಗಳಲ್ಲಿ ಆರಾಧಿಸುತ್ತಾರೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಏಳು ದೇವರುಗಳನ್ನು ನಾವು ಆರಾಧಿಸುತ್ತೇವೆ. ಅದರಲ್ಲಿ ಒಂದು ದೇವರು ಮಾತ್ರ ಜಪಾನ್ ದೇಶದ್ದಾಗಿದ್ದು, ಉಳಿದಂತೆ ಶಿವ, ಕುಬೇರ, ಸರಸ್ವತಿ ಮತ್ತು ಇತರ ಆರು ದೇವರನ್ನು ನಾವು ಪೂಜಿಸುತ್ತೇವೆ ಎಂದು ತಿಳಿಸಿದರು.

 

ನಂತರ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೋಂಡ ಅವರು, ಭಾರತ ಅತೀ ಹೆಚ್ಚು ಯುವಕರನ್ನು ಹೊಂದಿರುವ ರಾಷ್ಟ್ರ. ಜಪಾನ ಕೌಶಲ್ಯಯುತ ಉತ್ಪಾದನೆಗೆ ಹೆಸರುವಾಸಿ. ಇವುಗಳ ಆಧಾರದ ಮೇಲೆ ಸುಸ್ಥಿರ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಪಾನಿಗರ ದೀರ್ಘಾಯುಷದ ಗುಟ್ಟು ಏನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಉತ್ತಮ ಆಹಾರ, ಉತ್ತಮ ವಿಹಾರ ದೀರ್ಘಾಯುಷದ ಗುಟ್ಟು ಎಂದು ತಿಳಿಸಿದರು. ಜಪಾನ ಮತ್ತು ಭಾರತ ಮಧ್ಯೆ ಭಾಷೆಯ ಅಡ್ಡಗೋಡೆಯಿದೆ. ಇದನ್ನು ದೂರ ಮಾಡಲು ಭಾರತದಲ್ಲಿ ಜಪಾನ ಭಾಷಾ ಅಧ್ಯಯಕ ಕೇಂದ್ರಗಳನ್ನು ಆರಂಭಿಸುವ ಉದ್ದೇಶ ಇದೆ. ಕರ್ನಾಟಕದಲ್ಲಿ ಜಪಾನಿನ ನಾನಾ ಕಂಪನಿಗಳ 500 ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ ಬಸನಗೌಡ ಎಂ. ಪಾಟೀಲ, ಪ್ರಾಚಾರ್ಯ ಡಾ. ಅತುಲ ಆಯಿರೆ, ರಾಘವೇಂದ್ರ ಕುಲಕರ್ಣಿ, ದೇವೆಂದ್ರ ಅಗರವಾಲ, ಡಾ. ಮಹಾಂತೇಶ ಬಿರಾದಾರ, ಡಾ. ವಿ. ಪಿ. ಹುಗ್ಗಿ, ಶೋಲ್ಮೊನ್ ಚೋಪಡೆ, ಡಾ. ಆರ್. ಬಿ. ಕೊಟ್ನಾಳ, ಡಾ. ಪ್ರಕಾಶ ಸಿದ್ದಾಪುರ, ಅನುರಾಧ ಟಂಕಸಾಲಿ ಮುಂತಾದವರು ಉಪಸ್ಥಿತರಿದ್ದರು.

 

ಈ ಕಾರ್ಯಕ್ರಮದ ಬಳಿಕ ಕತ್ಸುಮಸಾ ಮರಾವೂ ಅವರು, ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನೆ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬುದ್ಧನ ನಂತರ ಸಮಾಜ ಪರಿವರ್ತಕರಾದ ಬಸವಣ್ಣನವರ ವಿಚಾರಗಳನ್ನು, ವಚನ ಗ್ರಂಥಗಳನ್ನು ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಪರಿಚಯಿಸಿದರು. ಡಾ. ಅರುಣ ಇನಾಮದಾರ ವಿಜಯಪುರದ ಇತಿಹಾಸ, ಆದಿಲ್‍ಶಾಹಿ ಅರಸರ ಕಾಲದ ವಾಸ್ತುಶಿಲ್ಪ, ಆಡಳಿತದ ಪರಿಚಯಿಸಿದರು.

Leave a Reply

ಹೊಸ ಪೋಸ್ಟ್‌