ವಿಜಯಪುರ: ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮತ್ತು ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಅವರು ಬಸವನ ಬಾಗೇವಾಡಿ ತಾಲೂಕಿನಲ್ಲಿ ಕೈಗೊಳ್ಳಲಾಗಿರುವ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಮೊದಲಿಗೆ ಮನಗೂಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ನಂತರ ಬಸವನ ಬಾಗೇವಾಡಿ ಪಟ್ಟಣದಲ್ಲಿರುವ ನಾನಾ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.
ರೂ. 4 ಕೋ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪುರಸಭೆ ನೂತನ ಕಚೇರಿ ಕಟ್ಟಡ ಕಾಮಗಾರಿ ಪರಿಶೀಲಿಸಿದ ಅವರು, ಈ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸುವಂತೆ ಬಸವನ ಬಾಗೇವಾಡಿ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು. ನಂತರ ವಿಜಯಪುರ ರಸ್ತೆಯಲ್ಲಿ ರೂ. 9 ಕೋ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಸವ ಭವನ ಕಾಮಗಾರಿ ಪರಿಶೀಲಿಸಿ ಪ್ರಶಂಸೆ ವ್ಯಕ್ತಪಡಿಸಿರು.
ನಂತರ ಇಂಗಳೇಶ್ವರ ರಸ್ತೆಯಲ್ಲಿ ಪುರಸಭೆಯಿಂದ ನಿರ್ಮಾಣವಾಗುತ್ತಿರುವ G+1 ಗುಂಪು ಮನೆಗಳ ಕಾಮಗಾರಿಯನ್ನು ವೀಕ್ಷಿಸಿ ಈ ಕಟ್ಟಡಗಳಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಅಲ್ಲದೇ, ಫಲಾನುಭವಿಗಳಿಂದ ಕೂಡಲೇ ಕಡ್ಡಾಯವಾಗಿ ವಂತಿಗೆ ವಸೂಲಿ ಮಾಡಲು ಮತ್ತು ವಂತಿಗೆ ತುಂಬಿದ ಫಲಾನುಭವಿಗಳಿಗೆ ಕೂಡಲೇ ಹಂಚಿಕೆ ಮಾಡಲು ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಪುರಸಭೆಯಿಂದ ಬಸವೇಶ್ವರ ವೃತ್ತದ ಹತ್ತಿರ ರೂ. 32. 73 ಕೋ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಮಾರುಕಟ್ಟೆ ಕಾಮಗಾರಿ ವೀಕ್ಷಿಸಿದ ಅವರು, ಈ ಕಾಮಗಾರಿಯ ಪ್ರಗತಿ ಕುರಿತು ಚರ್ಚಿಸಿ ಹಾಲಿ ಅನುಮೋದನೆಯಾಗಿರುವ ಪ್ರಕಾರ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲು ಅಭಿಯಂತರರಿಗೆ ಸೂಚಿಸಿದರು. ಸರಕಾರ ಹೆಚ್ಚುವರಿ ಅನುದಾನ ಮಂಜೂರು ಮಾಡಿದ ನಂತರ ಬಾಕಿ ಉಳಿದಿರುವ ಕಟ್ಟಡ ಕಾಮಗಾರಿ ಪ್ರಾರಂಭಿಸಬೇಕು ಎಂದು ಹೇಳಿದ ಅವರು, ಕೆಲವು ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಟಕ್ಕಳಕಿ ಗ್ರಾಮದ ಬಳಿ ಪಾಲಿಟೆಕ್ನಿಕ್ ಹಾಗೂ ತಾಂತ್ರಿಕ ಮಹಾವಿದ್ಯಾಲಯ ಕಟ್ಟಡ ಕಾಮಗಾರಿ ಪರಿಶೀಲಿಸಿ ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳ ಪ್ರವೇಶ ಪಡೆಯಲು ಸೂಚನೆ ನೀಡಿದರು.
ಮದ್ಯಾಹ್ನ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಸ್ಥಳೀಯ ಎಲ್ಲ ಬ್ಯಾಂಕ ವ್ಯವಸ್ಥಾಪಕರೊಂದಿಗೆ G+1 ಗುಂಪು ಮನೆಗಳ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಕುರಿತು ಸಭೆ ನಡೆಸಿ ಎಲ್ಲ ಬ್ಯಾಂಕುಗಳು ಕೂಡಲೇ ಸಾಲ ಮಂಜೂರು ಮಾಡಲು ಸೂಚಿಸಿದರು.